Mantri Developers
ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಗಿರುವ ಮಂತ್ರಿ ಡೆವಲಪರ್ಸ್ ನ ಮಾಲೀಕ ಸುಶೀಲ್ ಮಂತ್ರಿ ವಿರುದ್ದ ದೆಹಲಿಯ ಎನ್ ಸಿಡಿಆರ್’ಸಿ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಸುಶೀಲ್ ಮಂತ್ರಿಯನ್ನು ಬಂಧಿಸಿ ಸೆಪ್ಟೆಂಬರ್ 23 ರ ಒಳಗಾಗಿ ಆಯೋಗದ ಮುಂದೆ ಹಾಜರುಪಡಿಸುವಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಗೆ ಸೂಚಿಸಿದೆ.
ಮಂತ್ರಿ ಮಾಲ್ ಸೇರಿದಂತೆ ಬೆಂಗಳೂರಿನಲ್ಲಿ ಕೆಲವು ಅಪಾರ್ಟ್ ಮೆಂಟ್ ಪ್ರಾಪರ್ಟಿಗಳನ್ನು ಹೊಂದಿರುವ ಮಂತ್ರಿ ಡೆವಲಪರ್ಸ್ ಈ ಹಿಂದೆಯೂ ಇದೇ ರೀತಿಯ ಕೆಲವು ಕಾನೂನಾತ್ಮಕ ಸಮಸ್ಯೆಗಳಿಗೆ ಸಿಲುಕಿಕೊಂಡಿತ್ತು. ಈ ಹಿಂದೆ ಮಂತ್ರಿ ಮಾಲೀಕ ಸುಶೀಲ್ ರ ಪುತ್ರನನ್ನು ಕರ್ನಾಟಕಸ ಸಿಐಡಿ ಪೊಲೀಸರು ಪ್ರಕರಣವೊಂದರ ಸಂಬಂಧ ಬಂಧಿಸಿದ್ದರು.
2020 ರಲ್ಲಿ ನೀಡಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಈಗ ಸುಶೀಲ್ ಮಂತ್ರಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. 2020 ರಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಧನಂಜಯ್ ಎಂಬುವರು ಸುಶೀಲ್ ಮಂತ್ರಿ, ಅವರ ಪತ್ನಿ ಸ್ನೇಹಲ್ ಮಂತ್ರಿ ಮತ್ತು ಪುತ್ರ ಪ್ರತೀಕ್ ಮಂತ್ರಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
ಮಂತ್ರಿ ಸರೆನಿಟಿ ಹೆಸರಿನ ಅಪಾರ್ಟ್’ಮೆಂಟ್ ನಲ್ಲಿ ಫ್ಲ್ಯಾಟ್ ಗಳನ್ನು ಸಮಯಕ್ಕೆ ಸರಿಯಾಗಿ ನೀಡದೆ ಅಡ್ವಾನ್ಸ್ ನೀಡಿದ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾಗಿಯೂ, ಹಾಗೂ ಆ ಬಳಿಕ ಕೊಟ್ಟ ಫ್ಲ್ಯಾಟ್ ಗಳನ್ನು ಸಹ ಬ್ಯಾಂಕ್ ನಲ್ಲಿ ನಿಯಮ ಬಾಹಿರವಾಗಿ ಅಡಮಾನ ಇಟ್ಟಿರುವುದಾಗಿ, ಹಾಗೂ ಗ್ರಾಹಕರು ಕೊಟ್ಟ ಲಕ್ಷಾಂತರ ರೂಪಾಯಿ ಹಣವನ್ನು ನಿಯಮಬಾಹಿರವಾಗಿ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವ ಬಗ್ಗೆ ದೂರು ನೀಡಲಾಗಿತ್ತು. ಗ್ರಾಹಕರಿಂದ ಪಡೆದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಕುರಿತು ಸಹ ದೂರು ದಾಖಲಾಗಿತ್ತು.
Gautam Adani: ಭಾರತೀಯ ಉದ್ಯಮಿ ಅದಾನಿ ವಿರುದ್ಧ ವಿದೇಶದಲ್ಲಿ ತೀವ್ರ ಪ್ರತಿಭಟನೆ
2019 ರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿಯೂ ಸಹ ಇದೇ ವಿಷಯವಾಗಿ ಏಳು ಎಫ್’ಐಆರ್ ಗಳು ಮಂತ್ರಿ ವಿರುದ್ಧ ದಾಖಲಾಗಿದ್ದವು. ಆ ಸಮಯದಲ್ಲಿ ಸಿಐಡಿ, ಸುಶೀಲ್ ಮಂತ್ರಿಯ ಪುತ್ರನನ್ನು ಬಂಧಿಸಿತ್ತು. 2022 ರಲ್ಲಿ ಮಂತ್ರಿ ಡೆವಲಪರ್ಸ್ ವಿರುದ್ಧ ಮನಿ ಲಾಂಡರಿಂಗ್ ದೂರು ದಾಖಲಿಸಿಕೊಂಡಿದ್ದ ಇಡಿ, 300 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿತ್ತು. ಈಗ ಸುಶೀಲ್ ವಿರುದ್ಧ ದೂರು ಜಾಮೀನು ರಹಿತ ವಾರೆಂಟ್ ಹೊರೆಡಿಸಲಾಗಿದ್ದು, ಶೀಘ್ರವೇ ಕಬ್ಬನ್ ಪಾರ್ಕ್ ಪೊಲೀಸರು ಸುಶೀಲ್ ಅನ್ನು ಬಂಧಿಸಲಿದ್ದಾರೆ.