Nowruz
ಜನವರಿ 1 ಅನ್ನು ವಿಶ್ವದಾದ್ಯಂತ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಆದರೆ ಎಲ್ಲರಿಗೂ ಇದೇ ಹೊಸ ವರ್ಷವೆಂದಲ್ಲ. ಹಲವು ಸಮುದಾಯದವರು ಬೇರೆ ಬೇರೆ ಮಾಸಗಳಲ್ಲಿ ಹೊಸ ವರ್ಷ ಆಚರಣೆ ಮಾಡುತ್ತಾರೆ. ಹಿಂದೂಗಳು ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುತ್ತಾರೆ. ಅಂತೆಯೇ ಚೀನೀಯರ ಹೊಸ ವರ್ಷ ಬೇರೆಯದ್ದೇ ಇದೆ. ಇಂದು ಅಂದರೆ ಮಾರ್ಚ್ 20 ಪರ್ಷಿಯನ್ನರ ಹೊಸ ವರ್ಷ ಅದನ್ನು ಅವರು ‘ನೋವ್ರೂಜ್’ (Nowruz) ಎಂದು ಕರೆಯುತ್ತಾರೆ. ಈ ಹಬ್ಬಕ್ಕೆ ಸಾಕಷ್ಟು ವಿಶೇಷತೆಗಳಿವೆ. ಇದರ ಆಚರಣೆಯೂ ಸಹ ಭಿನ್ನ. ಬನ್ನಿ ತಿಳಿಯೋಣ.
‘ನೋವ್ರೂಜ್’ ಅನ್ನು ಪರ್ಶಿಯನ್ನರು ಮತ್ತು ಇರಾನಿಯನ್ನರು ಹೊಸ ವರ್ಷವನ್ನಾಗಿ ಆಚರಣೆ ಮಾಡುತ್ತಾರೆ. ನೋವ್ ಎಂದರೆ ಹೊಸ, ರುಜ್ ಎಂದರೆ ದಿನ ಎಂದರ್ಥ. ಈ ನೊವ್ರೂಜ್ ಅನ್ನು ಸುಮಾರು 3000 ವರ್ಷಗಳಿಂದಲೂ ಪರ್ಶಿಯನ್, ಇರಾನಿಯನ್ನರು ಹಾಗೂ ಇನ್ನೂ ಕೆಲವು ಸಮುದಾಯದವರು ಆಚರಿಸಿಕೊಂಡು ಬರುತ್ತಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ಯುಗಾದಿ ಹಬ್ಬಕ್ಕೂ ಪರ್ಶಿಯನ್ನರ ನೊವ್ರೂಜ್ಗೂ ಕೆಲ ಸಾಮ್ಯತೆಗಳು ಕಾಣ ಸಿಗುತ್ತವೆ.
‘ನೋವ್ರೂಜ್’ ಹಿಂದಿನ ದಿನ ಪರ್ಶಿಯನ್ನರು, ಇರಾನಿಯನ್ನರು ಮೊದಲು ಇಡೀ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಹೊಸ ಬೆಡ್ ಶೀಟ್, ಕರ್ಟನ್ ಗಳನ್ನು ಖರೀದಿಸಿ ಹಾಕುತ್ತಾರೆ. ಈ ಹಬ್ಬಕ್ಕೆ ಟುಲಿಪ್ ಮತ್ತು ಹ್ಯಾಕಿಂತ್ ಹೂವುಗಳಿಂದ ಮನೆಗಳನ್ನು ಅಲಂಕರಿಸುತ್ತಾರೆ. ಈ ಹಬ್ಬದ ವಿಶೇಷ ಅಡುಗೆ ಎಂದರೆ ಅದು ಸಮಾನು (Samanu) ಅಥವಾ ಸಮಾನಕ್ ಎಂದೂ ಸಹ ಇದನ್ನು ಕರೆಯಲಾಗುತ್ತದೆ. ಗೋದಿ ಹಿಟ್ಟಿನಿಂದ ಮಾಡಲಾಗುವ ಈ ಅಡುಗೆಯನ್ನು ಈ ಹಬ್ಬದಂದು ನೊವ್ರೋಜ್ ಆಚರಿಸುವ ಎಲ್ಲರೂ ಮಾಡುತ್ತಾರೆ. ಇದರ ಜೊತೆಗೆ ಸಬ್ಜಿ ಪೋಲೊ ಹೆಸರಿನ ಮೀನಿನಿಂದ ಮಾಡುವ ಅಡುಗೆ, ಇದರ ಜೊತೆಗೆ ನಾನ್ ಇ ನೊಕಾಡ್ಚಿ ಎಂಬ ತಿನಿಸನ್ನು ಸಹ ತಯಾರು ಮಾಡಲಾಗುತ್ತದೆ.
