Dengue
ಪ್ರತಿ ವರ್ಷವೂ ಮಳೆಗಾಲ ಆರಂಭ ಆಗುತ್ತಿದ್ದಂತೆ ಕರ್ನಾಟಕದಾದ್ಯಂತ ಡೆಂಘಿ ರೋಗ ಕಾಡ್ಗಿಚ್ಚಿನಂತೆ ಹಬ್ಬಲು ಆರಂಭವಾಗುತ್ತದೆ. ಸೊಳ್ಳೆ ಕಡಿತದಿಂದ ಬರುವ ಈ ಡೆಂಘಿ ಬಹು ಬೇಗನೆ ವ್ಯಾಪಿಸಿಕೊಳ್ಳುವುದಲ್ಲದೆ ಜೀವಗಳನ್ನು ಸಹ ಬಲಿ ಪಡೆಯುತ್ತದೆ. ಅದರಲ್ಲೂ ಮಕ್ಕಳು, ವೃದ್ಧರಿಗೆ ಡೆಂಘಿ ಬಂತೆಂದರೆ ಬಹಳ ಕಷ್ಟ. ಈ ವರ್ಷ ಸಹ ಡೆಂಘಿಗೆ ಈ ವರೆಗೆ 10 ಜನ ನಿಧನ ಹೊಂದಿದ್ದಾರೆ. ಕಳೆದ ವರ್ಷ 11 ಜನ, 2019 ರಲ್ಲಿ 19 ಜನ ನಿಧನ ಹೊಂದಿದ್ದಾರೆ.
ಡೆಂಘಿ ಗೆ ಸೂಕ್ತ ಚಿಕಿತ್ಸೆ ನಿಗದಿತ ಚಿಕಿತ್ಸೆ ಇಲ್ಲ. ಜ್ವರ, ಸುಸ್ತು ಕಡಿಮೆ ಮಾಡಲು ಸಾಮಾನ್ಯ ಚಿಕಿತ್ಸೆ, ಒಂದೊಮ್ಮೆ ಪ್ಲೇಟ್ ಲೇಟ್ಸ್ ಕಡಿಮೆ ಆದರೆ ಅದನ್ನು ಡೋನರ್ ಗಳಿಂದ ಪಡೆದು ಹಾಕಬಹುದಾದ ಚಿಕಿತ್ಸೆ ಸದ್ಯಕ್ಕೆ ಇದೆ. ಆದರೆ ಪ್ಲೇಟ್ ಲೆಟ್ಸ್ ಹಾಕುವ ಚಿಕಿತ್ಸೆ ತುಸು ದುಬಾರಿ. ಎಲ್ಲ ಆಸ್ಪತ್ರೆಗಳಲ್ಲಿ, ಎಲ್ಲರಿಗೂ ಈ ಚಿಕಿತ್ಸೆಯನ್ನು ಪಡೆಯಲಾಗದು. ಆದರೆ ಇದೀಗ ಡೆಂಘಿ ರೋಗ ಬರದಂತೆ ತಡೆಯಲು ಲಸಿಕೆ ಕಂಡು ಹಿಡಿಯಲಾಗಿದೆ.
ಪೋಲಿಯೋ, ಚಿಕನ್ ಪೋಕ್ಸ್, ಕೋವಿಡ್ ಇನ್ನಿತರೆಗಳಿಗೆ ಹೇಗೆ ಲಸಿಕೆ ಕಂಡು ಹಿಡಿಯಲಾಗಿದೆಯೋ ಅಂಥಹುದೇ ಲಸಿಕೆಯೊಂದನ್ನು ಈಗ ಡೆಂಘಿಗೆ ಸಹ ಕಂಡು ಹಿಡಿಯಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಪನಾಕಿಯಾ ಬಯೋಟೆಕ್ ಸಂಸ್ಥೆ ಜಂಟಿಯಾಗಿ ಡೆಂಘಿಗೆ ಲಸಿಕೆ ಕಂಡು ಹಿಡಿದಿದೆ. ಈ ಲಸಿಕೆಯ ಮೂರನೇ ಕ್ಲಿನಿಕಲ್ ಟ್ರಯಲ್ ಪ್ರಸ್ತುತ ನಡೆಯುತ್ತಿದೆ.
