Valmiki Corruption Case
ರಾಜ್ಯದಲ್ಲಿ ಎರಡು ಹಗರಣ ಸದ್ಯಕ್ಕೆ ಜೋರಾಗಿ ಸದ್ದು ಮಾಡುತ್ತಿದೆ. ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣ. ಮುಡಾ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ವಾಲ್ಮೀಕಿ ಹಗರಣ ಸರ್ಕಾರಕ್ಕೆ ಉರುಳಾಗಿ ಪರಿಣಮಿಸಿದ್ದು, ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಕೆಲವರ ಬಂಧನ ಆಗಿದೆ. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಒಂದು ಸಿಕ್ಕಿದ್ದು ತನಿಖಾಧಿಕಾರಿಗಳ ವಿರುದ್ಧವೇ FIR ದಾಖಲಾಗಿದೆ. ಜೊತೆಗೆ ಈ ತನಿಖೆಯ ಹಿಂದೆ ರಾಜಕೀಯದ ಪಿತೂರಿ ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.
187 ಕೋಟಿಯ ವಾಲ್ಮೀಕಿ ಹಗರಣದ ತನಿಖೆಯನ್ನು ಕೇಂದ್ರದ ಅಧೀನದಲ್ಲಿರುವ ಜಾರಿನಿರ್ದೇಶನಾಲಯ (ಇಡಿ) ಮಾಡುತ್ತಿದೆ. ಇದೀಗ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಾಲ್ಮೀಕಿ ಹಗರಣದ ತನಿಖೆ ಮಾಡುತ್ತಿರುವ ಇಡಿ ಅಧಿಕಾರಿಗಳು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಹಣಕಾಸು ಇಲಾಖೆಯನ್ನು ಸಿಲುಕಿಸುವಂತೆ ಹೇಳಿಕೆ ನೀಡುವಂತೆ ಒತ್ತಾಯ ಹೇರುತ್ತಿದ್ದಾರೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ದೂರು ನೀಡಿದ್ದಾರೆ. ಇಡಿ ಅಧಿಕಾರಿಗಳಾದ ಮಿತ್ತಲ್ ಮತ್ತು ಮುರಳಿ ಕಣ್ಣನ್ ವಿರುದ್ಧ ಈ ದೂರು ದಾಖಲಾಗಿದ್ದು, ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಭಂಗಕ್ಕೆ ಯತ್ನ ಆರೋಪದಡಿ FIR ದಾಖಲಿಸಿಕೊಳ್ಳಲಾಗಿದೆ.
ಕಲ್ಲೇಶ್ ನೀಡಿರುವ ದೂರಿನಂತೆ ಜುಲೈ 17 ರಂದು ಇಡಿ ಅಧಿಕಾರಿಗಳು ಅವರ ವಿಚಾರಣೆ ನಡೆಸಿದರು. ಒಟ್ಟು 17 ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಕೇಳಿದರು. ಆ ಎಲ್ಲ ಪ್ರಶ್ನೆಗಳಿಗೆ ಕೂಡಲೆ ಅವರು ಉತ್ತರ ನೀಡಿದರು. ಆದರೆ ಇಡಿ ಅಧಿಕಾರಿಗಳಲ್ಲಿ ಒಬ್ಬರಾದ ಕಣ್ಣನ್ ಅವರು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ಮನವಿ ಮಾಡಿದರಂತೆ. ಆ ಬಳಿಕ ಇನ್ನೊಬ್ಬ ಅಧಿಕಾರಿ ಮಿತ್ತಲ್, ಇಡಿಯ ಬೆಂಬಲ ಬೇಕಾದರೆ ಸಿಎಂ ಸಿದ್ದರಾಮಯ್ಯ, ನಾಗೇಂದ್ರ ಹೆಸರು ಹೇಳು ಎಂದು ಬೆದರಿಕೆ ಹಾಕಿದರು ಎಂದು ಕಲ್ಲೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
CM Siddaramaiah: ನೆರೆ ಹಾವಳಿ ವೀಕ್ಷಣೆಗೆ ಸಿದ್ದರಾಮಯ್ಯ, ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭಾರಿ ಅಕ್ರಮ ನಡೆದಿದ್ದು ಸುಮಾರು 88 ಕೋಟಿ ರೂಪಾಯಿ ಹಣವನ್ನು ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್ ಅವರನ್ನು ಇಡಿ ಈಗಾಗಲೇ ವಶಕ್ಕೆ ಪಡೆದಿದೆ.