Kannada anchor: ಜನಪ್ರಿಯ ನಟಿ, ನಿರೂಪಕಿ ಅಪರ್ಣಾ ನಿಧನ

0
200
Anchor Aparna passed away
ನಿರೂಪಕಿ ಅಪರ್ಣಾ

Kannada anchor

ಕನ್ನಡದ ಜನಪ್ರಿಯ ನಟಿ, ನಿರೂಪಕಿ ಅಪರ್ಣಾ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 51 ವರ್ಷ ವಯಸ್ಸಾಗಿತ್ತು. ಕನ್ನಡದ ಹಲವು ಸಿನಿಮಾ, ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದ್ದ ಅಪರ್ಣಾ ತಮ್ಮ ನಿರೂಪಣೆಯಿಂದ ಬಹಳ ಜನಪ್ರಿಯತೆ ಗಳಿಸಿದ್ದರು. ಇಂದು (ಜುಲೈ 11) ಅವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.

ಅಪರ್ಣಾ ಅವರು ಕಳೆದ ಕೆಲ ತಿಂಗಳುಗಳಿಂದಲೂ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದರು ಎನ್ನಲಾಗುತ್ತಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅಪರ್ಣಾ ಕೊನೆ ಉಸಿರೆಳೆದಿದ್ದಾರೆ. ಅವರ ಈ ಹಠಾತ್ ಕನ್ನಡ ಚಿತ್ರರಂಗ ಹಾಗೂ ಕನ್ನಡ ಟಿವಿ ಜಗತ್ತಿಗೆ ಮತ್ತು ಸಿನಿಮಾ ರಸಿಕರಿಗೆ ತೀವ್ರ ಆಘಾತ ತಂದಿದೆ.

1984 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ‘ಮಸಣದ ಹೂವು’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ನೀಡಿದ್ದರು. ಮೊದಲ ಸಿನಿಮಾ ದಲ್ಲಿಯೇ ಅಂಬರೀಶ್ ಅವರೊಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಸಿನಿಮಾಗಳಲ್ಲಿ ಖ್ಯಾತಿ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಆಗಷ್ಟೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಟಿವಿ ಅವರನ್ನು ಕೈ ಬೀಸಿ ಕರೆದಿತ್ತು.

ಜೈಲಿನಲ್ಲಿರುವ ದರ್ಶನ್ ಗೆ ಕಾಡುತ್ತಿದೆ ಅನಾರೋಗ್ಯ, ಈಗ ಕೈಗೆ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಸೆ

ಡಿಡಿ ಚಂದನದಲ್ಲಿ ನೂರಾರು ಕಾರ್ಯಕ್ರಮಗಳನ್ನು ಅಪರ್ಣಾ ನಡೆಸಿಕೊಟ್ಟಿದ್ದಾರೆ. ಅವರ ಅಸ್ಖಲಿತ ಭಾಷಾ ಪ್ರಯೋಗಕ್ಕೆ ಮರುಳಾಗದವರೇ ಇಲ್ಲ. ಚಂದನದ ‘ಆಸ್ತಾನ’ ನಿರೂಪಕಿ ಆಗಿಬಿಟ್ಟಿದ್ದರು ಅಪರ್ಣಾ. ಅವರ ಸುಂದರ ದನಿ, ಕನ್ನಡವನ್ನು ಉಚ್ಛಾರಣೆ ಮಾಡುತ್ತಿದ್ದ ರೀತಿಗೆ ಅವರಿಗೆ ನಿರೂಪಣೆಯ ಅವಕಾಶಗಳು ಒಂದರ ಮೇಲೊಂದು ಬರುತ್ತಲೇ ಇದ್ದವು. ಸರ್ಕಾರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಸಹ ನಿರೂಪಣೆ ಮಾಡಿದ್ದಾರೆ.

ಟಿವಿ ಮಾತ್ರವೇ ಅಲ್ಲದೆ ರೇಡಿಯೋನಲ್ಲಿಯೂ ಛಾಪು ಮೂಡಿಸಿದ್ದಾರೆ ಅಪರ್ಣಾ. ಆಕಾಶವಾಣಿ, ಎಫ್ ಎಂ ಗಳಲ್ಲಿಯೂ ರೇಡಿಯೋ ಜಾಕಿ ಆಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ನಮ್ಮ ಮೆಟ್ರೋನಲ್ಲಿ ಕೇಳಿ ಬರುವ ಕನ್ನಡದ ಸಂದೇಶಗಳು ಸಹ ಅಪರ್ಣಾ ದನಿಯಲ್ಲಿಯೇ ಇವೆ‌.

ಇವುಗಳ ಜೊತೆಗೆ ಅಪರ್ಣಾ ಟಿವಿ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ. ಮುಕ್ತ, ಮೊದಲ‌ ಮನೆ ಧಾರವಾಹಿಗಳಲ್ಲಿ ನಟಿಸಿದ್ದರು. ಕನ್ನಡ ಬಿಗ್ ಬಾಸ್ ನ ಮೊದಲ ಸೀಸನ್ ನಲ್ಲೂ ಅಪರ್ಣಾ ನಟಿಸಿದ್ದರು. ಸೃಜನ್ ಲೋಕೇಶ್ ನಿರ್ಮಿಸಿ, ನಿರೂಪಣೆ ಮಾಡಿದ್ದ ಮಜಾ ಟಾಕೀಸ್ ನ ಎರಡು ಭಾಗಗಳಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ನಟಿಸಿ ಜನರನ್ನು ನಗಿಸಿದ್ದರು. ಆದರೆ ಈಗ ಅಪರ್ಣಾ ಬಾರದ ಲೋಕಕ್ಕೆ ಹೋಗಿದ್ದಾರೆ.

LEAVE A REPLY

Please enter your comment!
Please enter your name here