Manu Bhaker
ವಿಶ್ವದ ಅತ್ಯಂತ ದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್ ಪ್ಯಾರಿಸ್ನಲ್ಲಿ ಪ್ರಾರಂಭವಾಗಿ ಕೆಲ ದಿನಗಳಾಗಿವೆ. ಒಂದೊಂದಾಗಿ ಆಟಗಾರು ಪ್ರಾರಂಭವಾಗುತ್ತಿವೆ. ಭಾರತ ದೇಶದ 117 ಅಥ್ಲೀಟ್ಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೆಲವು ಅಥ್ಲೀಟ್ಗಳ ಆಟ ಪ್ರಾರಂಭವಾಗಿದೆ. ಕೆಲವು ಆಟಗಾರರ ಆಟಗಳು ಇನ್ನಷ್ಟೆ ಪ್ರಾರಂಭವಾಗಬೇಕಿದೆ. ನೀರಜ್ ಚೋಪ್ರಾ, ಪಿವಿ ಸಿಂಧು ಸೇರಿದಂತೆ ಇನ್ನು ಕೆಲವು ಆಟಗಾರರ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದರ ನಡುವೆ ಒಲಿಂಪಿಕ್ಸ್ನ ಆರಂಭದಲ್ಲಿಯೇ ಭಾರತ ಪದಕದ ಖಾತೆ ತರೆದಿದ್ದು, ಭಾರತದ ಪರವಾಗಿ ಮನು ಭಾಕೆರ್ ಮೊದಲ ಪದಕ ಗೆದ್ದಿದ್ದಾರೆ.
22 ವರ್ಷದ ಮನು ಭಾಕೆರ್ ಪ್ಯಾರಿಸ್ ಒಲಿಂಪಿಕ್ಸ್ನ 10 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 2024ರ ಒಲಿಂಪಿಕ್ಸ್ನ ಭಾರತದ ಮೊದಲ ಪದಕ ಎಂಬುದಲ್ಲದೆ ಶೂಟಿಂಗ್ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಎರಡನೇ ರೌಂಡ್ ಮುಗಿದಾಗ ಭಾಕೆರ್ ಹೆಚ್ಚು ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿದ್ದರು. ಆದರೆ ಅದಾದ ಮೇಲೆ ಮೂರನೇ ರೌಂಡ್ನಲ್ಲಿ ಅವರು ಏಕಾಗ್ರತೆ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಇಳಿದರು. ಆದರೂ ಅವರ ಸಾಧನೆ ಕಡಿಮೆ ಏನಿಲ್ಲ.
ಅಂದಹಾಗೆ ಮನು ಭಾಕೆರ್ ಹರಿಯಾಣ ರಾಜ್ಯದವರು. ಹರಿಯಾಣದಿಂದ ಭಾರತಕ್ಕೆ ಹಲವು ಅಥ್ಲೀಟ್ಗಳು ಬಂದಿದ್ದಾರೆ ಆದರೆ ಬಹುತೇಕರು ಕುಸ್ತಿ, ಬಾಕ್ಸಿಂಗ್ ಮತ್ತು ವೇಟ್ಲಿಫ್ಟರ್ಗಳು ಆದರೆ ಮನು ಭಾಕೆರ್ ತಮ್ಮ ರಾಜ್ಯದ ಇತರ ಅಥ್ಲೀಟ್ಗಳಿಗಿಂತಲೂ ಭಿನ್ನವಾದ ಆಟ ಆಯ್ದುಕೊಂಡರು ಅದುವೇ ಶೂಟಿಂಗ್. ಆದರೆ ಮನು ಭಾಕೆರ್ ಶೂಟಿಂಗ್ ಅನ್ನು ವೃತ್ತಿಪರ ಕ್ರೀಡೆಯಾಗಿ ಆಯ್ಕೆ ಮಾಡಿಕೊಳ್ಳುವ ಮುಂಚೆ ಟೆನ್ನಿಸ್, ಸ್ಕೇಟಿಂಗ್ ಮತ್ತು ಬಾಕ್ಸಿಂಗ್ಗಳನ್ನು ಆಡಿದ್ದರು. ಈ ಮೂರು ಕ್ರೀಡೆಯಲ್ಲಿ ಜಿಲ್ಲೆ, ರಾಜ್ಯಗಳನ್ನು ಅವರು ಪ್ರತಿನಿಧಿಸಿದ್ದಾರೆ. ಆದರೆ ಶೂಟಿಂಗ್ ಪ್ರಾರಂಭಿಸಿದ ಮೇಲೆ ನಿಜಕ್ಕೂ ಅವರಿಗೆ ಅವರ ಪ್ರೀತಿಯ ಆಟ ದೊರೆತಂತಾಯ್ತು.
14 ವರ್ಷದವರಾಗಿದ್ದಾಗ ಮನು ಭಾಕೆರ್ ಶೂಟಿಂಗ್ ಆರಂಭಿಸಿದರು. ಅಪ್ಪನ ಅಪಾರ ಬೆಂಬಲ ಭಾಕೆರ್ಗೆ ಇತ್ತಾದ್ದರಿಂದ ಮಗಳು ಕೇಳಿದ ಕೂಡಲೆ ಶೂಟಿಂಗ್ ಗನ್ ಮನೆಗೆ ಬಂದಿತ್ತು. ಅದಾದ ಬಳಿಕ ಅಪ್ಪನ ನಿರೀಕ್ಷೆಯನ್ನು ಹುಸಿ ಮಾಡದ ಪುತ್ರಿ 2017ರ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಗೆದ್ದರು. ಅದೇ ಟೂರ್ನಿಯಲ್ಲಿ, ವಿಶ್ವದ ನಂಬರ್ 1 ಎನಿಸಿಕೊಂಡಿದ್ದ ಭಾರತದ ಹೀನಾ ಸಿಧುವನ್ನು ಸಹ ಭಾಕೆರ್ ಸೋಲಿಸಿದ್ದರು. ಆಗಲೆ ಭಾಕೆರ್ ಮೇಲೆ ನಂಬಿಕೆ ಬಂದಿತ್ತು. ಈಗ ಅದು ನಿಜವಾಗಿದೆ.
Royal Enfield: ರಾಯಲ್ ಎನ್ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್
2018ರ ಆಸ್ಟ್ರೇಲಿಯಾ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಶೂಟಿಂಗ್ನಲ್ಲಿ ಹೊಸ ದಾಖಲೆಯನ್ನೇ ಬರೆದು ಪದಕ ಗೆದ್ದರು ಭಾಕೆರ್. 2019ರ ಮ್ಯೂನಿಚ್ ಐಎಸ್ಎಸ್ಎಫ್ನಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದ ಭಾಕೆರ್ ಒಲಿಂಪಿಕ್ಸ್ನಲ್ಲಿ ತಮ್ಮ ಹೆಸರು ನೊಂದಾವಣಿ ಮಾಡಿಸಿಬಿಟ್ಟಿದ್ದರು. 2021ರಲ್ಲಿ ದೆಹಲಿಯಲ್ಲಿ ನಡೆದ ಐಎಸ್ಎಸ್ಎಫ್ ನಲ್ಲಿ ಸಹ ಮನು ಭಾಕೆರ್ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದರು. ಈಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.