DBoss
ಚಲನಚಿತ್ರ ನಟ ದರ್ಶನ್ ಅವರನ್ನು ಕೊಲೆ ಆರೋಪದಲ್ಲಿ ಮೈಸೂರಿನ ರ್ಯಾಡಿಸನ್ ಹೋಟೆಲ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಲಾ ಸ್ವಾಮಿ ಎಂಬಾತನ ಕೊಲೆಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಯಾರು ಈ ರೇಣುಕಾ ಸ್ವಾಮಿ? ದರ್ಶನ್ ಏಕೆ ಆತನ ಕೊಲೆ ಮಾಡಿಸಿದ? ಇಲ್ಲಿದೆ ಮಾಹಿತಿ.
ರೇಣುಕಾ ಸ್ವಾಮಿ ಚಿತ್ರದುರ್ಗದ ಯುವಕ. ಈತ ದರ್ಶನ್ ಅಭಿಮಾನಿಯಾಗಿದ್ದ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪದ್ಯದ ಬಗ್ಗೆ ಕಾಳಜಿ ಹೊಂದಿದ್ದ ರೇಣುಕಾ ಸ್ವಾಮಿ, ದರ್ಶನ್ ರ ಆಪ್ತೆ ಪವಿತ್ರಾ ಗೌಡ ಗೆ ಅವಾಚ್ಯವಾಗಿ ಸಂದೇಶ ಕಳುಹಿಸಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ದರ್ಶನ್ ತಮ್ಮ ಆಪ್ತರಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿದ್ದ.
ಜೂನ್ 8 ರಂದು ವಿನಯ್ ಎಂಬುವರಿಗೆ ಸೇರಿದ ಕಾಮಾಕ್ಷಿಪಾಳ್ಯದ ಶೆಡ್ ಒಂದರಲ್ಲಿ ಆತನನ್ನು ಕೂಡಿಹಾಕಿ ದರ್ಶನ್ ಸಹಚರರು ಹಾಗೂ ಸ್ವತ್ಹ ದರ್ಶನ್ ತೀವ್ರವಾಗಿ ಹಲ್ಲೆ ಮಾಡಿದ್ದರು. ಇದರಿಂದಾಗಿ ರೇಣುಕಾ ಸ್ವಾಮಿ ಅಲ್ಲೇ ಸತ್ತು ಬಿದ್ದಿದ್ದ. ಕೂಡಲೇ ದರ್ಶನ್ ರ ಆಪ್ತರು ರೇಣುಕಾ ಸ್ವಾಮಿ ಶವವನ್ನು ಮೋರಿಯ ಒಳಗೆ ಎಸೆದು ಪರಾರಿ ಆಗಿದ್ದರು. ಆದರೆ ಬೀದಿ ನಾಯಿಗಳು ಶವವನ್ನು ಹೊರಗೆ ಎಳೆದು ತಂದಿದ್ದವು. ಅದನ್ನು ಗಮನಿಸಿದ ಕೆಲವರು ಪೊಲೀಸರಿಗೆ ವರದಿ ನೀಡಿದ್ದರು.
ಶವ ಪತ್ತೆಯಾದ ದಿನವೇ ದರ್ಶನ್ ರ ನಾಲ್ವರು ಆಪ್ತರು ತಾವೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡರು. ಆದರೆ ನಿಜವಾದ ವಿಷಯ ಮರೆಸಿ, ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಹೇಳಿದ್ದರು. ಆದರೆ ಅವರ ವಿಚಾರಣೆ ನಡೆಸಿದ ಪೊಲೀಸರಿಗೆ ಅವರ ಹೇಳಿಕೆ ಮೇಲೆ ಅನುಮಾನ ಬಂದು ಹೆಚ್ಚಿನ ತನಿಖೆ ಮಾಡಿದಾಗ ದರ್ಶನ್ ಈ ಪ್ರಕರಣದಲ್ಲಿ ಪಾಲ್ಗೊಂಡಿರುವ ವಿಚಾರ ಗೊತ್ತಾಗಿದೆ.
ಸೋಮವಾರ ಸಂಜೆ ಮೈಸೂರಿಗೆ ತೆರಳಿದ ಪೊಲೀಸರು ರ್ಯಾಡಿಸನ್ ಹೋಟೆಲ್ ನಲ್ಲಿ ತಂಗಿದ್ದ ದರ್ಶನ್ ಅನ್ನು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಮಂದಿಯ ಬಂಧನವಾಗಿದ್ದು, ಅದರಲ್ಲಿ ಇನ್ನೂ ಒಬ್ಬ ನಟ, ಪ್ರಖ್ಯಾತ ಉದ್ಯಮಿಯ ಪುತ್ರನೂ ಇದ್ದಾನೆ ಎನ್ನಲಾಗುತ್ತಿದೆ.