Site icon Samastha News

Jagan Mohan Reddy: ಆಂಧ್ರ ಸಿಎಂ ಜಗನ್​ ಮೋಹನ್ ರೆಡ್ಡಿಗೆ ಕಲ್ಲೇಟು, ಹಣೆಗೆ ಪೆಟ್ಟು

Jagan Mohan Reddy

ಜಗನ್ ಮೋಹನ್ ರೆಡ್ಡಿ

Jagan Mohan Reddy

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕಲ್ಲು ತೂರಾಟ ನಡೆದಿದ್ದು, ಕಲ್ಲೇಟಿನಿಂದ ಜಗನ್​ರ ಹಣೆಗೆ ಗಾಯವಾಗಿದೆ. ವಿಜಯವಾಡದಲ್ಲಿ ಜಗನ್​ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ. ಚುನಾವಣಾ ಪ್ರಚಾರದ ಭಾಷಣ ಮಾಡಲು ತಮ್ಮ ವಿಶೇಷ ಬಸ್ಸನ್ನು ಜಗನ್ ಏರಿದಾಗ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಕಲ್ಲು ನೇರವಾಗಿ ಜಗನ್​ರ ಎಡಗಣ್ಣಿನ ಮೇಲೆ ತಗುಲಿದ್ದು, ಕೂಡಲೇ ರಕ್ತ ಒಸರಿದೆ.

ಜಗನ್​ ಮೋಹನ್ ರೆಡ್ಡಿ, ಆಂಧ್ರ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ 21 ದಿನಗಳ ಬಸ್ ಯಾತ್ರೆ ಕೈಗೊಂಡಿದ್ದಾರೆ. ಯಾತ್ರೆಗೆ ‘ಮೇಮಂತಾ ಸಿದ್ಧಂ’ ಎಂದು ಹೆಸರಿಡಲಾಗಿದ್ದು, ಪ್ರಚಾರ ಯಾತ್ರೆಯ ಮೊದಲ ಭಾಗದಲ್ಲಿ ಕಡಪ ಜಿಲ್ಲೆಯಿಂದ ಸೀಕಾಕುಲಂ ಜಿಲ್ಲೆಯವರೆಗೆ ನಡೆಯಲಿದೆ. ವಿಶೇಷ ಬಸ್​ ನಲ್ಲಿ ಈ ಪ್ರಚಾರ ಯಾತ್ರೆಯನ್ನು ಜಗನ್ ಮಾಡುತ್ತಿದ್ದಾರೆ. ಇಂದು (ಏಪ್ರಿಲ್ 13) ವಿಜಯವಾಡದ ಸಿಂಗ್​ನಗರ ಡಾಬ ಕೋಟ್ಲ ಸೆಂಟರ್​ನಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಲೆಂದು ವಿಶೇಷ ಬಸ್​ನ ಮೇಲ್ಭಾಗಕ್ಕೆ ಬಂದು ಜನರ ಕಡೆಗೆ ಕೈಬೀಸುತ್ತಿದ್ದಾಗ ಎಲ್ಲಿಂದಲೋ ಬಂದ ಕಲ್ಲೊಂದು ಜಗನ್​ರ ಎಡಗಣ್ಣಿನ ಮೇಲ್ಭಾಗದಲ್ಲಿ ಜೋರಾಗಿ ಬಿದ್ದಿದೆ.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಲ್ಲು ಬಿದ್ದಾಗ ಜಗನ್​ ಹೆಚ್ಚೇನು ವಿಚಲಿತರಾಗಲಿಲ್ಲ. ಅವರ ಸುತ್ತ ಇದ್ದ ಭದ್ರತೆಯವರು ತುಸು ವಿಚಲಿತರಾದಂತೆ ಕಂಡು ಬಂದರು. ಕಲ್ಲು ಬಿದ್ದ ಕಡೆ ಗಾಯವಾಗಿ ರಕ್ತ ಸುರಿಯಲಾರಂಭಿಸಿದ ಕೂಡಲೇ ಅಲ್ಲಿಯೇ ಇದ್ದ ಕೆಲವರು ಬಟ್ಟೆಯಿಂದ ರಕ್ತ ಒರೆಸಿದ್ದಾರೆ. ಬಳಿಕ ಜಗನ್ ನೆರೆದಿದ್ದವರಿಗೆ ಕೈ ಮುಗಿದು, ಬಸ್​ ಒಳಗೆ ಹೋಗಿದ್ದಾರೆ. ಅಲ್ಲಿ ವೈದ್ಯರು ಗಾಯವನ್ನು ಒರೆಸಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಜಗನ್​ಗೆ ಗಾಯವಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಜಗನ್​ಗೆ ಕಲ್ಲು ಬಿದ್ದ ಸ್ಥಳದಲ್ಲಿ ಅಕ್ಕ ಪಕ್ಕ ಎರಡು ದೊಡ್ಡ ಕಟ್ಟಡಗಳು ಇದ್ದು, ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು ಎನ್ನಲಾಗಿದೆ. ಜಗನ್​ಗೆ ಬಿದ್ದ ಕಲ್ಲಿನ ವೇಗ ಸಹ ಬಹಳ ಇತ್ತೆಂದು ಹೇಳಲಾಗುತ್ತಿದ್ದು, ಯಾರೋ ಕ್ಯಾಟರ್​ಪುಲ್ಲರ್​ನಿಂದ ಕಲ್ಲನ್ನು ಜಗನ್​ ಕಡೆಗೆ ಬೀಸಿರುವ ಅನುಮಾನವನ್ನು ವ್ಯಕ್ತಪಡಿಸಲಾಗಿದೆ. ಪೊಲೀಸರು ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಯನ್ನು ಬಂಧಿಸಲು ಪ್ರಯತ್ನ ಆರಂಭಿಸಿದ್ದಾರೆ.

