Toll Price
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಚಿಕ್ಕಬಳ್ಳಾಪುರದ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಹೋಗುವ ಸವಾರರೆಲ್ಲರೂ ದೇವನಹಳ್ಳಿ ಟೋಲ್ (ಸಾದಹಳ್ಳಿ ಟೋಲ್) ಅಥವಾ ಏರ್ಪೋರ್ಟ್ ಟೋಲ್ ಅನ್ನು ದಾಟಿಕೊಂಡೇ ಹೋಗಬೇಕು. ಕರ್ನಾಟಕದ ದುಬಾರಿ ಟೋಲ್ಗಳಲ್ಲಿ ಇದು ಸಹ ಒಂದಾಗಿತ್ತು. ಆದರೆ ಈಗ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುವ ಆದೇಶವೊಂದು ಪ್ರಕಟವಾಗಿದೆ. ಏರ್ಪೋರ್ಟ್ ಟೋಲ್ ಸೇರಿದಂತೆ ರಾಜ್ಯದ ಇನ್ನೂ ಕೆಲವು ಟೋಲ್ ದರಗಳು ಏಕಾ-ಏಕಿ ಏರಿಕೆ ಆಗಲಿವೆ.
ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) ಹೊರಡಿಸಿರುವ ಹೊಸ ಆದೇಶದಂತೆ ಏಪ್ರಿಲ್ 1 ರಿಂದ ಏರ್ಪೋರ್ಟ್ ಟೋಲ್ ಸೇರಿದಂತೆ ರಾಜ್ಯದ ಇನ್ನೂ ಕೆಲ ಟೋಲ್ ದರಗಳು ಏರಿಕೆ ಆಗಲಿವೆ. ಕಾರು, ಜೀಪು ಇನ್ನಿತರೆ ಲೈಟ್ ಮೋಟಾರ್ ವೆಹಿಕಲ್ (LMV) ಗಳು ಏಕಮುಖ ಸಂಚಾರ (ಒನ್ ವೇ) ಪ್ರಯಾಣಕ್ಕೆ 120 ರೂಪಾಯಿಗಳನ್ನು ನೀಡಬೇಕಿದೆ. ದ್ವಿಮುಖ ಸಂಚಾರಕ್ಕೆ (24 ತಾಸುಗಳಲ್ಲಿ ಮರಳಿ ಬಂದರೆ) 180 ರೂಪಾಯಿ ಹಣ ಟೋಲ್ ಶುಲ್ಕ ಕಟ್ಟಬೇಕಿದೆ. ಮಾತ್ರವಲ್ಲದೆ ತಿಂಗಳ ಪಾಸಿನ ಬೆಲೆಯೂ ಏರಿಕೆ ಆಗಲಿದ್ದು, 50 ಸಿಂಗಲ್ ಜರ್ನಿಯ ತಿಂಗಳ ಪಾಸಿನ ಬೆಲೆ 3970 ರೂಪಾಯಿ ಆಗಲಿದೆ.
ಕಮರ್ಷಿಯಲ್ ವಾಹನ, ಮಿನಿ ಬಸ್ಸುಗಳು ಸಿಂಗಲ್ ಜರ್ನಿಗೆ 185 ರೂಪಾಯಿ ಮತ್ತು ಡಬಲ್ ಜರ್ನಿಗೆ 275 ರೂಪಾಯಿ ಹಣವನ್ನು ತೆರಬೇಕಿದೆ. ಇವುಗಳ ತಿಂಗಳ ಪಾಸಿನ ಬೆಲೆ ಏರಿಕೆ ಆಗಿ 6100 ರೂಪಾಯಿಗಳು ಆಗಿದೆ. ಇನ್ನು ಟ್ರಕ್ ಮತ್ತು ಬಸ್ಸುಗಳು ಸಿಂಗಲ್ ಜರ್ನಿಗೆ 370 ರೂಪಾಯಿ, ಡಬಲ್ ಜರ್ನಿಗೆ 550 ರೂಪಾಯಿ ಹಣವನ್ನು ಶುಲ್ಕವಾಗಿ ನೀಡಬೇಕಿದೆ. ಈ ಬೆಲೆ ಏರಿಕೆಯು ಪರೋಕ್ಷವಾಗಿ ಪ್ರಯಾಣಿಕರ ಮೇಲೆ ಪ್ರಭಾವ ಬೀರಲಿದೆ. ಬೆಲೆ ಏರಿಕೆಯಿಂದಾಗಿ ಕ್ಯಾಬ್ ಬಾಡಿಗೆ, ಖಾಸಗಿ ಬಸ್ಸುಗಳ ಟಿಕೆಟ್ ದರಗಳು ಏರಿಕೆ ಆಗಲಿವೆ.
Ola-Uber: ಓಲಾ, ಊಬರ್ ಕಾರುಗಳಲ್ಲಿ ಹಾಕಲ್ಲ ಏಸಿ, ಏಕಿಂತ ನಿರ್ಧಾರ?
ಏರ್ಪೋರ್ಟ್ ಟೋಲ್ ದರ ಮಾತ್ರವೇ ಅಲ್ಲದೆ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಟೋಲ್ ಮತ್ತು ಹೊಸಕೋಟೆ ಟೋಲ್ ದರದಲ್ಲಿಯೂ ಏರಿಕೆ ಆಗಿದೆ. ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ದಾರಿಯಲ್ಲಿ ಪ್ರಯಾಣಿಸುವ ವಾಹನಗಳು ಸಹ ಹೆಚ್ಚಿನ ದರವನ್ನು ಟೋಲ್ಗೆ ನೀಡಬೇಕಿದೆ. ಈ ಟೋಲ್ನಲ್ಲಿ ಕಾರು ಇನ್ನಿತರೆ ಲೈಟ್ ಮೋಟಾರ್ ವೆಹಿಕಲ್ ಗಳು ಸಿಂಗಲ್ ಜರ್ನಿಗೆ 85 ರೂಪಾಯಿ, ಡಬಲ್ ಜರ್ನಿಗೆ 125 ರೂಪಾಯಿಗಳನ್ನು ನೀಡಬೇಕಿದೆ.