Bengaluru Hotel
ಬೆಂಗಳೂರಿನ ಜನಪ್ರಿಯ ರಾಮೇಶ್ವರಮ್ ಕೆಫೆ ಗೊತ್ತಲ್ಲವೆ. ಅಂಗೈ ಅಗಲದ ಮಸಾಲೆ ದೋಸೆಗೆ ಅವರು ಪಡೆಯುವ ಬೆಲೆ 180 ರೂಪಾಯಿ. ಬೆಂಗಳೂರಿನಲ್ಲಿ ಮಸಾಲೆ ದೋಸೆಗೆ ಜನಪ್ರಿಯವಾಗಿರುವ ವಿದ್ಯಾರ್ಥಿ ಭವನದಲ್ಲಿ ಒಂದು ಮಸಾಲೆ ದೋಸೆ ಬೆಲೆ 80 ರಿಂದ ನೂರು, ಮತ್ತೊಂದು ಪ್ರಸಿದ್ಧ ಹೋಟೆಲ್ ಸಿಟಿಆರ್ ನಲ್ಲಿಯೂ ಬಹುತೇಕ ಇಷ್ಟೆ ಬೆಲೆ ಇದೆ. ಬೆಂಗಳೂರಿನ ಸಾಧಾರಣ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬ ಹೊಟ್ಟೆ ತುಂಬ ಊಟ ಮಾಡಲು ಕನಿಷ್ಟ 200 ರೂಪಾಯಿ ಹಣ ಬೇಕಾಗುತ್ತದೆ. ಇಂಥಹಾ ಬೆಲೆ ಏರಿಕೆ ದಿನಗಳಲ್ಲಿಯೂ ಬೆಂಗಳೂರಿನ ಹೋಟೆಲ್ ಒಂದು ಅತ್ಯಂತ ಕೆಡಿಮೆ ಬೆಲೆಗೆ ಗ್ರಾಹಕರಿಗೆ ಊಟ ಉಣಬಡಿಸುತ್ತಿದೆ.
ಜಯನಗರದ ತಾಜಾ ತಿಂಡಿ ಇಂದಿಗೂ ಸಹ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಶುಚಿಯಾಗಿ ಆಹಾರ ಉಣಬಡಿಸುತ್ತಿದೆ. ಇಲ್ಲಿ ಇಡ್ಲಿಗೆ 12 ರೂಪಾಯಿ ಬೆಲೆಯಾದರೆ, ಮಸಾಲೆ ದೋಸೆಗೆ ಕೇವಲ 35 ರೂಪಾಯಿ. ಇತ್ತೀಚೆಗಷ್ಟೆ ಮಹಿಳೆಯೊಬ್ಬರು ಈ ಹೋಟೆಲ್ ನ ಮೆನ್ಯು ಹಾಗೂ ಅದಕ್ಕೆ ನಿಗದಿಪಡಿಸಿರುವ ಬೆಲೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಬೆಂಗಳೂರಿನಲ್ಲಿ ಇಷ್ಟು ಕಡಿಮೆ ಹಣಕ್ಕೆ ಇಡ್ಲಿ, ದೋಸೆ ಮಾರುತ್ತಿರುವುದು ಕಂಡು ಜನ ಭೇಷ್ ಎಂದಿದ್ದಾರೆ. ಹೆಚ್ಚು-ಹೆಚ್ಚು ಜನ ಹೋಟೆಲ್ ಗೆ ಭೇಟಿ ನೀಡುವ ಮೂಲಕ ಅಚರ ವ್ಯಾಪಾರ ವೃದ್ಧಿಗೆ ಸಹಕರಿಸಬೇಕು ಎಂದಿದ್ದಾರೆ. ದುಬಾರಿ ಬೆಲೆಗೆ ದೋಸೆ, ಇಡ್ಲಿ ಮಾರುತ್ತಿರುವ ಇತರೆ ಜನಪ್ರಿಯ ಹೋಟೆಲ್ ಗಳ ಮೇಲೆ ಅಸಮಾಧಾನವನ್ನೂ ಹೊರ ಹಾಕಿದ್ದಾರೆ.
