science
ಚಂದ್ರನಿಗೂ ಸಮುದ್ರಕ್ಕೂ ತೀರ ಹತ್ತಿರದ ಸಂಬಂಧ ಇದೆ. ಹುಣ್ಣಿಮೆ ಚಂದ್ರ ಹಾಗೂ ಸಮುದ್ರಕ್ಕೆ ಇರುವ ನಿಗೂಢ ಸಂಬಂಧದ ಬಗ್ಗೆ ಹಲವಾರು ಕತೆಗಳು ಬಂದು ಹೋಗಿವೆ. ಸಮುದ್ರ ದಂಡೆಯಲ್ಲಿ ವಾಸಿಸುವವರು ಸಹ ಹುಣ್ಣಿಮೆಯಂದು ಸಮುದ್ರದಲ್ಲಾಗುವ ಬದಲಾವಣೆಗಳ ಬಗ್ಗೆ ಹಲವು ರೀತಿಯ ಕತೆಗಳನ್ನು ಹೇಳುತ್ತಾರೆ. ಅಷ್ಟಕ್ಕೂ ಈ ಹುಣ್ಣಿಮೆ ಚಂದ್ರನಿಗೂ ಸಮುದ್ರಕ್ಕೂ ಇರುವ ಸಂಬಂಧದ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ.
ಹುಣ್ಣಿಮೆಯಂದು ಸಮುದ್ರದ ಅಲೆಗಳಯ ಜೋರಾಗಿರುತ್ತವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯವೆ. ಇನ್ನು ಕೆಲವರು ಸಮುದ್ರದಲ್ಲಿ ಅಲೆಗಳು ಮೂಡುವುದೇ ಚಂದ್ರನಿಂದ ಎಂದು ಸಹ ನಂಬಿಕೊಂಡಿದ್ದಾರೆ. ಅದು ಸತ್ಯವಲ್ಲ. ಸಮುದ್ರದಲ್ಲಿ ಅಲೆಗಳು ಏಳುವುದು ಸಮುದ್ರದ ಮೇಲಿನ ಗಾಳಿಯಿಂದ ಒಮ್ಮೊಮ್ಮೆ ಸಮುದ್ರದ ಅಡಿಯಲ್ಲಿ ಉಂಟಾಗುವ ಕಂಪನದಿಂದ. ಆದರೆ ಚಂದ್ರನಿಂದ ಅಲೆಗಳು ನಿರ್ಮಾಣ ಆಗುವುದಿಲ್ಲ ಬದಲಿಗೆ ಇಡೀ ಸಮುದ್ರವೇ ಉಕ್ಕೇರುತ್ತದೆ!
ಹೌದು, ಚಂದ್ರನ ಕಾರಣದಿಂದ ಇಡೀ ಸಮುದ್ರವೇ ಉಕ್ಕೇರುತ್ತದೆ. ಸಮುದ್ರದ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೆಂದರೆ. ಭೂಮಿಗೆ ಇರುವಂತೆ ಚಂದ್ರನಿಗೂ ಗುರುತ್ವಾಕರ್ಷಣ ಶಕ್ತಿಯಿದೆ. ಆದರೆ ಅದು ಭೂಮಿಯಷ್ಟು ಇಲ್ಲ. ಭೂಮಿ ಹೇಗೆ ಚಂದ್ರನನ್ನು ತನ್ನತ್ತ ಸೆಳೆಯುತ್ತಿದೆಯೋ ಹಾಗೆಯೇ ಚಂದ್ರ ಸಹ ಭೂಮಿಯನ್ನು ಸೆಳೆಯುತ್ತಿದ್ದಾನೆ. ಭೂಮಿಯ ಸೆಳೆತದಿಂದಾಗಿ ಚಂದ್ರನ ಪರಿಭ್ರಮಣೆ ಆಗುತ್ತದೆ. ಇದರಿಂದಾಗಿ ಅಮವಾಸ್ಯೆ, ಹುಣ್ಣಿಮೆಗಳು ಉಂಟಾಗುತ್ತಿವೆ. ಇನ್ನು ಚಂದ್ರನ ಗುರುತ್ವಾಕರ್ಷಣೆಯಿಂದ ಭೂಮಿಯ ಮೇಲೆ ಒಂದು ಉಬ್ಬು ನಿರ್ಮಾಣ ಆಗುತ್ತಿದೆ.
