Karnataka Government: ಕರ್ನಾಟಕದಲ್ಲಿ ಹೆಣ ಹೂಳಲು ಸಹ ಜಾಗವಿಲ್ಲ! ಇದು ನಿಜ, ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆ ಕಲಾಪದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ಹೇಳಿದ ಮಾತಿದು. ಕರ್ನಾಟಕ ಸರ್ಕಾರದ ಬಳಿ ಸ್ಮಶಾಣಗಳನ್ನು ನಿರ್ಮಿಸಲು ಸಹ ಜಾಗಗಳಿಲ್ಲ. ಸ್ಮಶಾನ ನಿರ್ಮಾಣಕ್ಕಾಗಿಯೇ ಪ್ರತಿವರ್ಷ ನೂರಾರು ಕೋಟಿ ಹಣ ಕೊಟ್ಟು ಹಲವು ಕಡೆಗಳಲ್ಲಿ ಹೊಸ ಜಾಗಗಳನ್ನು ಸರ್ಕಾರ ಖರೀದಿ ಮಾಡುತ್ತಿದೆ.
ಹರಿಹರ ಬಿಜೆಪಿ ಶಾಸಕ ಹರೀಷ್, ತಮ್ಮ ಕ್ಷೇತ್ರದಲ್ಲಿ ಸ್ಮಶಾನ ನಿರ್ಮಿಸಲು ಹೆಚ್ಚು ಜಾಗ ನೀಡುವಂತೆ ಕೇಳಿದಾಗ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ‘ರಾಜ್ಯದಲ್ಲಿ ಸ್ಮಶಾನ ನಿರ್ಮಾಣ ಮಾಡಲು ಜಾಗಗಳಿಲ್ಲ. ಸರ್ಕಾರವು ಸ್ಮಶಾನ ನಿರ್ಮಿಸಲು ಜಾಗ ಖರೀದಿಗೆ ಕಳೆದ ವರ್ಷ 50 ಕೋಟಿ ರೂಪಾಯಿ ಖರ್ಚು ಮಾಡಿದೆ. ಹಲವು ಸ್ಥಳಗಳ ಮೇಲೆ ಪ್ರಕರಣ ದಾಖಲಾಗಿದ್ದು, ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ’ ಎಂದಿದ್ದಾರೆ.
‘ಸ್ಮಶಾನ ನಿರ್ಮಾಣ ಮಾಡಲು ಮಾತ್ರವೇ ಅಲ್ಲ. ಮಕ್ಕಳಿಗೆ ಮೈದಾನ ನಿರ್ಮಿಸಲು, ಸ್ಕೂಲು, ಆಸ್ಪತ್ರೆ ನಿರ್ಮಾಣಕ್ಕೂ ಸಹ ಸ್ಥಳಗಳಿಲ್ಲ. ಅಂಗಡನಾಡಿ ನಿರ್ಮಾಣಕ್ಕೆ 12 ಸಾವಿರ ಅರ್ಜಿಗಳು ಸರ್ಕಾರಕ್ಕೆ ಬಂದಿವೆ. ಆದರೆ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ ಏಕೆಂದರೆ ಸ್ಥಳದ ಅಭಾವ ಇದೆ. ನಾವು ಅದೆಷ್ಟು ಜಮೀನನ್ನು ಗ್ರಾಂಟ್ ಮಾಡಿಬಿಟ್ಟಿದ್ದೀವೆಂದರೆ ನಾವು ಈಗ ಜಮೀನನ್ನು ಖರೀದಿ ಮಾಡಬೇಕಾಗಿ ಬಂದಿದೆ’ ಎಂದಿದ್ದಾರೆ.
CM Siddaramaiah: ನೆರೆ ಹಾವಳಿ ವೀಕ್ಷಣೆಗೆ ಸಿದ್ದರಾಮಯ್ಯ, ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
ಇದೇ ಚರ್ಚೆಯಲ್ಲಿ ಭಾಗಿಯಾದ ಬಿಜೆಪಿ ಮುಖಂಡ, ಶಾಸಕ ಅರವಿಂದ್ ಬೆಲ್ಲದ, ‘ಇದಕ್ಕೆಲ್ಲ ಮೂಲ ಕಾರಣವೆಂದರೆ ನಗರದ ಯೋಜನೆ ಮಾಡುವಾಗ ಆಟದ ಮೈದಾನ ಮತ್ತು ಸ್ಮಶಾನಗಳಿಗೆ ನಾವು ಸ್ಥಳ ಗುರುತಿಸಿಲ್ಲ. ಇದೇ ಕಾರಣಕ್ಕೆ ಈಗ ಸ್ಥಳದ ಅಭಾವ ಕಾಡುತ್ತಿದೆ’ ಎಂದರು. ಇನ್ನು ಮುಂದೆಯಾದರೂ ಯೋಜನೆಗಳಲ್ಲಿ ಆಟದ ಮೈದಾನ ಹಾಗೂ ಸ್ಮಶಾನದ ಜಾಗಗಳನ್ನು ಗುರುತಿಸಬೇಕು ಎಂದರು.
ಸರ್ಕಾರದ ಬಳಿ ಈ ಎಷ್ಟು ಜಮೀನು ಇದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕೃಷ್ಣಬೈರೇಗೌಡ, ‘ಸರ್ಕಾರವು ತನ್ನ ಆಸ್ತಿಯ ಬಗ್ಗೆ ದಾಖಲೆಗಳನ್ನು ನವೀಕರಣ ಮಾಡಿದೆ. ಎಲ್ಲ ಆಸ್ತಿಗಳ ಡಿಜಿಟಲ್ ಮ್ಯಾಪಿಂಗ್ ಮಾಡಲಾಗಿದೆ. ಸರ್ಕಾರದ ಬಳಿ ಈಗ 14.5 ಲಕ್ಷ ಎಕರೆ ಸ್ಥಳವಿದೆ. ಅಪ್ಲಿಕೇಶನ್ ಒಂದನ್ನು ಸರ್ಕಾರ ಸಿದ್ಧಪಡಿಸಿದ್ದು, ಸರ್ಕಾರದ ಎಲ್ಲ ಜಮೀನಿನ ಮಾಹಿತಿಯನ್ನು ನಕ್ಷೆಯ ಸಮೇತ ಡಿಜಿಟಲೀಕರಣಗೊಳಿಸಿ ಆಪ್ಗೆ ಸೇರಿಸಲಾಗಿದೆ. ನಗರ, ಗ್ರಾಮ ಸೇರಿದಂತೆ ಎಲ್ಲಿಯಾದರೂ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೆ ಕೂಡಲೇ ಅದನ್ನು ಗುರುತಿಸಿ ಒತ್ತುವರಿ ತೆರವುಗೊಳಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಸ್ಮಶಾನದ ಜಾಗ ಹಾಗೂ ಕೆರೆ ಜಾಗದ ಒತ್ತುವರಿಯನ್ನೂ ಸಹ ಗುರುತಿಸಿ ತೆರವುಗೊಳಿಸುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.