Vijay Raghavendra
ಖ್ಯಾತ ನಟ ವಿಜಯ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾದ ಮುಹೂರ್ತ ಇಂದು (ನವೆಂಬರ್ 20) ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಬಳಿಯ ಎಸ್’ಎನ್ ಫಾರ್ಮ್’ನಲ್ಲಿ ನೆರವೇರಿತು. ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾವನ್ನು ವಿಜಯಪುರದ ಕೆ ವಸಂತ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಹಾರರ್ ಜೊತೆಗೆ ಕನ್ನಡ ಮಣ್ಣಿನ ಜನಪದ ಕಲೆಯ ಕತೆಯನ್ನು ಮಿಳಿತಗೊಳಿಸಿದ ಕತೆಯನ್ನು ‘ರುದ್ರಾಭಿಷೇಕಂ’ ಹೊಂದಿದೆ. ಸಿನಿಮಾದಲ್ಲಿ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಪ್ರೇರಣ ನಟಿಸುತ್ತಿದ್ದಾರೆ. ನಟಿ ಪ್ರೇರಣ ಈ ಹಿಂದೆ ಒಂದು ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.
ಎಸ್’ಎನ್ ಫಾರ್ಮ್ ನಲ್ಲಿ ಪೂಜೆ ಮಾಡುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಲಾಯ್ತು. ತೋಟಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕರಾದ ನಾರಾಯಣಸ್ವಾಮಿ ಹಾಗೂ ಮೇಲೂರಿನ ಪ್ರಗತಿಪರ ರೈತ ಸಚಿನ್ ಅವರು ಕ್ಲಾಪ್ ಮಾಡುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದರು. ಸಹ ನಿರ್ಮಾಪಕರೂ ಆಗಿರುವ ಲಾಯರ್ ಜಯರಾಮ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು.
ಪ್ಯಾನ್ ಇಂಡಿಯಾ ಕ್ರಿಯೇಷನ್ ನಿರ್ಮಾಣ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ಗೆಳೆಯರಾದ ಕೆ ವೆಂಕಟೇಶ್, ಲಾಯರ್ ಜಯರಾಮ್, ಚಿದಾನಂದ್, ರಮೇಶ್, ಚಂದ್ರಶೇಖರ ಹಡಪದ, ಡಾ ಶಿವಕುಮಾರ್, ಮಂಜಣ್ಣ ಅವರುಗಳು ಬಂಡವಾಳ ಹೂಡಿದ್ದಾರೆ. ‘ರುದ್ರಾಭಿಷೇಕಂ’ ಸಿನಿಮಾ ಮೂಲಕ ಇವರು ನಿರ್ಮಾಪಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಸಿನಿಮಾದ ಖಳನಟನ ಪಾತ್ರದಲ್ಲಿ ಖ್ಯಾತ ನಟ ಬಾಲ ರಾಜವಾಡಿ ನಟಿಸುತ್ತಿದ್ದಾರೆ. ಹಿರಿಯ ನಟರಾದ ಗುರುರಾಜ್ ಹೊಸಕೋಟೆ, ಬಿರಾದರ, ಮನು, ಸನತ್, ಮಮತಾ, ಮಂಜುಳ ಇನ್ನಿತರರು ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್ ಸಂಗೀತ ನೀಡಿದ್ದಾರೆ. ಸಿನಿಮಾಟೊಗ್ರಫಿ ಹಾಗೂ ಎಡಿಟಿಂಗ್ ಮುತ್ತುರಾಜ್, ಸಾಹಸ ಚಂದ್ರು ಬಡ್ಡಿ, ಡಿಕೆಡಿಯ ರುದ್ರ ನೃತ್ಯ ಸಂಯೋಜನೆ ಮಾಡಿದ್ದಾರೆ.
Pushpa 2: ‘ಪುಷ್ಪ 2’ ಸಿನಿಮಾದಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡದ ನಟ ಯಾರು ಗೊತ್ತೆ?
ಸಿನಿಮಾದ ಮೊದಲ ಹಂತದ ಚಿತ್ರೀಕರಣ ವಿಜಯಪುರದ ಎನ್’ಎಸ್ ಫಾರ್ಮ್ ಹಾಗೂ ಹತ್ತಿರದ ಚಿಕ್ಕತತ್ತಮಂಗಲ ಗ್ರಾಮದಲ್ಲಿ ನಡೆಯಲಿದೆ. ಚಿಕ್ಕತತ್ತಮಂಗಲ ಗ್ರಾಮದಲ್ಲಿ ಅದ್ಧೂರಿ ಜಾತ್ರೆ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದ ಇತರೆ ಭಾಗದ ಚಿತ್ರೀಕರಣ ಕರ್ನಾಟಕ ಇತರೆ ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆ.