Nitin Gadkari
ಇಡೀ ವಿಶ್ವವೇ, ಪರಿಸರಕ್ಕೆ ಹಾನಿಕಾರಕವಾದ ಇಂಧನದ ಪರ್ಯಾಯದ ಹುಡುಕಾಟದಲ್ಲಿದೆ. ಸೋಲಾರ್ ಕಡೆಗೆ ಭಾರತ ಸೇರಿದಂತೆ ಹಲವು ದೇಶಗಳು ಮುಖ ಮಾಡುತ್ತಿವೆ. ಆದರೆ ಸೋಲಾರ್ ಅಥವಾ ಎಲೆಕ್ಟ್ರಿಸಿಟಿ ಶಕ್ತಿ ದುಬಾರಿ ಮತ್ತು ಅದೂ ಸಹ ಪರಿಸರಕ್ಕೆ ಹಾನಿ ಎಂದು ಪರಿಗಣಿತವಾಗುತ್ತಿದ್ದು ಹೀಗಾಗಿ ಬೇರೆ ಮಾರ್ಗಗಳು ಹುಡುಕಾಟ ಚಾಲ್ತಿಯಲ್ಲಿದೆ. ಈ ನಡುವೆ ಕೇಂದ್ರದ ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಭಾರತಕ್ಕೆ ಆಮದಾಗುತ್ತಿರುವ ಪೆಟ್ರೋಲಿಯಂ ಉತ್ಪಕ್ಕೆ ಬಯೋ ಬ್ಯುಟಮಿನ್ ಬೆರೆಸುವ ಯೋಜನೆ ಮಾಡಿದ್ದಾರೆ.
ಸಂಸತ್ ನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ನಿತಿನ್ ಗಡ್ಕರಿ, ಭಾರತಕ್ಕೆ ಆಮದಾಗುತ್ತಿರುವ ಪೆಟ್ರೋಲಿಯಂ ವಿಶೇಷವಾಗಿ ಬ್ಯುಟಮಿನ್ ಗೆ 35% ಬಯೋ ಬ್ಯುಟಮಿನ್ ಬೆರೆಸಲು ಸರ್ಕಾರ ಅನುಮತಿ ನೀಡಲಿದೆ ಎಂದಿದ್ದಾರೆ. ಇದರಿಂದ ಕೇಂದ್ರಕ್ಕೆ ಹಣ ಉಳಿತಾಯವಾಗಲಿದೆ ಜೊತೆಗೆ ಪರಿಸರ ಹಾನಿ ಕಡಿಮೆ ಆಗಲಿದೆ ಹಾಗೂ ರೈತರಿಗೂ ಸಹಾಯವಾಗಲಿದೆ ಎಂದಿದ್ದಾರೆ.
ನಮ್ಮ ದೇಶದ 90% ರಸ್ತೆಗಳ ನಿರ್ಮಾಣಕ್ಕೆ ಬ್ಯುಟಮಿನ್ ಬಳಸಲಾಗುತ್ತಿದೆ. 2023-24 ರಲ್ಲಿ 88 ಲಕ್ಷ ಟನ್ ಬ್ಯುಟಮಿನ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. 2024-25 ಕ್ಕೆ ನೂರು ಟನ್ ಬ್ಯುಟಮಿನ್ ನ ಅವಶ್ಯಕತೆ ಇದೆ. ದೇಶದಲ್ಲಿ ಬಳಕೆ ಆಗುತ್ತಿರುವ ಒಟ್ಟು ಬ್ಯುಟಮಿನ್ ನ 50% ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ಪ್ರತಿವರ್ಷ 25 ರಿಂದ 30 ಸಾವಿರ ಕೋಟಿ ಹಣವನ್ನು ಖರ್ಚು ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭತ್ತ, ಗೋಧಿ, ಕಬ್ಬಿನ ತ್ಯಾಜ್ಯದಿಂದ ಬಯೋ ಬ್ಯುಟಮಿನ್ ಅನ್ನು ತಯಾರಿಸಲಾಗುತ್ತಿದ್ದು, ಆಮದು ಮಾಡಿಕೊಳ್ಳಲಾಗುತ್ತಿರುವ ಪೆಟ್ರೋಲಿಯಂ ಬ್ಯುಟಮಿನ್ ಗೆ 35% ಬಯೋ ಬ್ಯುಟಮಿನ್ ಅನ್ನು ಬೆರೆಸಲು ಯೋಜಿಸಲಾಗಿದ್ದು, ಶೀಘ್ರವೇ ಇದಕ್ಕೆ ಸರ್ಕಾರದ ಒಪ್ಪಿಗೆ ದೊರಕಲಿದೆ. ಅಲ್ಲದೆ ಈ ವಿಷಯವಾಗಿ ನಾವು ಪೇಟೆಂಟ್ ಗೆ ಸಹ ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ.
