Hosatodaku
ಇಂದು (ಮಾರ್ಚ್ 30) ಯುಗಾದಿ, ರಾಜ್ಯದಾದ್ಯಂತ ಜನ ಸಂಭ್ರಮದಿಂದ, ಭಕ್ತಿ ಭಾವದಿಂದ ಯುಗಾದಿ ಆಚರಿಸಿದ್ದಾರೆ. ಯುಗಾದಿಯ ಮಾರನೇಯ ದಿನ ಬರುತ್ತದೆ ಹೊಸತಡಕು ಕೆಲವರು ವರ್ಷದುಡುಕು ಎಂದೂ ಸಹ ಇದನ್ನು ಕರೆಯುತ್ತಾರೆ. ಆಡುಭಾಷೆಯಲ್ಲಿ ಇದು ಹೊಸತಡುಕೆ ಆಗಿದೆ. ಯುಗಾದಿಯ ನಿಜವಾದ ಗಮ್ಮತ್ತಿರುವುದೇ ಈ ಹೊಸತಡುಕಿನಲ್ಲಿ. ಅಂದು ಬಹುತೇಕರ ಮನೆಯಲ್ಲಿ ಬೆಳಿಗಿನ ಜಾವ 3 ಗಂಟೆಗೆ ಅಡುಗೆ ರೆಡಿ ಇರುತ್ತದೆ, ಅದು ಸಾಮಾನ್ಯ ಅಡುಗೆಯಲ್ಲ, ಅದ್ಭುತ ಮಾಂಸಾಹಾರದ ಅಡುಗೆ.
ಹೊಸತಡಕುವಿನ ವಿಶೇಷತೆಯೇ ಮಾಂಸಾಹಾರ ಸೇವನೆ. ಅಂದು ಸಾಲವಾದರೂ ಸರಿ ಬಗೆ ಬಗೆ ಮಾಂಸದಡುಗೆಗಳನ್ನು ಮಾಡಿ ತಿನ್ನಲಾಗುತ್ತದೆ. ಕೆಲ ಹಳ್ಳಿಗಳ್ಳಂತೂ ಬೆಳಿಗ್ಗೆ 3 ಗಂಟೆಯಿಂದ ಆರಂಭಿಸಿ ರಾತ್ರಿ 10ರ ವರೆಗೆ ಪ್ರತಿ ಮೂರು-ನಾಲ್ಕು ಗಂಟೆಗೊಮ್ಮೆ ಮಾಂಸಾಹಾರ ಊಟ ಮಾಡುತ್ತಾರೆ. ಅಂದಿನ ದಿನ ಕನಿಷ್ಟ ಮೂರು ಬಾರಿಯಂತೂ ಬಗೆ-ಬಗೆಯ ಮಾಂಸದಡುಗೆಗಳು ತಯಾರಾಗುತ್ತವೆ.
ವರ್ಷಗಳಿಂದಲೂ ಬಂದ ಸಂಸ್ಕೃತಿ ಹೊಸತಡಕು ಆಗಿದೆಯಾದರೂ ಅಂದು ತುಸು ಎಚ್ಚರಿಕೆಗಳನ್ನು ಪಾಲಿಸಿದರೆ ಆಗಬಹುದಾದ ಅನಾರೋಗ್ಯದಿಂದ ಸುಲಭವಾಗಿ ನಮ್ಮನ್ನು ಕಾಪಾಡಿಕೊಳ್ಳಬಹುದು. ಎಲ್ಲರಿಗೂ ತಿಳಿದಿರುವಂತೆ ಯಾವುದೇ ಸರಿ ಹೆಚ್ಚಾದರೆ ಕಷ್ಟವೇ. ಅಂದೂ ಸಹ ಮಾಂಸಾಹಾರ ತುಸು ಹೆಚ್ಚೇ ಆಗುತ್ತದೆ. ಆದರೆ ಆ ಹೆಚ್ಚಾದ ಆಹಾರ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ. ಇದಕ್ಕೆ ಬಾರಿ ಬದಲಾವಣೆ ಮಾಡಿಕೊಳ್ಳಬೇಕು ಎಂದೇನಿಲ್ಲ ಕೆಲ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೂ ಸಾಕು.
