Pavithra Gowda
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯ ಚಾರ್ಜ್ ಶೀಟ್ ಅನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬರೋಬ್ಬರಿ 3991 ಪುಟಗಳ ಸುದೀರ್ಘ ಆರೋಪ ಪಟ್ಟಿ ಇದಾಗಿದ್ದು, ಆರೋಪ ಪಟ್ಟಿಯಲ್ಲಿ ಕೊಲೆ ಪ್ರಕರಣ ಕುರಿತ ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಪವಿತ್ರಾ ಗೌಡ ಪ್ರಕರಣದ ಎ1 ಆರೋಪಿಯಾಗಿದ್ದು, ತನ್ನಿಂದ ವ್ಯಕ್ತಿಯೊಬ್ಬನ ಜೀವ ಹೋದ ಬಗ್ಗೆ ಪಶ್ಚಾತ್ತಾಪ ಸಹ ಪವಿತ್ರಾಗೆ ಇರಲಿಲ್ಲ ಎಂಬ ಅಂಶ ಆರೋಪ ಪಟ್ಟಿಯಿಂದಾಗಿ ತಿಳಿದು ಬಂದಿದೆ.
ಆರೋಪ ಪಟ್ಟಿಯಲ್ಲಿರುವಂತೆ, ರೇಣುಕಾ ಸ್ವಾಮಿ, ಪವಿತ್ರಾಗೆ ಅಶ್ಲೀಲ ಸಂದೇಶ ಕಳಿಸಿದ ಬಳಿಕ, ರೇಣುಕಾ ಸ್ವಾಮಿಗೆ ಪಾಠ ಕಲಿಸಬೇಕೆಂದು ಪಣತೊಟ್ಟು ಉಪಾಯದಿಂದ ಆತನೊಟ್ಟಿಗೆ ಚಾಟ್ ಮಾಡಿದ್ದಲ್ಲದೆ ತನ್ನ ಸಹಾಯಕ ಪವನ್, ತನ್ನಂತೆ ರೇಣುಕಾ ಸ್ವಾಮಿ ಬಳಿ ಮಾತನಾಡಿ ಆತನ ವಿಳಾಸ ತಿಳಿದುಕೊಳ್ಳುವಂತೆ ಹೇಳಿದ್ದಳು. ವಿನಯ್ ಹಾಗೂ ಇನ್ನೊಬ್ಬ ಆರೋಪಿಗೂ ರೇಣುಕಾ ಸ್ವಾಮಿ ಬಗ್ಗೆ ಮಾಹಿತಿ ಮುಟ್ಟಿಸಿದ್ದಳು. ಅಂತೆಯೇ ಪವನ್, ರೇಣುಕಾ ಸ್ವಾಮಿ ಬಳಿ ಪವಿತ್ರಾ ರೀತಿ ಚಾಟ್ ಮಾಡಿ, ವಿಳಾಸ ಪಡೆದಿದ್ದ. ಬಳಿಕ ದರ್ಶನ್ ಅಭಿಮಾನಿ ರಾಘವೇಂದ್ರಗೆ ಹೇಳಿ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಸಿದ್ದ.
ಜೂನ್ 9 ರಂದು ರೇಣುಕಾ ಸ್ವಾಮಿಯ ಅಪಹರಣ ಮಾಡಿಕೊಂಡು ಶೆಡ್ ಗೆ ಬಂದಾಗ, ಸ್ವತಃ ದರ್ಶನ್ ಪವಿತ್ರಾಗೆ ಕರೆ ಮಾಡಿ ಆಕೆಯನ್ನು ಶೆಡ್ ಗೆ ಕರೆದುಕೊಂಡು ಹೋಗಿದ್ದರು. ಶೆಡ್ ಗೆ ಹೋಗುತ್ತಲೇ ರೇಣುಕಾ ಸ್ವಾಮಿಯನ್ನು ಮನಸೋ ಇಚ್ಛೆ ಥಳಿಸಿದ ಪವಿತ್ರಾ, ಧರಿಸಿದ್ದ ಚಪ್ಪಲಿಯಲ್ಲಿ ರೇಣುಕಾ ಸ್ವಾಮಿ ಮುಖಕ್ಕೆ ಬಹಳ ಬಾರಿ ಹೊಡೆದಿದ್ದಾಳೆ. ಬಳಿಕ ರೇಣುಕಾ ಸ್ವಾಮಿ, ಪವಿತ್ರಾ ಕಾಲು ಹಿಡಿದುಕೊಂಡಾಗಲೂ ಸಹ ಆತನನ್ನು ಒದ್ದು, ಇವನು ಬದುಕಲು ಲಾಯಕ್ಕಿಲ್ಲ ಕೊಂದು ಹಾಕಿ ಎಂದು ಅಬ್ಬರಿಸಿದ್ದಾಳೆ.