ಜಗನ್​ ಗಾಯಗೊಂಡಿರುವ ಚಿತ್ರಗಳನ್ನು ಹಂಚಿಕೊಂಡಿರುವ ತೆಲಂಗಾಣದ ಬಿಆರ್​ಎಸ್ ಮುಖಂಡ ಕೆಟಿಆರ್, ‘ಜಗನ್ ಅಣ್ಣ ನೀವು ಹುಷಾರಾಗಿದ್ದೀರೆಂದು ಭಾವಿಸಿದ್ದೇನೆ. ಈ ಹಿಂಸೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆಗೆ ಕಾರಣರಾದವರ ಮೇಲೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದೇನೆ ಎಂದಿದ್ದಾರೆ.

ಮಹಿಳಾ ಅಧಿಕಾರಿಯ ಸಾಹಸ, ಜಯನಗರದಲ್ಲಿ ಕೋಟ್ಯಂತರ ಹಣ ವಶಕ್ಕೆ, ಆರೋಪಿಗಳು ಪರಾರಿ

ಆಂಧ್ರ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಲಿವೆ. ವಿಧಾನಸಭೆ ಚುನಾವಣೆಯಂತೂ ಈ ಬಾರಿ ಸಖತ್ ರಂಗೇರಿದೆ. ಜಗನ್ ಸರ್ಕಾರವನ್ನು ಉರುಳಿಸಲು ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಅವರುಗಳು ಬಿಜೆಪಿ ಜೊತೆ ಸೇರಿ ಒಂದಾಗಿದ್ದಾರೆ. ಜಗನ್ ವಿರುದ್ಧ ಸತತ ವಾಗ್ದಾಳಿ ಮಾಡುತ್ತಲೇ ಬರುತ್ತಿದ್ದಾರೆ. ಜಗನ್ ಹಾಗೂ ಅವರ ಬಳಗವೂ ಸಹ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ವಿರುದ್ಧ ಟೀಕೆ, ನಿಂದನೆಗಳನ್ನು ಮಾಡುತ್ತಲೇ ಬರುತ್ತಿದೆ.

Exit mobile version