Lok Sabha Election 2024
ನಾಳೆ ಅಂದರೆ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಸಹ ಸಿದ್ಧತೆಗಳನ್ನೆಲ್ಲ ಪೂರ್ಣಗೊಳಿಸಿದೆ. ಮತದಾನ ಮಾಡಲು ಉತ್ಸುಕರಾಗಿ ಹಲವರು ತಮ್ಮ ಮೂಲ ಸ್ಥಾನಗಳಿಗೆ ತೆರಳಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ನೂರಾರು ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಮತದಾರ ತನಗೆ ಮೀಸಲಾದ ಮತಗಟ್ಟೆಯಲ್ಲಿಯೇ ಮತ ಚಲಾಯಿಸಬೇಕಾಗಿರುತ್ತದೆ. ಆದರೆ ತನಗೆ ಮೀಸಲಾದ ಮತಗಟ್ಟೆ ಯಾವುದು? ಅದು ಎಲ್ಲಿದೆ ಎಂಬ ವಿವರ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.
ಚುನಾವಣಾ ಆಯೋಗದ https://voters.eci.gov.in/ ಗೆ ಭೇಟಿ ನೀಡಬೇಕು. ಅಲ್ಲಿ ಸರ್ವೀಸಸ್ (Services) ವಿಭಾಗದಲ್ಲಿ (Know Your Polling station and Officer) ‘ನಿಮ್ಮ ಮತಗಟ್ಟೆ ಹಾಗೂ ಅಧಿಕಾರಿಯ ಬಗ್ಗೆ ತಿಳಿಯಿರಿ’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಎಪಿಕ್ ಸಂಖ್ಯೆ ಅಂದರೆ ವೋಟರ್ ಐಡಿ (ಮತದಾರನ ಗುರುತಿನ ಚೀಟಿ) ಯ ಮೇಲಿರುವ ಹತ್ತು ಅಂಕೆಯ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಸರ್ಚ್ ಬಟನ್ ಒತ್ತಿದರೆ ನೀವು ಮತದಾನ ಮಾಡಬೇಕಾದ ಮತಗಟ್ಟೆ ವಿವರ ತೆರೆದುಕೊಳ್ಳುತ್ತದೆ. ಅದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ.
ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು
ಮತಗಟ್ಟೆ ಹುಡುಕುವ ಮತ್ತೊಂದು ಆಯ್ಕೆ ಎಂದರೆ ನಿಮ್ಮ ಎಪಿಕ್ ಅಥವಾ ಮತದಾರರ ಗುರುತಿನ ಚೀಟಿಯ ಮೇಲಿರುವ ಸಂಖ್ಯೆಯನ್ನು 1950 ಅಥವಾ 9211728082 ಗೆ ಮೆಸೇಜ್ ಮಾಡಿದರೆ ಚುನಾವಣಾ ಆಯೋಗವೇ ಮತಗಟ್ಟೆ ವಿವರವನ್ನು ಎಸ್ಎಂಎಸ್ ಕಳಿಸುತ್ತದೆ. ಮೊದಲಿಗೆ ಇಐಸಿ ಎಂದು ಇಂಗ್ಲೀಷ್ನಲ್ಲಿ ಟೈಪ್ ಮಾಡಿ ಆ ನಂತರ ಎಪಿಕ್ ಸಂಖ್ಯೆ ನಮೂದಿಸಿ ಸಂದೇಶ ಕಳಿಸಬೇಕಾಗಿರುತ್ತದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದು, ಆದರೆ ನೀವು ಮತದಾನ ಮಾಡುವ ಮುನ್ನವೇ ಬೇರೊಬ್ಬರು ನಿಮ್ಮ ಮತ ಚಲಾವಣೆ ಮಾಡಿಬಿಟ್ಟಿದ್ದರೆ ನೀವು ‘ಟೆಂಡರ್ ಮತ’ ಚಲಾವಣೆ ಮಾಡಬಹುದಾಗಿರುತ್ತದೆ. ಆ ಮತ ಚಲಾವಣೆಗೆ ಕೆಲವು ನಿಯಮಗಳು, ಷರತ್ತುಗಳು ಇವೆ. ಮತಗಟ್ಟೆ ಅಧಿಕಾರಿ, ವೀಕ್ಷಕರ ಅನುಮತಿ ಪಡೆದ ಮೇಲಷ್ಟೆ ಟೆಂಡರ್ ಮತ ಚಲಾವಣೆ ಮಾಡಬೇಕಾಗುತ್ತದೆ. ಒಂದು ಮತಗಟ್ಟೆಯಲ್ಲಿ 14% ಗಿಂತಲೂ ಹೆಚ್ಚು ಟೆಂಡರ್ ಮತ ಚಲಾವಣೆ ಆದರೆ ಆ ಮತಗಟ್ಟೆಯಲ್ಲಿ ಮರು ಮತದಾನ ಮಾಡಲಾಗುತ್ತದೆ.