Darshan Thoogudeepa
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಗಿಸಿದ್ದಾರೆ. ಇಂದು (ಸೆಪ್ಟೆಂಬರ್ 04) ರಂದು ತನಿಖಾಧಿಕಾರಿಗಳು ಸವಿವರವಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಅನ್ನು ಪಡೆದುಕೊಂಡಿರುವ ನ್ಯಾಯಾಲಯ ಸ್ವೀಕೃತಿ ಪತ್ರವನ್ನು ಸಹ ನೀಡಿದೆ.
ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿರುವ ವಿಷಯಗಳ ಬಗ್ಗೆ ಮಾಧ್ಯಮಗಳು ಬೆಳಿಗಿನಿಂದಲೂ ವರದಿಗಳನ್ನು ಬಿತ್ತರ ಮಾಡುತ್ತಲೇ ಇವೆ. ಮಾಮೂಲಿನಂತೆ ಕೆಲ ಮಾಧ್ಯಮಗಳು ಜವಾಬ್ದಾರಿಯುತ ವರದಿಗಾರಿಕೆ ಮಾಡಿದರೆ ಇನ್ನು ಕೆಲ ಮಾಧ್ಯಮಗಳು ಕೆಲ ಉತ್ಪ್ರೇಕ್ಷಿತ ವರದಿಗಳನ್ನು ಬಿತ್ತರಿಸಿವೆ.
ನಿಜ ಸಂಗತಿ ಹೀಗಿದೆ, ಈಗ ಸಲ್ಲಿಸಲಾಗಿರುವ 3991 ಪುಟಗಳ ಆರೋಪ ಪಟ್ಟಿ ಈ ಸದ್ಯಕ್ಕೆ ಯಾರ ಕೈಗೂ ಸಿಗುವುದಿಲ್ಲ. ಆರೋಪ ಪಟ್ಟಿಯ ಪ್ರತಿಗಳು ಈಗ ನ್ಯಾಯಾಲಯ ದಾಖಲೆಗಳಾಗಿರುತ್ತವೆ. ಎಲ್ಲಿಯವರೆಗೆ ನ್ಯಾಯಾಧೀಶರ ಅನುಮೋದನೆ ಸಿಗುವುದಿಲ್ಲವೋ ಆ ವರೆಗೆ ಆರೋಪ ಪಟ್ಟಿಯಲ್ಲಿರುವ ಮಾಹಿತಿ ಗೌಪ್ಯವಾಗಿರಲಿದೆ. ಹಾಗಿದ್ದರೆ ಮಾಧ್ಯಮಗಳು ಉತ್ಸಾಹಭರಿತ ವರದಿಗಳನ್ನು ಯಾವುದರ ಆಧಾರದಲ್ಲಿ ಮಾಡುತ್ತಿವೆ?
ಆರೋಪ ಪಟ್ಟಿ ಕುರಿತಂತೆ ನ್ಯಾಯಾಲಯದ ನಿಯಮ ಹೀಗಿದೆ. ನ್ಯಾಯಾಧೀಶರ ಅನುಮೋದನೆ ದೊರೆತ ಬಳಿಕ ಆರೋಪ ಪಟ್ಟಿಯ ಪ್ರತಿಗಳನ್ನು ಆರೋಪಿಗಳಿಗೆ ಅಥವಾ ಅವರ ವಕೀಲರಿಗೆ ನೀಡಲಾಗುತ್ತದೆ. ಹಾಗೆ ನೀಡಿದ ಬಳಿಕವಷ್ಟೆ ಆರೋಪ ಪಟ್ಟಿ ಬಹಿರಂಗವಾಗುತ್ತದೆ ಅಥವಾ ಸಾರ್ವಜನಿಕ ದಾಖಲೆಯಾಗಿ ಬದಲಾಗುತ್ತದೆ. ಅಲ್ಲಿಯವರೆಗೆ ಆರೋಪ ಪಟ್ಟಿಯಲ್ಲಿ ಪೊಲೀಸರು ನಮೂದಿಸಿರುವ ಯಾವ ವಿಷಯವ ಯಾರಿಗೂ ಸಹ ಲಭ್ಯ ಆಗುವುದಿಲ್ಲ.
ಮಾಮೂಲಿನಂತೆ ಇಂದು ಸಹ ಈ ಪ್ರಕರಣದಲ್ಲಿ ಕೆಲ ಮಾಧ್ಯಮಗಳು ಊಹಾಪೋಹದ ವರದಿ ಮಾಡಿವೆ. ಗಮನಿಸಬೇಕಾದ ಅಂಶವೆಂದರೆ ಇಂದು ಬಹುತೇಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಷಯಗಳು ಪ್ರಕರಣದ ತನಿಖೆಯ ಸಮಯದಲ್ಲಿ ಇದೇ ಮಾಧ್ಯಮಗಳು ಹೇಳಿದ್ದ ವಿಷಯಗಳೇ ಆಗಿದ್ದವು. ದರ್ಶನ್ ಅಂಗಿಯ ಮೇಲೆ ರಕ್ತ, ರೇಣುಕಾ ಸ್ವಾಮಿಯ ಮೂಳೆ ಮುರಿತ, ತಲೆಗೆ ಪೆಟ್ಟು, ಪವಿತ್ರಾ ಗೌಡ ಕಪಾಳಕ್ಕೆ ಹೊಡೆದಿದ್ದಳು, ಆರೋಪಿಗಳು ಘಟನೆಯ ಚಿತ್ರೀಕರಣ ಮಾಡಿಕೊಂಡಿದ್ದರು ಇಂಥಹಾ ಈಗಾಗಲೇ ಪ್ರಸಾರಗೊಂಡಿರುವ ವರದಿಗಳೇ ಇಂದು ಹೊಸ ರೀತಿಯಲ್ಲಿ ಮರು ಪ್ರಸಾರ ಕಂಡಿದ್ದಾವಷ್ಟೆ.
Nivin Pauly: ಅತ್ಯಾಚಾರ ಆರೋಪಕ್ಕೆ ಸಿಲುಕಿದ ‘ಪ್ರೇಮಂ’ ನಟ ನಿವಿನ್ ಪೌಲಿ
ಆದರೆ ಪ್ರಕರಣದಲ್ಲಿ ಪೊಲೀಸರು ಕಲೆ ಹಾಕಿರುವ ಸಾಕ್ಷ್ಯಗಳ ಸಂಖ್ಯೆ, ದಾಖಲಿಸಿರುವ ಹೇಳಿಕೆಗಳ ಸಂಖ್ಯೆ, ಒಟ್ಟು ಗೂಡಿಸಿರುವ ವರದಿಗಳ ಕಡತಗಳ ಬಗ್ಗೆ ಸರಿಯಾಗಿಯೇ ವರದಿ ಮಾಡಿವೆ ಮಾಧ್ಯಮಗಳು, ಏಕೆಂದರೆ ಈ ಮಾಹಿತಿಯನ್ನು ಪೊಲೀಸ್ ಆಯುಕ್ತ ದಯಾನಂದ್ ಖುದ್ದಾಗಿ ಮಾಧ್ಯಮಗಳಿಗೆ ನೀಡಿದ್ದಾರೆ. ಅಂದಹಾಗೆ ಸೆಪ್ಟೆಂಬರ್ 9 ರಂದು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಿದ್ದು, ಆ ದಿನವೇ ಆರೋಪ ಪಟ್ಟಿಯನ್ನು ಬಹಿರಂಗ ಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.