ಚಂದ್ರನ ಗುರುತ್ವಾಕರ್ಷಣೆಯಿಂದಾಗಿ ಭೂಮಿಯ ಹೊರಮೈನಲ್ಲಿ ಒಂದು ರೀತಿಯ ಉಬ್ಬಿನ ರಚನೆ ನಿರ್ಮಾಣ ಆಗುತ್ತಿದೆ. ಶೇಖಡ 70% ನೀರನ್ನು ಹೊಂದಿರುವ ಭೂಮಿಯ ಮೇಲ್ಮೈನಲ್ಲಿ ನಿರ್ಮಾಣ ಆಗುತ್ತಿರುವ ಈ ಉಬ್ಬು ಸಮುದ್ರದ ಉಕ್ಕೇರುವಿಕೆಗೆ ಕಾರಣವಾಗುತ್ತಿದೆ. ಹಾಗಿದ್ದರೆ ಕೇವಲ ಹುಣ್ಣಿಮೆ ದಿನವೇ ಏಕೆ ಹೆಚ್ಚು ಅಲೆಗಳು ಮೂಡುತ್ತವೆ, ಪ್ರತಿದಿನವೂ ಮೂಡಬೇಕಲ್ಲ ಎಂಬ ಪ್ರಶ್ನೆ ಇದರಿಂದ ಮೂಡುತ್ತದೆ ಇದಕ್ಕೆ ಉತ್ತರವೂ ಇದೆ.
Earth: ದಿನಕ್ಕೆ 24 ಗಂಟೆ ಅಲ್ಲ 25 ಗಂಟೆ ಆಗಲಿದೆ
ಹೇಗೆ, ಭೂಮಿ, ಚಂದ್ರನಿಗೆ ಗುರುತ್ವಾಕರ್ಷಣ ಶಕ್ತಿ ಇದೆಯೋ ಅದೇ ಮಾದರಿಯಲ್ಲಿ ಸೂರ್ಯನಿಗೂ ಗುರುತ್ವಾಕರ್ಷಣ ಶಕ್ತಿ ಇದೆ. ಸೂರ್ಯನ ಗುರುತ್ವದಿಂದಲೂ ಭೂಮಿಯ ಹೊರಮೈ ಯಲ್ಲಿ ಗುರುತ್ವದ ಸೆಳೆತದಿಂದ ಉಬ್ಬಿದ ರಚನೆ ಮೂಡುತ್ತದೆ. ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬರುವ ಕಾರಣ ಹುಣ್ಣಿಮೆ ಮತ್ತು ಅಮವಾಸ್ಯೆ ದಿನ ಸೂರ್ಯ ಹಾಗೂ ಚಂದ್ರದ ಗುರುತ್ವದ ಶಕ್ತಿ ಒಟ್ಟಿಗೆ ಭೂಮಿಯ ಮೇಲೆ ಒಂದೇ ದಿಕ್ಕಿನಿಂದ ಬೀಳುವ ಕಾರಣ ಆ ದಿನ ಭೂಮಿಯ ಹೊರಮೈ ಹೆಚ್ಚು ಉಬ್ಬುತ್ತದೆ ಅಥವಾ ಕಾಂತೀಯ ಪರಿದಿ ನಿರ್ಮಾಣ ಆಗುತ್ತದೆ. ಹಾಗಾಗಿ ಆ ಎರಡು ದಿನಗಳಲ್ಲಿ ಸಮುದ್ರ ಹೆಚ್ಚು ಉಕ್ಕುತ್ತದೆ ಮತ್ತು ಅಲೆಗಳ ಆರ್ಭಟ ಬಹಳ ಜೋರಾಗಿರುತ್ತದೆ. ಅಸಲಿಗೆ ಅಮವಾಸ್ಯೆ ಹಾಗೂ ಹುಣ್ಣಿಮೆ ಎರಡೂ ದಿನ ಅಲೆಗಳ ಆರ್ಭಟ ಜೋರಿರುತ್ತದೆ, ಆದರೆ ಹುಣ್ಣಿಮೆಯಂದು ಅಲೆಗಳ ಆರ್ಭಟ ಬರಿ ಗಣ್ಣಿಗೆ ಕಾಣುತ್ತದೆಯಾದ್ದರಿಂದ ಜನ ಹುಣ್ಣಿಮೆಯನ್ನು ಮಾತ್ರವೇ ಹೆಚ್ಚು ಲೆಕ್ಕಕ್ಕೆ ಹಿಡಿದು, ಹುಣ್ಣಿಮೆಯಂದು ಅಲೆಗಳ ಆರ್ಭಟ ಜೋರು ಎಂಬ ನಿರ್ಣಯಕ್ಕೆ ಬಂದು ಬಿಟ್ಟಿದ್ದಾರೆ.
ಹುಣ್ಣಿಮೆ ಹಾಗೂ ಅಮವಾಸ್ಯೆಯನ್ನು ಹೊರತಾದ ದಿನ ಚಂದ್ರ ಹಾಗೂ ಸೂರ್ಯ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತಾರಾದ್ದರಿಂದ ಅವರಿಬ್ಬರ ಗುರುತ್ವಾಕರ್ಷಣ ಶಕ್ತಿ ಭೂಮಿಯ ಮೇಲೆ ಭಿನ್ನ ದಿಕ್ಕುಗಳಿಂದ ಬೀಳುವ ಕಾರಣ ಪರಸ್ಪರ ಕಾಂಪನ್ಸೇಟ್ ಆಗಿ ಅಲೆಗಳು ಹೆಚ್ಚು ಉಕ್ಕುವುದಿಲ್ಲ ಅಥವಾ ಸಮುದ್ರ ಶಾಂತವಾಗಿರುತ್ತದೆ.