Chikkaballapur
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದ ಕೆ ಸುಧಾಕರ್, ಚಿಕ್ಕಬಳ್ಳಾಪುರ ನಗರದಲ್ಲಿ ಇಂದು (ಜೂನ್ 08) ಸುದ್ದಿಗೋಷ್ಠಿ ನಡೆಸಿದ್ದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರಲ್ಲದೆ ರೈತರಿಗೆ ಸೇರಿದ ಎರಡು ರೂಪಾಯಿ ಮರಳಿ ಕೊಡದೇ ಇದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಕೊಚಿಮೂಲ್ (ಕೋಲಾರ-ಚಿಕ್ಕಬಳ್ಳಾಪುರ) ನಲ್ಲಿ ರೈತರಿಗೆ ನೀಡಲಾಗುತ್ತಿದ್ದ ಎರಡು ರೂಪಾಯಿ ಅನುದಾನದ ಹಣಕ್ಕೆ ರಾಜ್ಯ ಸರ್ಕಾರ ಕತ್ತರಿ ಹಾಕಿದ್ದು ಒಂದೊಮ್ಮೆ ಆ ಹಣವನ್ನು ಮರಳಿ ಬಿಡುಗಡೆ ಮಾಡದೇ ಇದ್ದ ಪಕ್ಷದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು ಎಂದು ಸುಧಾಕರ್ ಎಚ್ಚರಿಕೆ ನೀಡಿದರು.
ಸಂಸದರ ಅಭಿನಂಧನಾ ಸಮಾರಂಭದಲ್ಲಿ ಎಣ್ಣೆ ಹಂಚಿಕೆ, ಕುಡಿದು ತೇಲಾಡಿದ ‘ಮತದಾರ’
ನ್ಯಾಯಯುತವಾಗಿ ನೋಡಿದರೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರೈತರಿಗೆ ಹೆಚ್ಚುವರಿ ಹಣ ಕೊಡಬೇಕಿತ್ತು. ಆದರೆ ಈಗ ಕೊಡುತ್ತಿರುವ ಹಣದಲ್ಲಿ ಪ್ರತಿ ಲೀಟರ್ಗೆ ಎರಡು ರೂಪಾಯಿ ಕಡಿತ ಮಾಡಲಾಗಿದೆ. ಈಗಾಗಲೇ ಲೀಟರ್ಗೆ ಎರಡು ರೂಪಾಯಿ ಬೆಲೆ ಏರಿಕೆ ಮಾಡಲಾಗಿದೆ. ಅದರ ಮೇಲೆ ರೈತರಿಗೆ ಸಿಗಬೇಕಿರುವ ಎರಡು ರೂಪಾಯಿ ಕಡಿತ ಮಾಡಲಾಗಿದೆ. ಇದರಿಂದ ರೈತರಿಗೆ ತಲಾ ಒಂದು ಲೀಟರ್ ಮೇಲೆ ನಾಲ್ಕು ರೂಪಾಯಿ ನಷ್ಟವಾದಂತಾಗಿದೆ ಎಂದಿದ್ದಾರೆ ಸುಧಾಕರ್.
ಚಿಕ್ಕಬಳ್ಳಾಪುರ-ಕೋಲಾರ ಹಾಲು ಒಕ್ಕೂಟದಿಂದ ಪ್ರತಿದಿನ 12 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಬೆಲೆ ಏರಿಕೆ ಮತ್ತು ರೈತರಿಗೆ ನೀಡುತ್ತಿದ್ದ ಹಣದಲ್ಲಿ ಕಡಿತ ಮಾಡಿರುವ ಕಾರಣ ಈಗ ಸರ್ಕಾರಕ್ಕೆ ಪ್ರತಿದಿನ ಕೇವಲ ಕೊಚಿಮೂಲ್ ಒಂದರಿಂದಲೇ 48 ಲಕ್ಷ ರೂಪಾಯಿ ಹೆಚ್ಚುವರಿ ಲಾಭ ಆಗುತ್ತಿದೆ. ಆದರೆ ಇದನ್ನು ಸರ್ಕಾರ ರೈತರಿಗೆ ಹಂಚುತ್ತಿಲ್ಲ, ಒಂದೊಮ್ಮೆ ಸರ್ಕಾರ ಇದೇ ನೀತಿಯನ್ನು ಮುಂದುವರೆಸಿದರೆ ಕೋಲಾರ-ಚಿಕ್ಕಬಳ್ಳಾಪುರ ರೈತರು ಒಟ್ಟಾಗಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡಲಿದ್ದಾರೆ ಎಂದರು ಸುಧಾಕರ್.