Ashfaque Chunawala
ಕಷ್ಟಪಟ್ಟು ದುಡಿದರೆ, ಹಣಕಾಸಿನ ವಿಷಯದಲ್ಲಿ ಶಿಸ್ತು ಬೆಳೆಸಿಕೊಂಡರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅಷ್ಫಾಕ್ ಚೂನಾವಾಲಾ ಅತ್ಯುತ್ತಮ ಉದಾಹರಣೆ. ಮುಂಬೈನ ಈ ವ್ಯಕ್ತಿಯ ವಾರ್ಷಿಕ ಬ್ಯುಸಿನೆಸ್ 32 ಕೋಟಿ ರೂಪಾಯಿಗಳು. ಹತ್ತನೆ ತರಗತಿಯಷ್ಟೆ ಓದಿರುವ ಈ ವ್ಯಕ್ತಿ ಇಂದು ನೂರಾರು ಕೋಟಿ ಆಸ್ತಿಯ ಒಡೆಯ. ಎಲ್ಲವೂ ಸಾಧ್ಯವಾಗಿದ್ದು ಈತನ ಶ್ರಮದಿಂದ ಮಾತ್ರ.
2004 ರಲ್ಲಿ ತಿಂಗಳಿಗೆ ಕೇವಲ 10 ಸಾವಿರ ಸಂಬಳ ಪಡೆಯುತ್ತಿದ್ದ ಅಷ್ಫಾಕ್ ನದ್ದು ಬಡ ಕುಟುಂಬ. ಆದರೆ ಹೆಚ್ಚಿಗೆ ದುಡಿಯಬೇಕು ಎಂಬ ಆಸೆಯಿಂದ ಸತತ ಹತ್ತು ವರ್ಷಗಳ ಕಾಲ ಒಂದರ ಮೇಲೊಂದು ಉದ್ಯೋಗ ಬದಲಿಸುತ್ತಾ, 2013 ರಲ್ಲಿ ಸ್ಕಿನ್ ಕೇರ್ ಸಂಸ್ಥೆಯೊಂದರ ಮಳಿಗೆಯ ಮ್ಯಾನೇಜರ್ ಆಗುತ್ತಾರೆ. ಆಗ ಅವರ ಸಂಬಳ 30 ಸಾವಿರ ರೂಪಾಯಿ, ಆದರೆ ಅಷ್ಟಕ್ಕೆ ತೃಪ್ತವಾಗದ ಅಷ್ಫಾಕ್, ಕ್ಯಾಬ್ ಸರ್ವೀಸ್ ನ ಜಾಹೀರಾತೊಂದು ನೋಡಿ, ಕ್ಯಾಬ್ ಓಡಿಸಲು ಪ್ರಾರಂಭಿಸುತ್ತಾರೆ. ಸಂಸ್ಥೆಯಿಂದಲೇ ಲೋನ್ ಪಡೆದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಕಾರು ಓಡಿಸಲು ಆರಂಭಿಸುತ್ತಾರೆ.
ನೌಕರಿಯನ್ನು ಮಾಡುತ್ತಲೇ ದಿನಕ್ಕೆ ಐದು-ಆರು ಗಂಟೆ ಕಾರು ಓಡಿಸುತ್ತಾರೆ. ಕಾರು ಚಾಲನೆಯಿಂದ ತಿಂಗಳಿಗೆ 20 ಸಾವಿರ ಗಳಿಸಿದರೆ , ನೌಕರಿಯಿಂದ 30 ಸಾವಿರ ಬರುತ್ತಿರುತ್ತದೆ. ಹಣ ಒಟ್ಟು ಮಾಡಿ ಇನ್ನೊಂದು ಕಾರು ಖರೀದಿಸುತ್ತಾರೆ, ಬಳಿಕ ಸಹೋದರಿಯ ಸಹಾಯ ಪಡೆದು ಇನ್ನೂ ಒಂದು ಕಾರು ಖರೀದಿಸಿ ಬಾಡಿಗೆಗೆ ಬಿಡುತ್ತಾರೆ. ಆ ಬಳಿಕ ನೌಕರಿಗೆ ಗುಡ್ ಬೈ ಹೇಳಿ ಬ್ಯಾಂಕ್ ನಿಂದ 10 ಲಕ್ಷ ಸಾಲ ಪಡೆದು, ಮೂರು ಹೊಸ ಕಾರು ಖರೀದಿ ಮಾಡುತ್ತಾರೆ. ಡ್ರೈವರ್ ಗಳನ್ನು ಇಟ್ಟು ಬಾಡಿಗೆಗ ಓಡಿಸಲು ಆರಂಭಿಸುತ್ತಾರೆ.
ಹೀಗೆ ಮಾಡುತ್ತಾ ಹತ್ತು ವರ್ಷದಲ್ಲಿ ಈಗ ಅಷ್ಫಕ್ ಬಳಿ 400 ಕಾರುಗಳಿವೆ. ಸುಮಾರು 450 ಮಂದಿಗೆ ಕೆಲಸ ಕೊಟ್ಟಿದ್ದಾರೆ. ಅಷ್ಫಕ್ ರ ವಾರ್ಷಿಕ ಟರ್ನೋವರ್ 32 ಕೋಟಿ ರೂಪಾಯಿಗಳು. ಇತರೆ ಕೆಲವು ಉದ್ಯಮಗಳ ಮೇಲೂ ಬಂಡವಾಳ ಹೂಡಿರುವ ಅಷ್ಫಕ್ ರ ಆಸ್ತಿ ಮೌಲ್ಯ ನೂರಾರು ಕೋಟಿ ರೂಪಾಯಿಗಳು.
ಇದೆಲ್ಲವೂ ಸುಲಭವಾಗಿ ಸಾಧ್ಯವಾಗಿಲ್ಲ ಎಂದಿರುವ ಅಷ್ಫಕ್ ‘ಬಹಳ ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದೇನೆ. ಡ್ರೈವರ್ ಗಳು ಸಾಕಷ್ಟು ಬಾರಿ ಸಮಸ್ಯೆ ಮಾಡಿದ್ದಿದೆ. ಕೋವಿಡ್ ಸಮಯದಲ್ಲಿ ಒಂದು ವರ್ಷಗಳ ಕಾಲ ಇಡೀ ಬ್ಯುಸಿನೆಸ್ ನಿಂತು ಹೋಗಿತ್ತು. ಆಗೆಲ್ಲ ಬಹಳ ಕಷ್ಟಗಳಾಗಿವೆ. ಆದರೆ ಬಿಡದೆ ಶ್ರಮವಹಿಸಿ ಕೆಲಸ ಮಾಡಿದ್ದಕ್ಕೆ ದೇವರು ಕೈ ಹಿಡಿದಿದ್ದಾನೆ ಎಂದಿದ್ದಾರೆ’