Site icon Samastha News

Pawan Kalyan: ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಪವನ್ ಕಲ್ಯಾಣ್-ಚಂದ್ರಬಾಬು ನಾಯ್ಡು ನಡುವೆ ಭಿನ್ನಾಭಿಪ್ರಾಯ

Pawan Kalyan

Pawan Kalyan

ಆಂಧ್ರ ಪ್ರದೇಶದಲ್ಲಿ‌ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಸಹ ಪೂರ್ಣವಾಗಿಲ್ಲ. ಅಷ್ಟರಲ್ಲೇ ಉಪ ಮುಖ್ಯ ಮಂತ್ರಿ ಪವನ್ ಕಲ್ಯಾಣ್ ಹಾಗೂ ಸಿಎಂ ಚಂದ್ರಬಾಬು ನಾಯ್ಡು ನಡುವೆ ಬಿರುಕು ಮೂಡಿದೆ. ಈ ಬಿರುಕು ಮೂಡಲು ಸ್ವತಃ ಪವನ್ ಕಲ್ಯಾಣ್ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷದ ಕೆಲ ಮುಖಂಡರು ಪವನ್ ವಿರುದ್ಧ ಸಿಎಂ ನಾಯ್ಡುಗೆ ದೂರು ನೀಡಿದ್ದು, ನಾಯ್ಡು ಅವರು ಸಹ ಪವನ್’ರ ದಿಕ್ಕೆಟ್ಟ ಹೇಳಿಕೆಗಳಿಂದ ಹೈರಾಣಾಗಿದ್ದಾರೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ಶಾಸಕರಾಗಿರುವ ಪೀಠಾಪುರಂ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರಿ ವೀರಾವೇಷದಿಂದ ಮಾತನಾಡಿದ ಪವನ್ ಕಲ್ಯಾಣ್, ಆಂಧ್ರ ಪ್ರದೇಶದ ಗೃಹ ಮಂತ್ರಿ ಅನಿತಾ ಅವರನ್ನು ಕೈಲಾಗದವರು ಎಂದು ಟೀಕೆ ಮಾಡಿದರು. ‘ಒಂದು ನಿಗದಿತ ಜಾತಿಗೆ ಸೇರಿದವರನ್ನು ನೀವು ಬಂಧಿಸುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ ಪವನ್ ಕಲ್ಯಾಣ್, ನಿಮ್ಮ ಕಾರ್ಯ ಕ್ಷಮತೆ ಹೀಗೆ ಮುಂದುವರೆದರೆ ಗೃಹ ಮಂತ್ರಿ ಸ್ಥಾನವನ್ನು ನಾನು ಕೈಗೆತ್ತಿಕೊಳ್ಳಬೇಕಾಗುತ್ತದೆ’  ಎಂದು ಎಚ್ಷರಿಕೆ ನೀಡಿದರು ಪವನ್ ಕಲ್ಯಾಣ್.

ಟಿಡಿಪಿ ಪಕ್ಷದ ಸಚಿವೆಯೊಬ್ಬರ ಮೇಲೆ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಆಡಿರುವ ಕಠಿಣ ಮಾತುಗಳು ಈಗ ಸಿಎಂ ಹಾಗೂ ಡಿಸಿಎಂ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣ ಆಗಿವೆ. ಟಿಡಿಪಿಯ ಕೆಲ ಹಿರಿಯ ಮುಖಂಡರು ಪವನ್ ಕಲ್ಯಾಣ್ ಅವರ ಬಿಡು ಬೀಸು ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೆ ಬೇರೆಯವರ ಇಲಾಖೆಗಳಲ್ಲಿ ಪವನ್ ಕಲ್ಯಾಣ್ ಅನವಶ್ಯಕವಾಗಿ ತಲೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Yogi Adityanath: ಯೋಗಿ ಆದಿತ್ಯನಾಥ್’ಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಪವನ್’ರ ಜನಸೇನಾ ಪಕ್ಷ ಸಮ್ಮಿಶ್ರ ಮಾಡಿಕೊಂಡು ಸ್ಪರ್ಧೆ ಮಾಡಿತ್ತು. ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಸೇರಿ ಹಿಂದಿನ ಜಗನ್ ಸರ್ಕಾರವನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು. ಅದೇ ಕಾರಣಕ್ಕೆ ಪವನ್’ಗೆ ಡಿಸಿಎಂ ಸ್ಥಾನ ಸಹ ನೀಡಲಾಯ್ತು. ಡಿಸಿಎಂ ಆದ ಬಳಿಕ ಈಗ ಪವನ್ ಕಲ್ಯಾಣ್, ಟಿಡಿಪಿ ಪಕ್ಷದ ಸಚಿವರನ್ನೇ ಟೀಕೆ ಮಾಡುತ್ತಿದ್ದಾರೆ. ಇದು ಟಿಡಿಪಿ ಹಿರಿಯ ನಾಯಕರಿಗೆ ತೀವ್ರ ಅಸಮಾಧಾನ ತಂದಿದೆ.

Exit mobile version