ತಾಜಾ ತಿಂಡಿಯಲ್ಲಿ ಬಹುತೇಕ ಎಲ್ಲ ಖಾದ್ಯಗಳ ಬೆಲೆಯೂ ಅತ್ಯಂತ ಕಡಿಮೆಯಾಗಿದೆ. ಇಲ್ಲಿ ವಡೆಯ ಬೆಲೆ 15 ರೂಪಾಯಿ, ಕೇಸರಿ ಬಾತಿಗೆ 15, ಖಾರಾಬಾತಿಗೆ 15 ರೂಪಾಯಿ, ಎರಡನ್ನೂ ಸೆರಿಸಿದ ಚೌ ಚೌ ಬಾತಿಗೆ 25 ರೂಪಾಯಿ ಬೆಲೆ ಇದೆ. ಕಾಫಿ-ಟೀ ಗಳ ಬೆಲೆಯೂ ಸಹ ರಸ್ತೆ ಬದಿಯ ಗೂಡಂಗಡಿಗಿಂತಲೂ ಕಡಿಮೆ ಇದೆ. ಎರಡಕ್ಕೂ ಕೇವಲ ಹತ್ತು ರೂಪಾಯಿಯಷ್ಟೆ ಬೆಲೆ. ಆದರೆ ಎಲ್ಲ ತಿಂಡಿಗಳನ್ನು, ರುಚಿಯಾಗಿ, ಶುಚಿಯಾಗಿ ಗ್ರಾಹಕರಿಗೆ ಸರ್ವ್ ಮಾಡುತ್ತಾ ಬರುತ್ತಿದೆ ತಾಜಾ ತಿಂಡಿ.
Bengaluru: ಬಾಡಿಗೆ ತಗ್ಗಿಸುತ್ತಿದ್ದಾರೆ ಬೆಂಗಳೂರಿನ ಮನೆ ಮಾಲೀಕರು, ಕಾರಣವೇನು?
ಶಾಹಿಲಿ ಟೋಟಲಿ ಎಂಬುವರು ಇತ್ತೀಚೆಗೆ ತಾಜಾ ತಿಂಡಿ ಹೋಟೆಲ್ ನ ಬೆಲೆಯ ಪಟ್ಟಿಯನ್ನು ಹಂಚಿಕೊಂಡಿದ್ದರು. ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಬೇರೆ ಬೇರೆ ನಗರಗಳಲ್ಲಿ ಇಡ್ಲಿ, ದೋಸೆಗೆ ತಾವು ಎಷ್ಟು ಹಣ ಕೊಟ್ಟಿದ್ದೇವೆಂದು ಪಟ್ಟಿ ಮಾಡಿದ್ದಾರೆ. ಮುಂಬೈನಲ್ಲಿ ಮಸಾಲೆ ದೋಸೆಗೆ ಕನಿಷ್ಟ 150 ರೂಪಾಯಿ ತೆಗೆದುಕೊಳ್ಳುತ್ತಾರೆಂದು ಒಬ್ಬರು ದೂರಿದ್ದರೆ, ಇನ್ನೊಬ್ಬರು ಗೋವಾ, ನವ ದೆಹಲಿಯಲ್ಲಿ 200 ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇನ್ನೊಬ್ಬ ಅನಿವಾಸಿ ಭಾರತೀಯ ತಾವು 12 ಡಾಲರ್ (1020 ರೂಪಾಯಿ) ಕೊಟ್ಟು ವಿದೇಶದಲ್ಲಿ ಇಡ್ಲಿ ತಿಂದಿರುವುದಾಗಿ ಹೇಳಿಕೊಂಡಿದ್ದಾರೆ.
ಒಟ್ಟಾರೆ ಜಯನಗರದ ತಾಜಾ ತಿಂಡಿ ಬೆಂಗಳೂರಿನ ಇತರೆ ಹೋಟೆಲ್ ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ಶುಚಿಯಾದ ಆಹಾರ ಸರ್ವ್ ಮಾಡುತ್ತಿದೆ. ದೋಸೆಯ ಹೆಸರಲ್ಲಿ ತುಪ್ಪ ಸುರಿಯುವ ರಾಮೇಶ್ವರಂ ಕೆಫೆ, ಹಳೆ ವೈಭವದ ಮೇಲೆ ಇಂದಿಗೂ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿ ಭವನ, ಸಿಟಿಆರ್ ಗೆ ಹೋಲಿಸಿದರೆ ತಾಜಾ ತಿಂಡಿ ಉತ್ತಮ ಎನ್ನಬಹುದೇನೊ, ಅಂದಹಾಗೆ ತಾಜಾ ತಿಂಡಿ ಜಯನಗರದ, 26ನೇ ಮೇಲ್, 4 ಟಿ ಬ್ಲಾಕ್ ನಲ್ಲಿದೆ.