ಆ ನಂತರ, ದರ್ಶನ್ ಸೂಚನೆಯಂತೆ ಆರೋಪಿ ಧನರಾಜ್, ಪವಿತ್ರಾಳನ್ನು ಮನೆಗೆ ಡ್ರಾಪ್ ಮಾಡಿದ್ದಾನೆ. ಪವಿತ್ರಾ ಅತ್ತ ಹೋಗುತ್ತಿದ್ದಂತೆ ಇತರೆ ಆರೋಪಿಗಳು ಮಾಡಿದ ಸತತ ಹಲ್ಲೆಯಿಂದ ರೇಣುಕಾ ಸ್ವಾಮಿ ಜೀವ ಹೋಗಿದೆ. ಬಳಿಕ ದರ್ಶನ್ ಪವಿತ್ರಾ ಮನೆಗೆ ಹೋಗಿ ಪವಿತ್ರಾಗೆ ವಿಷಯ ಮುಟ್ಟಿಸಿದ್ದಲ್ಲದೆ ಸಿಸಿಟಿವಿ ದೃಶ್ಯಗಳನ್ನು ಅಳಿಸಿ ಹಾಕಿದ್ದಾರೆ.
ದರ್ಶನ್ ಹಾಗೂ ಇತರೆ ಆರೋಪಿಗಳು ಕೊಲೆಯನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಆದರೆ ಮಾರನೇಯ ದಿನ ಬೆಳಿಗ್ಗೆ ಅಂದರೆ ಜೂನ್ 10 ರಂದು ಪವಿತ್ರಾ ಆರಾಮವಾಗಿ ಏನೂ ಆಗೇ ಇಲ್ಲ ಎಂಬಂತೆ ಬ್ಯೂಟಿ ಪಾರ್ಲರ್ ಗೆ ಹೋಗಿದ್ದರಂತೆ. ಈ ವಿಷಯ ಆರೋಪ ಪಟ್ಟಿಯಲ್ಲಿ ಪೊಲೀಸರು ನಮೂದಿಸಿದ್ದಾರೆ.
Darshan Thoogudeepa: ದರ್ಶನ್ ವಿರುದ್ಧ ಚಾರ್ಜ್ ಶೀಟ್: ಮಾಧ್ಯಮಗಳು ಹೇಳುತ್ತಿರುವುದು ಎಷ್ಟು ಸತ್ಯ?
ಒಬ್ಬ ವ್ಯಕ್ತಿಯ ಜೀವ ಹೋಗಿದೆ ಎಂಬ ಕನಿಷ್ಟ ಪಶ್ಚಾತ್ತಾಪವೂ ಇಲ್ಲದೆ ಪವಿತ್ರಾ ವರ್ತಿಸಿದ್ದಾರೆ. ಜೂನ್ 11 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದಾಗಲೂ ಸಹ ಪವಿತ್ರಾ ನಗುತ್ತಾ, ತಮಾಷೆ ಮಾಡುತ್ತಾ ಬಂದಿದ್ದನ್ನು ಮಾಧ್ಯಮಗಳು ತೋರಿಸಿದ್ದವು. ಅದಾದ ಮೇಲೆ ಪವಿತ್ರಾರ ಬಂಧನದ ಬಳಿಕ ಅವರ ಮನೆಯ ಮಹಜರಿಗೆ ತೆರಳಿದ್ದಾಗಲೂ ಸಹ ಪವಿತ್ರಾ ಮನೆಯಲ್ಲಿ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದರು. ಮನೆಯಿಂದ ಹೊರ ಬರುವಾಗಲೂ ಸಹ ಏನೂ ಆಗಿಲ್ಲವೆಂಬಂತೆ ನಗುತ್ತಾ ಬಂದಿದ್ದು ಸಹ ಮಾಧ್ಯಮಗಳ ಕ್ಯಾಮೆರಾದಲ್ಲಿ ದಾಖಲಾಗಿದೆ. ಪವಿತ್ರಾ ಲಿಪ್ ಸ್ಟಿಕ್ ಹಚ್ಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮಹಿಳಾ ಪಿಎಸ್ ಐ ಒಬ್ಬರಿಗೆ ನೊಟೀಸ್ ಸಹ ನೀಡಲಾಯ್ತು.