Yash
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಕಳೆದ ತಿಂಗಳಷ್ಟೆ ಪ್ರಾರಂಭವಾಗಿದೆ. ಸಿನಿಮಾದ ಘೋಷಣೆಗೂ ಮುನ್ನವೇ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಇದಾಗಿದೆ. ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದೆ ಗುಟ್ಟಾಗಿ ಸಿನಿಮಾದ ಕಾರ್ಯಗಳಲ್ಲಿ ಯಶ್ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದಷ್ಟೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕರೀನಾ ಸಹ ಸಂದರ್ಶನವೊಂದರಲ್ಲಿ ದಕ್ಷಿಣದ ದೊಡ್ಡ ಸಿನಿಮಾದಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿದ್ದರು. ಆದರೆ ಈಗ ಮತ್ತೆ ನಾಯಕಿ ಬದಲಾಗಿದ್ದಾರೆ ಎನ್ನಲಾಗುತ್ತಿದೆ.
ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದಾಗಿ ನಟಿ ಕರೀನಾ ಕಪೂರ್ ‘ಟಾಕ್ಸಿಕ್’ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕರೀನಾ ಕಪೂರ್ ಸ್ಥಾನಕ್ಕೆ ದಕ್ಷಿಣ ಭಾರತದ ಸ್ಟಾರ್ ನಟಿಯನ್ನು ಆಯ್ಕೆ ಮಾಡಲಾಗಿದೆ. ತಮಿಳು ಚಿತ್ರರಂಗದ ಸ್ಟಾರ್ ನಟಿ ನಯನತಾರಾ ಅವರು ‘ಟಾಕ್ಸಿಕ್’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿ ಹರಿದಾಡುತ್ತಿದೆ.
ನಟಿ ಕರೀನಾ ಕಪೂರ್ ‘ಟಾಕ್ಸಿಕ್’ ಸಿನಿಮಾದ ನಾಯಕಿಯಾಗಿ ನಟಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ದೂರಾಗಿದ್ದಾರೆ. ಅದಾದ ಬಳಿಕ ‘ಟಾಕ್ಸಿಕ್’ ಸಿನಿಮಾದ ನಿರ್ದೆಶಕಿ ಗೀತು ಮೋಹನ್ದಾಸ್ ಅವರು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಯವರನ್ನು ನಾಯಕಿ ಪಾತ್ರಕ್ಕಾಗಿ ಸಂಪರ್ಕ ಮಾಡಿದ್ದಾರೆ. ಆದರೆ ಅವರೂ ಸಹ ಡೇಟ್ಸ್ ಸಮಸ್ಯೆಯಿಂದಾಗಿ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಅಂತಿಮವಾಗಿ ನಯನತಾರಾ ಅವರನ್ನು ಸಂಪರ್ಕಿಸಿದಾಗ ಕತೆ ಕೇಳಿ ಉತ್ಸುಕರಾದ ನಯನತಾರಾ ನಾಯಕಿಯಾಗಿ ನಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ತುಸು ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಹಾಗಾಗಿ ತೀರ ಯುವ ನಟಿಯರನ್ನು ನಾಯಕಿಯನ್ನಾಗಿ ಹಾಕಿಕೊಳ್ಳುವ ಬದಲಿಗೆ ತುಸು ಹಿರಿಯ ನಟಿಯರನ್ನೇ ಆರಿಸಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಸಿನಿಮಾದಲ್ಲಿ ಇಬ್ಬರು ನಟಿಯರು ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.
‘ಟಾಕ್ಸಿಕ್’ ಸಿನಿಮಾವು ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ಕುರಿತ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ಮಲಯಾಳಂನ ಜನಪ್ರಿಯ ನಿರ್ದೇಶಕಿ ಮತ್ತು ನಟಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ನವರು ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಯಶ್ ಸಹ ಈ ಸಿನಿಮಾದ ಸಹ ನಿರ್ಮಾಪಕ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಹಾಲಿವುಡ್ನ ಜನಪ್ರಿಯ ಆಕ್ಷನ್ ಕೊರಿಯಾಗ್ರಾಫರ್ ಕೆಲಸ ಮಾಡಲಿದ್ದಾರೆ. ಇನ್ನೂ ಕೆಲವು ವಿದೇಶಿ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.