200 Evidence
ರೇಣುಕಾ ಸ್ವಾಮಿ ಕೊಲೆ ಪ್ರಕರಣ ದರ್ಶನ್ ತೂಗುದೀಪ ಹಾಗೂ ಸಂಗಡಿಗರಿಗೆ ದೊಡ್ಡ ಮಟ್ಟದಲ್ಲಿ ಮುಳುವಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಪ್ರಕರಣದ ತನಿಖೆ ವಹಿಸಿಕೊಂಡಿರುವ ಎಸಿಪಿ ಚಂದನ್, ತನಿಖೆಯಲ್ಲಿ ಯಾವುದೇ ಲೋಪ ಉಳಿಯದಂತೆ ಕೂಲಂಕುಶ ತನಿಖೆ ನಡೆಸುತ್ತಿದ್ದಾರೆ. ಚಾರ್ಜ್ ಶೀಟ್ ತಯಾರಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಸಾಧ್ಯವಾದಷ್ಟು ಸಾಕ್ಷ್ಯಗಳನ್ನು ಆರೋಪಿಗಳ ವಿರುದ್ಧವಾಗಿ ಕಲೆ ಹಾಕಿದ್ದಾರೆ, ಇನ್ನಷ್ಟು ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ.
ಈ ವರೆಗೆ ಪೊಲೀಸರು 200 ಕ್ಕೂ ಹೆಚ್ಚು ಭೌತಿಕ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಈ ಪ್ರಕರಣದಲ್ಲಿ ಕಲೆ ಹಾಕಿದ್ದಾರೆ. ಇದು ದಾಖಲೆ ಪ್ರಮಾಣದ ಸಾಕ್ಷ್ಯ ಎನ್ನಲಾಗುತ್ತಿದೆ. ಕೊಲೆ ಪ್ರಕರಣವೊಂದರಲ್ಲಿ ಇಷ್ಟೋಂದು ಸಾಕ್ಷ್ಯಗಳನ್ನು ಕಲೆ ಹಾಕಿರುವ ಪ್ರಕರಣಗಳು ಅಪರೂಪ ಎನ್ನಲಾಗುತ್ತಿದೆ. ಇನ್ನೂ ಸಹ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಕೊಲೆ ನಡೆದ ಸ್ಥಳ, ಶವ ಸಾಗಿಸಿದ ಸ್ಥಳ, ಕೊಲೆಗೆ ಬಳಸಲಾಗಿರುವ ವಸ್ತುಗಳ ಮೇಲೆ ದರ್ಶನ್, ಪವಿತ್ರಾ ಸೇರಿದಂತೆ 10 ಆರೋಪಿಗಳ ಬೆರಳು ಮುದ್ರೆಗಳಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಭೇಟಿಗೆ ಬಂದವರ ಬಳಿ ಅಭಿಮಾನಿಗಳ ಬಗ್ಗೆ ವಿಚಾರಿಸಿದ ದರ್ಶನ್
ದರ್ಶನ್ ಪ್ರಕರಣದಲ್ಲಿ ಸಾಕಷ್ಟು ಡಿಜಿಟಲ್ ಸಾಕ್ಷ್ಯಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆದರೆ ಡಿಜಿಟಲ್ ಸಾಕ್ಷ್ಯಗಳ ತನಿಖೆ ಸಮಯದಲ್ಲಿ ದರ್ಶನ್, ಪವಿತ್ರಾ ಹಾಗೂ ಕೆಲ ಆರೋಪಿಗಳು ಬೇರೆಯವರ ಹೆಸರಿನಲ್ಲಿರುವ ಸಿಮ್ ಕಾರ್ಡ್ ಗಳನ್ನು ಬಳಸುತ್ತಿರುವುದು ತಿಳಿದು ಬಂದಿದೆ. ದರ್ಶನ್, ಹೇಮಂತ್ ಸಿ ಎಂಬುವರ ಹೆಸರಿನಲ್ಲಿರುವ ಸಿಮ್ ಬಳಸಿದ್ದಾರೆ. ಇನ್ನು ಪವಿತ್ರಾ ಗೌಡ, ಬೆಂಗಳೂರಿನ ಮನೋಜ್ ಎಂಬುವರ ಹೆಸರಿನಲ್ಲಿರುವ ಸಿಮ್ ಬಳಸಿರುವುದು ತಿಳಿದು ಬಂದಿದೆ. ಮೊಬೈಲ್ ನಲ್ಲಿರುವ ಹಲವು ಡಾಟಾ ಗಳನ್ನು ಆರೋಪಿಗಳು ಅಳಿಸಿ ಹಾಕಿದ್ದು ಅವುಗಳನ್ನು ಸಹ ಪೊಲೀಸರು ರಿಟ್ರೀವ್ ಮಾಡಿದ್ದಾರೆ ಎನ್ನಲಾಗಿದೆ.
ಕೆಲ ಆರೋಪಿಗಳ ಬ್ಯಾಂಕ್ ಮಾಹಿತಿಯನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆರೋಪಿ ಪ್ರದೋಶ್ ಜೊತೆ ನಂಟು ಹೊಂದಿದ್ದ ಕಾರ್ತಿಕ್ ಪುರೋಹಿತ್ ಅನ್ನು ಕರದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ ದರ್ಶನ್ ಗೆ 40 ಲಕ್ಷ ಹಣ ನೀಡಿದ್ದ ಮಾಜಿ ಮೇಯರ್ ಒಬ್ಬರನ್ನು ಸಹ ಕರೆದು ವಿಚಾರಣೆ ನಡೆಸಲಾಗಿದೆ. ಆರೋಪಿಯೊಬ್ಬನಿಗೆ 23 ಸಾವಿರ ಹಣ ಕಳಿಸೊದ್ದ ಪವಿತ್ರಾ ಗೌಡ ಗೆಳತಿ ಸಮತಾ ಎಂಬುವರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ, ದರ್ಶನ್ ರ ಗೆಳತಿ ಪವಿತ್ರಾಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆಂಬ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ರಾಜರಾಜೇಶ್ವರಿ ನಗರದ ಬಳಿಯ ಪಟ್ಟಣಗೆರೆ ಶೆಡ್ ಗೆ ಕರೆದುಕೊಂಡು ಬಂದು ಹಲ್ಲೆ ಮಾಡಿ ಕೊಲ್ಲಲಾಗಿದೆ ಎಂಬ ಆರೋಪ ದರ್ಶನ್, ಪವಿತ್ರಾ ಗೌಡ ಹಾಗೂ ಇತರರ ಮೇಲಿದೆ. ಜೂನ್ 09 ರ ಮಧ್ಯ ರಾತ್ರಿ ರೇಣುಕಾ ಸ್ವಾಮಿ ಕೊಲೆ ಆಗಿತ್ತು, ಜೂನ್ 10 ರಂದು ರೇಣುಕಾ ಸ್ವಾಮಿ ಶವ ದೊರಕಿತು. ಜೂನ್ 11 ರಂದು ದರ್ಶನ್, ಪವಿತ್ರಾ ಹಾಗೂ ಇತರರನ್ನು ಪೊಲೊಇಸರು ಬಂಧಿಸಿದರು. ಜುಲೈ 18 ರ ವರೆಗೆ ದರ್ಶನ್ ಹಾಗೂ ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.