ಒಂದು ಟನ್ ಭತ್ತದ ತ್ಯಾಜ್ಯದಿಂದ 30% ಬಯೋ ಬ್ಯುಟಮಿನ್ ಪಡೆಯಬಹುದಾಗಿದೆ. ಇದರ ಜೊತೆಗೆ 350 ಕೆಜಿ ಬಯೋ ಗ್ಯಾಸ್, 350 ಕೆಜಿ ಬಯೋಕೋರ್ ಅನ್ನು ಪಡೆಯಬಹುದಾಗಿದೆ. ಪೆಟ್ರೋಲಿಯಂನಿಂದ ಪಡೆಯಿವ ಬ್ಯುಟಮಿನ್ ಒಂದು ಕೆಜಿಗೆ 50 ರೂಪಾಯಿಗಳಾಗಿದ್ದರೆ, ಭತ್ತದ ತ್ಯಾಜ್ಯದಿಂದ ಪಡೆವ ಬ್ಯುಟಮಿನ್ ಗೆ 40 ರೂಪಾಯಿ ಬೆಲೆ ಇದೆ. ಪೆಟ್ರೋಲಿಯಂ ಬ್ಯುಟಮಿನ್ ಗೆ ಬಯೋ ಬ್ಯುಟಮಿನ್ ಬೆರೆಸಿ ಗುಣಮಟ್ಟ ಪರೀಕ್ಷೆ ಮಾಡಲಾಗಿದ್ದು ಸಮಾಧಾನಕರ ಫಲಿತಾಂಶ ದೊರೆತಿದೆ ಎಂದಿದ್ದಾರೆ ಗಡ್ಕರಿ.
Mobile in India: ಭಾರತದ ಮೊದಲ ಮೊಬೈಲ್ ಕಾಲ್ ಮಾಡಿದ ವ್ಯಕ್ತಿ ಈತ, ಆಗ ಒಂದು ಕಾಲ್ ಗೆ ಎಷ್ಟಿತ್ತು ಬೆಲೆ?
ಬಯೋ ಬ್ಯುಟಮಿನ್ ಉತ್ಪಾದನೆಯಿಂದ ರೈತರಿಗೂ ಲಾಭವಾಗಲಿದ್ದು, ಪ್ರತಿ ಟನ್ ಕೃಷಿ ತ್ಯಾಜ್ಯಕ್ಕೆ ಸರ್ಕಾರ 2500 ರೂಪಾಯಿಗಳನ್ನು ರೈತರಿಗೆ ನೀಡಲಿದೆ ಅಲ್ಲದೆ. ಈ ಯೋಜನೆಯಿಂದ ದೆಹಲಿಯ ವಾಯುಮಾಲಿನ್ಯವೂ ತಗ್ಗಲಿದೆ. ಈಗಾಗಲೇ ಐಓಸಿ (ಇಂಡಿಯನ್ ಆಯಿಲ್ ಕಾರ್ಪೊರೇಷನ್) ಬಯೋ ಬ್ಯುಟಮಿನ್ ಉತ್ಪಾದನೆ ಪ್ರಾರಂಭ ಮಾಡಿದೆ. ಬಯೋ ಬ್ಯುಟಮಿನ್ ಜೊತೆಗೆ ಎಥೆನಾಲ್ ಉತ್ಪಾದನೆಯೂ ಚಾಲ್ತಿಯಲ್ಲಿದೆ. ಪಾಣಿಪತ್ ನಲ್ಲಿ ಪ್ರತಿ ದಿನ ಒಂದು ಲಕ್ಷ ಲೀಟರ್ ಎಥೆನಾಲ್, 150 ಟನ್ ಬಯೋ ಬ್ಯುಟಮಿನ್ ತಯಾರಿಸಲಾಗುತ್ತಿದೆ. ಇದರ ಜೊತೆಗೆ ಪ್ರತಿ ವರ್ಷ 88 ಸಾವಿರ ಟನ್ ಬಯೋ ಏವಿಯೇಷನ್ ಇಂಧನವನ್ನು ತಯಾರಿಸಲಾಗುತ್ತಿದೆ ಎಂದು ಲೆಕ್ಕ ನೀಡಿದ್ದಾರೆ ಸಚಿವ ಗಡ್ಕರಿ.