Health: ಮಹಿಳೆಯರೇ ಈ ಮೂರು ವಸ್ತುಗಳನ್ನು ಈಗಲೇ ಬದಲಾಯಿಸಿ
ನೊವ್ರೋಜ್ ಹಬ್ಬದಲ್ಲಿ ‘ಹಾಫ್ಟ್ ಸಿನ್’ (Haft-sin) ಎಂಬ ವಿಶೇಷ ಆಚರಣೆ ಇದೆ. ‘ಹಾಫ್ಟ್ ಸಿನ್’ ಎಂದರೆ ಏಳು ಎಂದರ್ಥ. ನೊವ್ರೋಜ್ ಪ್ರಾರಂಭದ ದಿನ ಒಂದು ಮೇಜಿನ ಮೇಲೆ ಎಸ್ ಅಕ್ಷರದಿಂದ ಪ್ರಾರಂಭವಾಗುವ ಏಳು ವಸ್ತುಗಳನ್ನು ಇರಿಸಲಾಗುತ್ತದೆ. ಈ ಏಳು ವಸ್ತುಗಳು ನೀರು, ಆಕಾಶ, ಬೆಂಕಿ, ಗಾಳಿ, ಜೀವ ಹೀಗೆ ವಿವಿಧ ಅಂಶಗಳನ್ನು ಪ್ರತಿನಿಧಿಸುವ ಏಳು ವಸ್ತುಗಳನ್ನು ಒಳಗೊಂಡಿರುತ್ತದೆ. ‘ಹಾಫ್ಟ್ ಸಿನ್’ ಆಚರಣೆಯಲ್ಲಿ ಮೇಜಿನ ಮೇಲೆ ಎಸ್ ಅಕ್ಷರದಿಂದ ಪ್ರಾರಂಭವಾಗುವ ಏಳು ವಸ್ತುಗಳನ್ನು ಇರಿಸಲಾಗುತ್ತದೆ. ಅವುಗಳೆಂದರೆ ಸಬ್ಜೆ (ಗೋಧಿ,ಬಾರ್ಲೆ ಇನ್ನಿತರೆ), ಸಮಾನು (ಗೋಧಿ ಹಿಟ್ಟಿನ ಸಿಹಿ ತಿಂಡಿ), ಆಲಿವ್ ಎಣ್ಣೆ, ವಿನೆಗರ್, ಸೇಬು, ಬೆಳ್ಳುಳ್ಳಿ, ಸುಮಾಕ್ ಹೆಸರಿನ ಮಸಾಲೆ ಪದಾರ್ಥಗಳನ್ನು ಇರಿಸಿ ಕುಟುಂಬದವರೆಲ್ಲ ಆ ಮೇಜಿನ ಸುತ್ತ ನಿಂತು ಪ್ರಾರ್ಥನೆ ಮಾಡುತ್ತಾರೆ.
‘ನೋವ್ರೂಜ್’ ಹಬ್ಬಕ್ಕೆ ಸುಮಾರು 15 ದಿನಗಳ ಕಾಲ ರಜೆ ಘೋಷಿಸಲಾಗಿರುತ್ತದೆ ಹಾಗಾಗಿ ಹಲವರು ತಮ್ಮ ಸಂಬಂಧಿಗಳು, ಸ್ನೇಹಿತರ ಮನೆಗಳಿಗೆ ಈ ಸಮಯದಲ್ಲಿ ಭೇಟಿ ನೀಡುತ್ತಾರೆ. ವಿಶೇಷವೆಂದರೆ ಮೊದಲು ಕಿರಿಯರು ಹಿರಿಯರನ್ನು ನೋಡಲು ಹೋಗುತ್ತಾರೆ. ಬಳಿಕ ಹಿರಿಯರು ಕಿರಿಯರ ಮನೆಗಳಿಗೆ ಬರುತ್ತಾರೆ. ಈ ಹಬ್ಬಕ್ಕೆ ವಿಶ್ವ ಮಾನ್ಯತೆಯೂ ಇದೆ.