Karnataka Politics: ರಾಜ್ಯದಲ್ಲಿ ಸ್ಥಾಪನೆಯಾಗುತ್ತಿದೆ ಹಿಂದೂಪರ ಪ್ರಾದೇಶಿಕ ಪಕ್ಷ: ಬಿಜೆಪಿಗೆ ನಡುಕ

0
79
Karnataka Politics

Karnataka Politics

ರಾಜ್ಯದಲ್ಲಿ ಜಾತ್ಯಾತೀತ ಅಜೆಂಡ ಇಟ್ಟುಕೊಂಡ ಪಕ್ಷಗಳಲ್ಲಿ ಕಾಂಗ್ರೆಸ್ ಸೇರಿದಂತೆ ಇನ್ನೂ ಕೆಲವು ಪಕ್ಷಗಳು ಸಕ್ರಿಯವಾಗಿವೆ. ಆದರೆ ಹಿಂದೂಪರ ಅಜೆಂಡ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿ. ಆದರೆ ಇದೀಗ ರಾಜ್ಯದಲ್ಲಿ ಹಿಂದೂಪರ ಪ್ರಾದೇಶಿಕ ಪಕ್ಷವೊಂದು ಕರ್ನಾಟಕದಲ್ಲಿ ಸ್ಥಾಪನೆಯಾಗುವ ಮುನ್ಸೂಚನೆ ದೊರೆತಿದೆ. ಹಾಲಿ ಬಿಜೆಪಿ ಮುಖಂಡ, ಮಾಜಿ ಸಂಸದರೊಬ್ಬರ ನೇತೃತ್ವದಲ್ಲಿ ಈ ಹಿಂದೂಪರ ಪ್ರಾದೇಶಿಕ ಪಕ್ಷ ಸ್ಥಾಪನೆ ಆಗಲಿದೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡುತ್ತಿದೆ.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಬಿಜೆಪಿ ಒಡೆದ ಮನೆಯಾಗಿದೆ ಎಂಬುದು ಗುಟ್ಟೇನೂ ಅಲ್ಲ. ಕೆಲವು ನಾಯಕರು ರಾಜ್ಯದ ಪ್ರಮುಖ ನಾಯಕರುಗಳ ವಿರುದ್ಧ ಪ್ರತಿದಿನವೂ ವಾಗ್ದಾಳಿ ಮಾಡುತ್ತಲೇ ಇದ್ದಾರೆ. ತೀರ ಅವಾಚ್ಯ ಶಬ್ದಗಳನ್ನು ಬಳಸಿ ಬಿಜೆಪಿ ನಾಯಕರನ್ನು ನಿಂದಿಸಿದ್ದು ಸಹ ಇದೆ. ಹೀಗಿದ್ದರೂ ಸಹ ರಾಜ್ಯ ಬಿಜೆಪಿ ಆ ನಾಯಕರ ವಿರುದ್ಧ ಕ್ರಮ ಕೈಗೊಳ್ಳದಷ್ಟು ಬಲಹೀನವಾಗಿದೆ.

ರಾಜ್ಯದಲ್ಲಿ ಯಡಿಯೂರಪ್ಪ ಜೊತೆಗೆ ಬಿಜೆಪಿಯ ಶಕ್ತಿಯಾಗಿದ್ದ ಈಶ್ವರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರುಗಳು ಪಕ್ಷದಲ್ಲಿ ಮೂಲೆಗುಂಪಾಗಿದ್ದಾಗಿದೆ. ಇವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇನ್ನು ಪ್ರಹ್ಲಾದ್ ಜೋಶಿ ಮಾಸ್ ಲೀಡರ್ ಎನಿಸಿಕೊಂಡಿಲ್ಲ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಉತ್ತರದ ಗಟ್ಟಿ ಬಿಜೆಪಿ ನಾಯಕ ಎನಿಸಿಕೊಳ್ಳುತ್ತಿದ್ದು, ರಾಜ್ಯ ಬಿಜೆಪಿ ನಾಯಕರನ್ನು ಪ್ರತಿದಿನವೂ ನಿಂದಿಸುತ್ತಿದ್ದಾರೆ. ಇನ್ನು ದಕ್ಷಿಣ ಭಾರತದಲ್ಲಿ ಪ್ರತಾಪ್ ಸಿಂಹ ಈಗಾಗಲೇ ರಾಜ್ಯ ಬಿಜೆಪಿ ಜೊತೆಗೆ ಅಂತರ ಕಾಯ್ದುಕೊಂಡಿದ್ದು, ತಮ್ಮದೇ ದಿಕ್ಕಿನಲ್ಲಿ ಮುನ್ನುಗ್ಗುತ್ತಿದ್ದಾರೆ.

ತಮಗೆ ಲೋಕಸಭೆ ಟಿಕೆಟ್ ತಪ್ಪಿಸಿದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಪ್ರತಾಪ್ ಸಿಂಹ, ಅದಾದ ಬಳಿಕವೂ ಸಹ ರಾಜ್ಯ ಬಿಜೆಪಿಯನ್ನು ಪರೋಕ್ಷವಾಗಿ ಕುಟುಕುತ್ತಲೇ ಬಂದಿದ್ದಾರೆ. ಇದರ ಜೊತೆಗೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾ ಹಿಂದೂ ಹೆಸರಲ್ಲಿ ತಮ್ಮದೇ ಒಂದು ಪ್ರತ್ಯೇಕ ಪಡೆ ಕಟ್ಟಿಕೊಳ್ಳುತ್ತಿರುವಂತೆಯೂ ತೋರುತ್ತಿದ್ದಾರೆ. ರಾಜ್ಯ ಬಿಜೆಪಿ ಮೇಲೆ ಅಸಮಾಧಾನಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಇನ್ನೂ ಕೆಲವು ಮುಖಂಡರು ಇತ್ತೀಚೆಗೆ ಸಭೆ ನಡೆಸಿದ್ದಾರೆ. ದಕ್ಷಿಣದಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿರುವ ಪ್ರತಾಪ್ ಸಿಂಹ, ಅರವಿಂದ್ ಲಿಂಬಾವಳಿ, ರಾಮ್​ದಾಸ್ ಇನ್ನಿತರರು ಸೇರಿ ಹೊಸ ಪಕ್ಷ ಸ್ಥಾಪನೆಯ ಚರ್ಚೆಯನ್ನೂ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಟ್ವಿಟ್ಟರ್ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಣ್ಣದಾಗಿ ಪೋಸ್ಟ್​ಗಳು ಹರಿದಾಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ಹಿಂದೂಪರ ಪಕ್ಷವೊಂದು ತಲೆ ಎತ್ತಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ರಾಜ್ಯದಲ್ಲಿ ಹಿಂದೂಪರ ಪ್ರಾದೇಶಿಕ ಪಕ್ಷ ತಲೆ ಎತ್ತಿದಲ್ಲೇ ಆದರೆ ಬಿಜೆಪಿಗೆ ನಡುಕ ಶುರುವಾಗುವುದಂತೂ ಗ್ಯಾರೆಂಟಿ.

LEAVE A REPLY

Please enter your comment!
Please enter your name here