Bengaluru Police
ಕಳ್ಳತನ, ದರೋಡೆಗಳಿಗಿಂತಲೂ ನೂರಾರು ಪಟ್ಟು ಹೆಚ್ಚು ಸೈಬರ್ ಅಪರಾಧಗಳು ದೇಶದೆಲ್ಲೆಡೆ ನಡೆಯುತ್ತಿವೆ. ಹುಬ್ಬಳ್ಳಿ-ಧಾರವಾಡ ನಗರದ ಜನ ಕೇವಲ ಆರು ತಿಂಗಳಲ್ಲಿ ಸೈಬರ್ ಕಳ್ಳರಿಂದಾಗಿ ಕಳೆದುಕೊಂಡಿರುವ ಒಟ್ಟು ಮೊತ್ತ 20 ಕೋಟಿ ರೂಪಾಯಿ! ಬೆಂಗಳೂರಿನಲ್ಲಿ ಈ ಮೊತ್ತ ನೂರು ಕೋಟಿಗೂ ದಾಟಿರುವ ಸಾಧ್ಯತೆ ಇದೆ. ಸೈಬರ್ ಕಳ್ಳರು ಅಥವಾ ಆನ್ಲೈನ್ ಕಳ್ಳರು ಹಣ ಲಪಟಾಯಿಸಲು ಹೊಸ-ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಆನ್ಲೈನ್ ವಂಚಕರಿಂದ ಹೇಗೆ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಪೊಲೀಸರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ.
ಇಂದು (ಜುಲೈ 14) ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರಿಗೆ ಸಭೆ ಕರೆಯಲಾಗಿತ್ತು, ಕಾರ್ಯಕ್ರಮದಲ್ಲಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್ ಅವರು ಮಾತನಾಡಿ, ಆನ್ಲೈನ್ ಸ್ಕ್ಯಾಮರ್ಗಳು ಯಾವ-ಯಾವ ರೀತಿಯ ಸ್ಕ್ಯಾಮ್ಗಳನ್ನು ಮಾಡುತ್ತಾರೆ. ಜನರಿಗೆ ಕರೆ ಮಾಡಿ ಏನೇನು ಸುಳ್ಳು ಹೇಳುತ್ತಾರೆ. ಇಂಥಹವರಿಂದ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ವಿವರಿಸಿದ್ದಾರೆ.
CM Siddaramaiah: ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
‘ಈಗೆಲ್ಲ ಸ್ಕ್ಯಾಮರ್ಗಳು ಬೇರೆ ಬೇರೆ ರೀತಿ ಕರೆ ಮಾಡಿ ಹಣ ಪೀಕಿಸುತ್ತಿದ್ದಾರೆ. ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ ಅದರಲ್ಲಿ ಮಾದಕ ವಸ್ತು ಇದೆ. ನೀವು ಹಣ ಕೊಡದೇ ಇದ್ದರೆ ನಿಮ್ಮ ಮನೆ ಮೇಲೆ ದಾಳಿ ಮಾಡುತ್ತೇವೆ ಎಂದೆಲ್ಲ ಹೆದರಿಸಿ ಹಣ ಕೀಳುತ್ತಾರೆ. ಮೊಬೈಲ್ಗೆ ಕೆಲವು ಲಿಂಕ್ ಕಳಿಸಿ ಇದು ಸಾಲ ಕೊಡುವ ಲಿಂಕ್ ಇದರ ಮೇಲೆ ಕ್ಲಿಕ್ ಮಾಡಿ ಸಾಲ ಪಡೆಯಿರಿ ಎನ್ನುತ್ತಾರೆ ಆದರೆ ಅದನ್ನು ಕ್ಲಿಕ್ ಮಾಡಿದರೆ ಖಾತೆಯಲ್ಲಿರುವ ಹಣ ಖಾಲಿ ಆಗುತ್ತದೆ’ ಎಂದಿದ್ದಾರೆ. ಅಲ್ಲದೆ, ಯಾವುದೇ ವ್ಯಕ್ತಿ ಕರೆ ಮಾಡಿ ಒಟಿಪಿ ಕೇಳಿದರೆ, ಕಾರ್ಡ್ ಮೇಲಿನ ನಂಬರ್ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ’ ಎಂದಿದ್ದಾರೆ.
ನಿಮ್ಮ ಫೋಟೊಗಳನ್ನು ಬಳಸಿಕೊಂಡು ಅವನ್ನು ಅಶ್ಲೀಲಗೊಳಿಸಿ ಅವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸುತ್ತಾರೆ. ಮದುವೆಗೆ ಹೆಣ್ಣು ಕೊಡಿಸುವುದಾಗಿ ಹೇಳಿ ಅಡ್ವಾನ್ಸ್ ಆಗಿ ಹಣ ಹಾಕಿಸಿಕೊಳ್ಳುತ್ತಾರೆ. ಈ ರೀತಿಯ ಘಟನೆಗಳು ಆದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ನಾವುಗಳು ಕೂಡಲೇ ಬೆದರಿಕೆ ಹಾಕುತ್ತಿರುವ ವ್ಯಕ್ತಿಯ ಖಾತೆಯನ್ನು ಬ್ಲಾಕ್ ಮಾಡುವ ತಂತ್ರಜ್ಞಾನ ನಮ್ಮ ಬಳಿ ಇದೆ. ಯಾವುದೇ ಅಪರಿಚತರು ಕರೆ ಮಾಡಿ ಅನುಮಾನಕ್ಕೆ ಎಡೆ ಮಾಡುವ ರೀತಿ ಮಾತುಕತೆ ಆಡಿದರೆ ಕೂಡಲೇ ಪೊಲೀಸರನ್ನು ಸಂಪರ್ಕ ಮಾಡಿ.
‘ಮೊಬೈಲ್ಗಳಿಗೆ ನಮ್ಮ ಇಡೀ ಜಾತಕ ಗೊತ್ತಿರುತ್ತದೆ. ನಾವು ಎಲ್ಲಿ ಹೋಗುತ್ತಿದ್ದೇವೆ, ನಾವು ಯಾರೊಂದಿಗೆ, ಏನು ಮಾತನಾಡುತ್ತಿದ್ದೇವೆ. ನಮ್ಮ ಬಳಿ ಎಷ್ಟು ಹಣ ಇದೆ, ಯಾರಿಗೆ ಹಣ ಕಳಿಸಿದ್ದೇವೆ, ನಮ್ಮ ಸಂಪೂರ್ಣ ಇಷ್ಟ-ಕಷ್ಟಗಳು ನಮ್ಮ ಮೊಬೈಲ್ಗೆ ತಿಳಿದಿದೆ. ಅದು ಆ ಮಾಹಿತಿಯನ್ನು ಯಾರಿಗಾದರೂ ಮಾರಿಕೊಂಡರೆ ನಮ್ಮ ಖಾಸಗಿತನವೇ ಹೊರಟು ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಸೈದುಲು ಅದಾವತ್.