ಮಾಂಸಾಹಾರಗಳಲ್ಲಿ ಮಸಾಲೆ ಪದಾರ್ಥ ಹೆಚ್ಚಾಗಿರುತ್ತದೆ ಅಲ್ಲದೆ ಅತಿಯಾದ ಮಾಂಸಾಹಾರ ದೇಹಕ್ಕೆ ಒಳಿತು ಸಹ ಅಲ್ಲ. ಹಾಗಾಗಿ ಊಟಕ್ಕೆ ಕೂತಾಗ ಮೊದಲು ತುಸು ಹರಿತರಕಾರಿಗಳನ್ನು ತಿಂದುಬಿಡಿ. ಸೌತೆಕಾಯಿ, ಕ್ಯಾರೇಟ್, ಬೀಟ್ರೂಟ್ ಇಂಥಹಾ ತರಕಾರಿಗಳನ್ನು ಒಂದು ಹಿಡಿ ಸೇವಿಸಿ, ಜೊತೆಗೆ ತುಸು ಮೆಂತ್ಯೆ ಸೊಪ್ಪು ಇರಲಿ. ಅದಾದ ಬಳಿಕ ನೀವು ಆರಾಮದಿಂದ ನಿಮ್ಮ ಮಾಂಸಾಹಾರದ ರುಚಿ ಸವಿಯಿರಿ. ಇದರಿಂದ ಆಹಾರದ ಅಸಿಡಿಕ್ ಅಂಶ ಕಡಿಮೆ ಆಗುತ್ತದೆ, ಗ್ಲೂಕೋಸ್ ಸ್ಪೈಕ್ ಅರ್ಧಕ್ಕಿಂತಲೂ ಕಡಿಮೆ ಆಗುತ್ತದೆ.
ಊಟ ಆದ ಕೂಡಲೇ ತುಸು ಓಡಾಡಿ, ಇದು ಕಡ್ಡಾಯ. ಕನಿಷ್ಟ 200 ಹೆಜ್ಜೆಗಳನ್ನು ನಡೆಯಿರಿ. ಊಟವಾದ ಅರ್ಧ ಗಂಟೆ ಬಳಿಕ ಚೆನ್ನಾಗಿ ನೀರು ಕುಡಿಯಿರಿ, ಉಗುರು ಬೆಚ್ಚಗಿನ ನೀರು ಕುಡಿದರಂತೂ ಬಹಳ ಒಳ್ಳೆಯದು. ಪ್ರತಿ ಬಾರಿ ಊಟ ಮುಗಿಸಿದ ಬಳಿಕವೂ ಇದನ್ನು ತಪ್ಪದೆ ಮಾಡಿ.
Health: 40 ವರ್ಷ ದಾಟಿದ್ದೀರ? ಈ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲೇ ಬೇಕು
ನಿಮ್ಮ ಮಾಂಸಾಹರದ ಮೇಲೆ ತುಸು ನಿಂಬೆರಸ ಹಿಂಡಿಕೊಳ್ಳಿ ಇದು ಸಹ ಆಹಾರದ ಅಸಿಡಿಕ್ ಅಂಶವನ್ನು ಕಡಿಮೆಗೊಳಿಸುತ್ತದೆ. ಊಟ ಆದ ಸ್ವಲ್ಪ ಸಮಯದ ಬಳಿಕ ನಿಂಬೆ ರಸ ಕುಡಿಯುವುದು ಸಹ ದೇಹಕ್ಕೆ ಒಳ್ಳೆಯದು. ಸಾಮಾನ್ಯವಾಗಿ ಕೆಲವರು ಮಾಂಸಾಹಾರ ಊಟ ಮಾಡುವಾಗ ಜೊತೆಯಲ್ಲಿ ಥಮ್ಸ್ ಅಪ್, ಸ್ಪ್ರೈಟ್ ಇಟ್ಟುಕೊಳ್ಳುತ್ತಾರೆ. ದಯವಿಟ್ಟು ಈ ಅಭ್ಯಾಸ ಬೇಡ. ಏಕೆಂದರೆ ಅವುಗಳಲ್ಲಿ ಆಡೆಡ್ ಶುಗರ್ (ಸಕ್ಕರೆ) ಅಂಶ ಬಹಳ ಹೆಚ್ಚಾಗಿರುತ್ತದೆ. ಇದು ನಿಮ್ಮ ದೇಹದ ಶುಗರ್ ಲೆವೆಲ್ ಅನ್ನು ಥಟ್ಟನೆ ಹೆಚ್ಚು ಮಾಡುತ್ತದೆ.
ಹೊಸತಡಕುವಿನ ದಿನ ಸಾಧ್ಯವಾದಷ್ಟು ಬೇಯಿಸಿದ ಮಾಂಸಾಹಾರವನ್ನು ಹೆಚ್ಚು ಸೇವಿಸಿ. ಗ್ರಿಲ್ ಮಾಡಿದ ಅಥವಾ ಎಣ್ಣೆಯಲ್ಲಿ ಕರಿದ ಮಾಂಸಾಹಾರಕ್ಕಿಂತಲೂ ಬೇಯಿಸಿದ ಮಾಂಸಾಹಾರ ಆರೋಗ್ಯದ ದೃಷ್ಟಿಯಿಂದ ಉತ್ತಮ. ನೆನಪಿರಲಿ ಆರೋಗ್ಯವೇ ಭಾಗ್ಯ.