Uttar Pradesh
ಉತ್ತರ ಪ್ರದೇಶದ ಹತ್ರಾಸ್ ನ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಿಂದ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಮಹಿಳೆಯರು ಮಕ್ಕಳ ಹೆಣಗಳು ಎಲ್ಲೆಂದರಲ್ಲಿ ಬಿದ್ದಿವೆ. ಸತ್ತವರ ಶವಗಳನ್ನು ಲಾರಿಯಲ್ಲಿ ತುಂಬಿ ಸಾಗಿಸಲಾಗುತ್ತಿದೆ. 150 ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಆದರೆ ಘಟನೆ ನಡೆದ ವೇಳೆ ಚಿಕಿತ್ಸೆ ನೀಡಲು ಇದ್ದಿದ್ದು ಕೇವಲ ಒಬ್ಬ ವೈದ್ಯ!
ಹತ್ರಾಸ್ ನ ಸಿಕಂದರಾರು ಎಂಬಲ್ಲಿ ನಾರಾಯಣ್ ಶಂಕರ್ ಅಲಿಯಾಸ್ ಬೋಲೆ ಬಾಬ ಸತ್ಸಂಗವನ್ನು ಆಯೋಜಿಸಿದ್ದರು. ಸತ್ಸಂಗಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು, ಕಾರ್ಯಕ್ರಮ ಮುಗಿಯುವ ವೇಳೆಗೆ ಹೆಚ್ಚು ಜನ ಹೊರ ಹೋಗಲು ಯತ್ನಿಸಿದ್ದರಿಂದ ಕಾಲ್ತುಳಿತ ಉಂಟಾಯ್ತು. ಈ ಕಾಲ್ತುಳಿದಿಂದ 100 ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಈ ನೂರು ಜನರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
https://samasthanews.com/which-bmw-vehicle-a-middle-class-or-higher-middle-class-family-can-afford/
ಈ ಭಾರಿ ದುರ್ಘಟನೆಗೆ ಪೊಲೀಸರು, ಜಿಲ್ಲಾಡಳಿತ ಮತ್ತು ಕಾರ್ಯಕ್ರಮದ ಆಯೋಜಕರೇ ಕಾರಣ ಎನ್ನಲಾಗುತ್ತಿದೆ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದಲೇ ಈ ಭೀಕರ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡ ತಾಯಂದಿರ ಗೋಳಾಟ ಮುಗಿಲು ಮುಟ್ಟಿದೆ.
ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಸಹ ಘಟನೆಗೆ ಸಂತಾಪ ಸೂಚಿಸಿದ್ದು, ಘಟನೆಗೆ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದಾರೆ.