Site icon Samastha News

Davanagere: ಪೊಲೀಸ್‌ ಠಾಣೆ ಮೇಲೆ ದಾಳಿ, ಕಲ್ಲು ತೂರಾಟದಲ್ಲಿ 11 ಪೊಲೀಸರಿಗೆ ಗಾಯ

Davanagere

Davanagere

ದಾವಣಗೆರೆಯ ಚೆನ್ನಗಿರಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ಏಕಾ-ಏಕಿ ಭಾರಿ ಸಂಖ್ಯೆಯ ಜನ ಚೆನ್ನಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದ್ದು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದೆ. ಅಲ್ಲದೆ ಪೊಲೀಸ್‌ ಜೀಪನ್ನು ಜಖಂಗೊಳಿಸಿದೆ. ನಡೆದಿರುವುದಿಷ್ಟು, ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್‌ (೩೦) ಓಸಿ ಮಟ್ಕಾ ಆಡಿಸುತ್ತಿದ್ದ ಎಂಬ ಆರೋಪದಲ್ಲಿ ಠಾಣೆಗೆ ಕರೆ ತಂದಿದ್ದರು. ಆದರೆ ಠಾಣೆಯಲ್ಲಿ ಆತನಿಗೆ ಬಿಪಿ ಲೋ ಆಗಿದ್ದು, ಆಸ್ಪತ್ರೆಗೆ ಕೆದೊಯ್ಯಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಆದಿಲ್‌ ಸಾವನ್ನಪ್ಪಿದ್ದಾನೆ.ವಿಷಯ ತಿಳಿದ ಆದಿಲ್‌ ಕುಟುಂಬಸ್ಥರು ಮತ್ತು ಇತರೆ ಮಂದಿ ಠಾಣೆ ಮೇಲೆ ದಾಳಿ ಮಾಡಿದ್ದಾರೆ.

ಆದಿಲ್‌ ಸಾವಿಗೆ ಪೊಲೀಸರೆ ಕಾರಣ ಎಂದು ಮೃತನ ಕುಟುಂಬಸ್ಥರು ಹಾಗೂ ಇತರರು ಗಲಾಟೆ ಮಾಡಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಠಾಣೆ ಮುಂದೆ ನಿಂತಿದ್ದ ಏಳು ಪೊಲೀಸ್‌ ವಾಹನಗಳನ್ನು ಜಖಂ ಮಾಡಿದ್ದಾರೆ. ಕಲ್ಲು ತೂರಾಟದಲ್ಲಿ 11 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಠಾಣೆಯ ಪೀಠೋಪಕರಣಗಳಿಗೆ ಹಾನಿಯಾಗಿದೆ.

ಘಟನೆ ಬಗ್ಗೆ ಮಾತನಾಡಿರುವ ದಾವಣಗೆರೆ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಉಮಾ ಪ್ರಶಾಂತ, ಆದಿಲ್‌ ಅನ್ನು ಶುಕ್ರವಾರ ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆದಿಲ್‌ ಠಾಣೆಯಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಆದರೆ ಅಲ್ಲಿ ಆತ ನಿಧನ ಹೊಂದಿದ್ದಾನೆ. ಆದಿಲ್., ಪೊಲೀಸ್‌ ಠಾಣೆಯಲ್ಲಿ 6-7 ನಿಮಿಷ ಮಾತ್ರವೇ ಇದ್ದ. ಆದರೆ ಆತನ ಪೋಷಕರು ಇದು ