ನಟ ಅಲ್ಲು ಅರ್ಜುನ್ ಇಂದು (ಡಿಸೆಂಬರ್ 21) ಹೈದರಾಬಾದ್ನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಅವಘಡದಿಂದಾಗಿ ಬಂಧನಕ್ಕೆ ಒಳಗಾಗಿ ಬಿಡುಗಡೆ ಆದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಅಲ್ಲು ಅರ್ಜುನ್ ಕಾಣಿಸಿಕೊಂಡರು. ತಂದೆ ಅಲ್ಲು ಅರವಿಂದ್ ಅವರೊಟ್ಟಿಗೆ ಸೇರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅಲ್ಲು ಅರ್ಜುನ್, ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಮಾತನಾಡಿದರು. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವ ಕಾರ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
‘‘ನಾನು ಆ (ಸಂಧ್ಯಾ) ಚಿತ್ರಮಂದಿರಕ್ಕೆ ವರ್ಷಗಳಿಂದಲೂ ಹೋಗುತ್ತಿದ್ದೇನೆ. ಇದು ಮೊದಲಲ್ಲ, ನನ್ನ ಸಿನಿಮಾ, ಬೇರೆಯವರ ಸಿನಿಮಾಗಳಿಗೂ ಹೋಗುತ್ತಲೇ ಇದ್ದೇನೆ. ಆದರೆ ಎಂದೂ ಈ ರೀತಿಯ ಘಟನೆ ಆಗಿಲ್ಲ. ಚಿತ್ರಮಂದಿರಕ್ಕೆ ಹೋದ ದಿನವೂ ನಾನು ಬೇಜಾವಾಬ್ದಾರಿಯಿಂದ ವರ್ತಿಸಿದೆ ಎನ್ನುತ್ತಿದ್ದಾರೆ. ಆದರೆ ಅಂದು ಚಿತ್ರಮಂದರಿದವರು ಮೊದಲೇ ಅನುಮತಿ ಪಡೆದಿದ್ದರು ಹಾಗಾಗಿಯೇ ನಾನು ಚಿತ್ರಮಂದಿರಕ್ಕೆ ಹೋದೆ’ ಎಂದಿದ್ದಾರೆ ಅಲ್ಲು ಅರ್ಜುನ್.
‘ನಾನು ಅಂದು ಚಿತ್ರಮಂದಿರಕ್ಕೆ ಹೊದಾಗಲೂ ಸಹ ಅಲ್ಲಿ ಪೊಲೀಸರು ಇದ್ದರು. ಅವರೇ ನನ್ನ ಮುಂದೆ ನನಗೆ ದಾರಿ ತೋರಿಸಿದರು. ಅವರು ಹೇಳಿದಂತೆಯೇ, ಅವರು ತೋರಿಸಿದ ದಾರಿಯಲ್ಲೇ ಸಾಗಿ ನಾನು ಚಿತ್ರಮಂದಿರದ ಒಳಗೆ ಹೋದೆ. ನಾನು ಪರ್ಮಿಷನ್ ಇಲ್ಲದೆ ಅಲ್ಲಿಗೆ ಹೋದೆ ಎಂಬುದು ಸುಳ್ಳು. ನಾನು ನನ್ನ ಮಕ್ಕಳು ಮತ್ತು ಪತ್ನಿಯನ್ನು ಸಹ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿದ್ದೆ’ ಎಂದರು ಅಲ್ಲು ಅರ್ಜುನ್.
