Tesla
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಟೆಸ್ಲಾ ಕಾರುಗಳು ಭಾರತಕ್ಕೆ ಬರುವುದು ಖಾತ್ರಿ ಆಗಿತ್ತು. ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಟ್ರಂಪ್ಗೆ ಬಲು ಆಪ್ತರಾಗಿದ್ದು, ಟ್ರಂಪ್ ಮೂಲಕ ಒತ್ತಡ ಸೃಷ್ಟಿಸಿ ತಮ್ಮ ಟೆಸ್ಲಾ ಕಾರು ಮತ್ತು ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆಗಳನ್ನು ಭಾರತಕ್ಕೆ ತರುವುದು ಪಕ್ಕಾ ಎಂದು ಮೊದಲೇ ಊಹಿಸಲಾಗಿತ್ತು. ಅದೀಗ ಖಾತ್ರಿ ಆಗಿದೆ. ಮುಂಬೈನಲ್ಲಿ ಮೊದಲ ಶೋರೂಂ ಅನ್ನು ಟೆಸ್ಲಾ ಸಂಸ್ಥೆ ತೆರೆಯುತ್ತಿದ್ದು, ಇದಕ್ಕಾಗಿ ದೊಡ್ಡ ಶೋರೂಂ ಅನ್ನು ಬಾಡಿಗೆಗೆ ಸಹ ಪಡೆದುಕೊಂಡಿದೆ.
ಟೆಸ್ಲಾ ಸಂಸ್ಥೆ ಭಾರತಕ್ಕೆ ಬರುವ ಹೊತ್ತಿನಲ್ಲಿಯೇ ಸರಿಯಾಗಿ, ಟ್ರಂಪ್, ಭಾರತದ ವಿರುದ್ಧ ತೆರಿಗೆ ಯುದ್ಧಕ್ಕೆ ರೆಡಿಯಾಗಿದ್ದು, ಭಾರತ, ಅಮೆರಿಕದ ವಸ್ತುಗಳಿಗೆ ಎಷ್ಟು ತೆರಿಗೆ ಹೇರುತ್ತದೆಯೋ ನಾವು ಪ್ರತಿಯಾಗಿ ಅಷ್ಟೆ ತೆರಿಗೆ ಹೇರುತ್ತೇವೆ ಎಂದಿದ್ದಾರೆ. ಇದರಿಂದಾಗಿ ಭಾರತವು ಈಗ ಅಮೆರಿಕದಿಂದ ಆಮದಾಗುವ ಐಶಾರಾಮಿ ಕಾರು, ಬೈಕುಗಳ ಮೇಲಿನ ತೆರಿಗೆ ಕಡಿತಗೊಳಿಸಿದೆ. ಇದರಿಂದಾಗಿ ಟೆಸ್ಲಾ ಸಂಸ್ಥೆಯು ಭಾರತದಲ್ಲಿ ಮಾರಾಟ ಮಾಡುವ ಕಾರಿಗೆ ಕಡಿಮೆ ತೆರಿಗೆ ಪಾವತಿಸಲಿದೆ. ಎಲಾನ್ ಮಸ್ಕ್ಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದಲೇ ಟ್ರಂಪ್, ಭಾರತದ ವಿರುದ್ಧ ತೆರಿಗೆ ಸಮರ ಸಾರಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಟೆಸ್ಲಾ, ಮುಂಬೈನಲ್ಲಿ ಶೋರೂಂ ತೆರೆಯುತ್ತಿದ್ದು, ಭಾರತದಲ್ಲಿ ತಮ್ಮ ಸಂಸ್ಥೆಯ ಎಲ್ಲ ಮಾಡೆಲ್ಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟ ಮಾಡಲಿದೆ. ಟೆಸ್ಲಾ ಸಂಸ್ಥೆಯು ತನ್ನ ಆಟೊಮ್ಯಾಟಿಕ್, ಎಲೆಕ್ಟ್ರಿಕ್ ಕಾರುಗಳಿಗೆ ಜನಪ್ರಿಯ. ಎಐ ಚಾಲಿತ ಕಾರುಗಳನ್ನು ಟೆಸ್ಲಾ ತಯಾರಿಸಿದ್ದು, ಇವು ಅಮೆರಿಕ ಸೇರಿದಂತೆ ಇತರೆ ಕೆಲ ದೇಶಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರುಗಳನ್ನು ಇದೀಗ ಭಾರತದಲ್ಲಿ ಎಲಾನ್ ಮಸ್ಕ್ ಮಾರಾಟ ಮಾಡಲು ಮುಂದಾಗಿದ್ದು, ಭಾರತದ ಬಹು ಜನಸಂಖ್ಯೆ ಹೊಂದಿರುವ, ಬ್ಯುಸಿ ಟ್ರಾಫಿಕ್ ಹೊಂದಿರುವ ರಸ್ತೆಗಳಲ್ಲಿ ಟೆಸ್ಲಾದ ಡ್ರೈವರ್ ಲೆಸ್ ಕಾರುಗಳು ಕಾರ್ಯ ನಿರ್ವಹಿಸುತ್ತವೆಯೇ ಎಂಬುದು ಪ್ರಶ್ನೆಯಾಗಿದೆ.
CAR: ನಿಮ್ಮ ಕಾರಿನಲ್ಲಿರುವ RPM ಮೀಟರ್ ಬಗ್ಗೆ ನಿಮಗೆ ಗೊತ್ತೆ?
ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ. ಟೆಸ್ಲಾದ ಬೇಸಿಕ್ ಕಾರಿನ ಬೆಲೆ ಭಾರತದಲ್ಲಿ 35 ರಿಂದ 40 ಲಕ್ಷ ರೂಪಾಯಿಗಳು ಇರಲಿದೆಯಂತೆ. ಟೆಸ್ಲಾದ ಟಾಪ್ ಮಾಡೆಲ್ನ ಕಾರಿನ ಬೆಲೆ ಸುಮಾರು 70 ರಿಂದ 80 ಲಕ್ಷ ರೂಪಾಯಿಗಳು ಇರಲಿವೆಯಂತೆ. ಭಾರತದಲ್ಲಿ ಮಾರಾಟ ಮಾಡುವ ಕಾರುಗಳಲ್ಲಿ ಕೆಲ ತಂತ್ರಜ್ಞಾನ ಬದಲಾವಣೆಗಳನ್ನು ಸಹ ಟೆಸ್ಲಾ ಮಾಡಲಿದೆ ಎನ್ನಲಾಗುತ್ತಿದೆ.