Women Safety
ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಕೆಲ ನಗರಗಳಲ್ಲಿ ಒಂದು. ಇಲ್ಲಿನ ಆರ್ಥಿಕ, ತಂತ್ರಜ್ಞಾನದ ಪ್ರಗತಿ ಅದ್ಭುತವಾದುದು. ಬೆಂಗಳೂರು ಬೆಳೆದಂತೆಲ್ಲ ಇಲ್ಲಿನ ಕ್ರೈಂ ರೇಟ್ ಸಹ ಏರಿಕೆ ಆಗುತ್ತಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆನ ವರದಿಯೊಂದರ ಪ್ರಕಾರ ಕಳೆದ 12 ವರ್ಷಗಳಲ್ಲಿ ಬೆಂಗಳೂರಿನಿಂದ 485 ಯುವತಿಯರು ನಾಪತ್ತೆಯಾಗಿದ್ದಾರೆ. ಆ ಯುವತಿಯರು ಎಲ್ಲಿ ಹೋದರು? ಪತ್ತೆಯಿಲ್ಲ.
ಕಳೆದ 12 ವರ್ಷಗಳಲ್ಲಿ ಯುವತಿಯರು ಕಾಣೆ ಆಗಿರುವ 485 ಪ್ರಕರಣಗಳು ಬಾಕಿ ಉಳಿದುಕೊಂಡಿವೆ. 19 ರಿಂದ 21 ವಯಸ್ಸಿನ 173 ಯುವತಿಯರು, 16 ವರ್ಷದ 162 ಯುವತಿಯರು, 17 ರಿಂದ 19 ವರ್ಷದ 92 ಯುವತಿಯರು, 22 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ 58 ಮಹಿಳೆಯರು ಕಾಣೆಯಾಗಿದ್ದು, ಇವರ ಪತ್ತೆ ಆಗಿಲ್ಲ. ಗಮನಸಿಬೇಕಾದ ಅಂಶವೆಂದರೆ ಹೀಗೆ ಕಾಣೆಯಾಗಿ, ಪತ್ತೆ ಆಗದೆ ಹೋದ ಬಹುತೇಕ ಯುವತಿಯರು ಬಡ ಕುಟುಂಬದವರು.
ಈ ಕುರಿತು ಡೆಕ್ಕನ್ ಹೆರಾಲ್ಡ್ ಜೊತೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಎಷ್ಟೋ ಬಾರಿ ಯುವತಿಯರು ನಾಪತ್ತೆಯಾದ ದೂರು ದಾಖಲಿಸುವ ಕುಟುಂಬದವರು ತನಿಖಾಧಿಕಾರಿಗಳಿಗೆ ಸಹಕರಿಸುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಇನ್ನು ಪ್ರೇಮ ಪ್ರಕರಣಗಳಲ್ಲಿ ಯುವತಿ ಮರಳಿ ಬಂದ ಮೇಲೆ ಪೊಲೀಸರಿಗೆ ಮಾಹಿತಿಯನ್ನೇ ನೀಡುವುದಿಲ್ಲ. ಎಷ್ಟೋ ಬಾರಿ ಯುವತಿ ನಾಪತ್ತೆಯಾದ ಬಳಿಕ ಸಾಮಾಜಿಕ ನಿಂದನೆಗೆ ಹೆದರಿ ದೂರು ದಾರರು ಊರು ಬಿಟ್ಟಿದ್ದೂ ಇದೆ’ ಎಂದಿದ್ದಾರೆ.
ಮಾನವ ಕಳ್ಳಸಾಗಣೆ ತಡೆ ಇಲಾಖೆಯಲ್ಲಿ ಕೆಲಸ ಮಾಡಿರುವ ಅಧಿಕಾರಿಯೊಬ್ಬರು ಹೇಳಿರುವಂತೆ, ’18-22 ವರ್ಷದ ಯುವತಿಯರು ಕಾಣೆಯಾದ ದೂರು ಬಂದ ಆರಂಭದಲ್ಲಿ ಪೊಲೀಸರು ತನಿಖೆ ನಿಧಾನ ಮಾಡುತ್ತಾರೆ. ಪ್ರೇಮ ಪ್ರಕರಣ ಆಗಿರಬಹುದು, ಮರಳಿ ಬರುತ್ತಾಳೆ ಎಂಬ ಕಾರಣಕ್ಕೆ ಪ್ರಕರಣ ತಡೆ ಮಾಡುತ್ತಾರೆ. ಆದರೆ ಆ ವೇಳೆಗಾಗಲೆ ಆ ಯುವತಿ ಗಡಿ ದಾಟಿ ಬಿಡುವ ಅಪಾಯವೂ ಇರುತ್ತದೆ. ನಾಪತ್ತೆಯಾದ ವ್ಯಕ್ತಿಗಳಿಗಾಗಿ ಪೊಲೀಸರು ರಾಜ್ಯ ಬಿಟ್ಟು ಹುಡುಕುವ ಸಾಹಸ ಮಾಡುವುದು ತುಸು ಕಡಿಮೆಯೇ’ ಎನ್ನುತ್ತಾರೆ ಅವರು.
Infosys: 32 ಸಾವಿರ ಕೋಟಿ ತೆರಿಗೆ ಬಾಕಿ, ಸರ್ಕಾರದ ವಿರುದ್ಧ ಹೋರಾಡಲಿದೆಯೇ ಇನ್ಫೋಸಿಸ್?
ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಮಿಸ್ಸಿಂಗ್ ಪ್ರಕರಣಗಳು ಬಹಳಷ್ಟು ಕಡಿಮೆ ಆಗಿವೆ ಎನ್ನುತ್ತಾರೆ ಪೊಲೀಸರು. ಸಿಸಿಟಿವಿ, ಮೊಬೈಲ್ ನೆಟ್ ವರ್ಕ್ ಟ್ರೇಸ್ ಇನ್ನಿತರೆ ತಂತ್ರಜ್ಞಾನಗಳಿಂದಾಗಿ ಕಳೆದ ವ್ಯಕ್ತಿಯನ್ನು ಹುಡುಕುವುದು ಹಿಂದಿಗಿಂತಲೂ ಹೆಚ್ಚು ಸುಲಭವಾಗಿದೆ. ಹಿಂದೆಲ್ಲ ದೊಡ್ಡ ಮಾಫಿಯಾ ಆಗಿದ್ದ ಮಾನವ ಕಳ್ಳಸಾಗಣೆ, ಗಡಿಗಳ ಭದ್ರತೆ ಹೆಚ್ಚಾದ ಬಳಿಕ ಕಡಿಮೆ ಆಗಿದೆ. ಸಿಸಿಬಿ ಮತ್ತು ಪೊಲೀಸ್ ಗುಪ್ತಚರ ಇಲಾಖೆಗೆ ಆ ರೀತಿಯ ಯಾವುದೇ ಪ್ರಕ್ರಿಯೆಗಳು ಇತ್ತೀಚೆಗಿನ ವರ್ಷಗಳಲ್ಲಿ ಕಂಡು ಬಂದಿಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.