ಈ ಲಸಿಕೆ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿದ್ದು ಲಸಿಕೆಯ ಮೂರನೇ ಪ್ರಯೋಗಿಕ ಪರೀಕ್ಷೆ ನಡೆಯುತ್ತಿದೆ. ಕೆಲವೇ ತಿಂಗಳಲ್ಲಿ ಈ ಲಸಿಕೆಯು ಸಾಮಾನ್ಯರ ಬಳಕೆಗೆ ಲಭ್ಯವಾಗಲಿದೆ. ಬುಧವಾರ, ಈ ಲಸಿಕೆಯ ಮೊದಲ ಶಾಟ್ ಅನ್ನು ವೈದ್ಯಕೀಯ ವಿದ್ಯಾರ್ಥಿ ಪಂಡಿತ್ ಭಾಗವತ್ ದಯಾಲ್ ಶರ್ಮಾ ಎಂಬುವರಿಗೆ ಕೊಡಲಾಯ್ತು. ಈ ವ್ಯಾಕ್ಸಿನ್ ಗೆ ಡೆಂಘಿಆಲ್ ಎಂದು ಹೆಸರಿಡಲಾಗಿದೆ. ಈ ಲಸಿಕೆಯು, ಡೆಂಘಿ ಉಂಟು ಮಾಡುವ ಎಲ್ಲ ನಾಲ್ಕು ವೈರಸ್ ಗಳ ವಿರುದ್ಧವೂ ಹೋರಾಡಲಿದೆಯಂತೆ.
ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಮುಂದಿನ ಎರಡು ವರ್ಷಗಳಲ್ಲಿ ಈ ಲಸಿಕೆಯ ಪರೀಕ್ಷೆ ನಡೆಯಲಿದೆ. ಮುಂದಿನ ಎರಡು ವರ್ಷಗಳಲ್ಲಿ ನಿಯಮದಂತೆ 10,335 ಆರೋಗ್ಯವಂತ ವ್ಯಕ್ತಿಗಳಿಗೆ ಈ ಲಸಿಕೆ ನೀಡಿ ಪರಿಶೀಲನೆ ನಡೆಸಲಾಗುತ್ತದೆ. 2001 ರಲ್ಲಿ ದೇಶದ 8 ರಾಜ್ಯಗಳಲ್ಲಿ ಮಾತ್ರವೇ ಡೆಂಘಿ ಕಾಣಿಸಿಕೊಂಡಿತ್ತು ಆದರೆ ಈಗ ಎಲ್ಲ ರಾಜ್ಯಗಳಲ್ಲಿಯೂ ಡೆಂಘಿ ಹರಡಿಕೊಂಡಿದೆ. ಹಾಗಾಗಿ ಭಾರತಕ್ಕೆ ಈ ಲಸಿಕೆಯ ಅಗತ್ಯತೆ ಹೆಚ್ಚಾಗಿದೆ.
Science: ಹುಣ್ಣಿಮೆ ಚಂದ್ರನಿಗೂ ಸಮುದ್ರಕ್ಕೂ ಇರುವ ಸಂಬಂಧವೇನು?
ಜಪಾನ್ ಈಗಾಗಲೇ ಡೆಂಘಿಗೆ ಲಸಿಕೆಯೊಂದನ್ನು ಕಂಡು ಹಿಡಿದಿದೆ. ಆ ಲಸಿಕೆಯನ್ನು ಎಲ್ಲರೂ ಬಳಸಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಆದರೆ ಭಾರತವು ತಮ್ಮದೇ ಆದ ಲಸಿಕೆ ಕಂಡು ಹಿಡಿಯುವ ಯತ್ನದಲ್ಲಿದ್ದು, ಈ ಲಸಿಕೆ ಸಾಮಾನ್ಯ ಜನರಿಗೆ ಲಭ್ಯವಾಗಲು ಇನ್ನೂ ಕನಿಷ್ಟ ಮೂರು ವರ್ಷ ಬೇಕಾಗುತ್ತದೆ.