‘ನಾನು ಸಿನಿಮಾ ನೋಡುತ್ತಿದ್ದಾಗ ನನ್ನ ಮ್ಯಾನೇಜರ್ ಬಂದು ಹೊರಗೆ ಜನ ಹೆಚ್ಚಾಗಿದ್ದಾರೆ ನೀವು ಹೊರಡಿ ಎಂದರು ಹಾಗಾಗಿ ನಾನು ಹೊರಟು ಬಿಟ್ಟೆ. ನನ್ನ ಮಕ್ಕಳು ಮತ್ತು ಪತ್ನಿ ಅಲ್ಲಿಯೇ ಇದ್ದರು. ನನಗೆ ಮಹಿಳೆಯೊಬ್ಬರು ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂಬುದು ಗೊತ್ತಿರಲಿಲ್ಲ. ಮಹಿಳೆಯ ಪ್ರಾಣ ಹೋಗಿದೆ ಎಂಬ ವಿಷಯ ನನಗೆ ತಿಳಿದಿದ್ದೇ ಮಾರನೇಯ ದಿನ’ ಎಂದಿದ್ದಾರೆ ಅಲ್ಲು ಅರ್ಜುನ್. ಮುಂದುವರೆದು, ‘ನಾನು ಹೊರಗೆ ಬಂದಾಗಲೂ ಸಹ ನನ್ನ ಕಾರನ್ನು ಸಾಕಷ್ಟು ಜನ ಮುತ್ತಿಕೊಂಡರು. ಗಾಡಿ ಮುಂದೆ ಹೋಗಲು ಬಿಡಲಿಲ್ಲ. ಆಗ ನಾನು ಕಾರಿನ ಮೇಲಿನ ಗ್ಲಾಸು ತೆಗೆದು ಅವರಿಗೆ ಕೈ ಬೀಸಿ, ದಾರಿ ಬಿಡುವಂತೆ ಕೇಳಿಕೊಂಡೆ. ಅದು ಮೆರವಣಿಗೆ ಆಗಿರಲಿಲ್ಲ. ಕೇವಲ ಅವರು ಗಾಡಿ ತಡೆದಿದ್ದರಿಂದ ಮಾತ್ರವೆ ನಾನು ಕಾರಿನ ಮೇಲೆ ಬಂದು ಅವರಿಗೆ ಕೈಬೀಸಿ ದಾರಿ ಕೇಳಿದೆ’ ಎಂದಿದ್ದಾರೆ ಅಲ್ಲು ಅರ್ಜುನ್.
Allu Arjun: ರಾಮ್ ಚರಣ್-ಅಲ್ಲು ಅರ್ಜುನ್ಗೆ ಹೋಲಿಕೆ: ಯಾರು ಉತ್ತಮರು?
ಆ ಘಟನೆ ನಡೆದಾಗಿನಿಂದಲೂ ನಾನು ಮನೆಯಲ್ಲೇ ಕೂತಿದ್ದೀನಿ ನನಗೆ ಏನೂ ಮಾಡಲು ತೋಚುತ್ತಿಲ್ಲ. ನಾನು ಆ ಮಹಿಳೆಯ ಸಾವಿನಿಂದ ಬಹಳ ನೊಂದಿದ್ದೀನಿ. ಇಂಥಹಾ ಸಂದರ್ಭದಲ್ಲಿ ಕೆಲವರು ಮಾಧ್ಯಮಗಳ ಮುಂದೆ, ಸಾಮಾಜಿಕ ಜಾಲತಾಣದಲ್ಲಿ ನನ್ನ ಮಾನಹಾನಿಗೆ ಯತ್ನಿಸುತ್ತಿದ್ದಾರೆ. ನಾನು ಕೆಲವರ ಬಗ್ಗೆ ಕೆಟ್ಟದಾಗಿ ಮಾತನಾಡಿದೆ. ಕೈ-ಕಾಲು ಮುರಿದಿರುವುದು ಮಾತ್ರ ಅಷ್ಟೆ ತಾನೆ ಎಂದೆಲ್ಲ ಹೇಳಿದೆ ಎನ್ನುತ್ತಿದ್ದಾರೆ. ಇದು ನನಗೆ ತೀವ್ರ ಆಘಾತ ಮೂಡಿಸಿದೆ. ಇಂಥಹಾ ಸುಳ್ಳು ಆರೋಪಗಳಿಗೆ ಕೊನೆ ಹಾಡಲೆಂದೇ ನಾನು ಇಂದು ನಿಮ್ಮ ಎದುರು ಬಂದಿದ್ದೇನೆ. ನಾನು, ಸುಕುಮಾರ್ ಹಾಗೂ ಮೈತ್ರಿ ಮೂವಿ ಮೇಕರ್ಸ್ನವರು ಒಟ್ಟಿಗೆ ಆ ಕುಟುಂಬಕ್ಕೆ ಏನಾದರೂ ಸಹಾಯ ಮಾಡೋಣ ಎಂದು ಹಲವು ಚರ್ಚೆ ಮಾಡಿದ್ದೇವೆ. ಇಂಥಹಾ ಸಮಯದಲ್ಲಿ ಕೆಲವರು ನನ್ನ ಮಾನಹಾನಿಗೆ ಯತ್ನಿಸಿರುವುದು ತೀವ್ರ ಬೇಸರ ಮೂಡಿಸಿದೆ’ ಎಂದಿದ್ದಾರೆ ಅಲ್ಲು ಅರ್ಜುನ್.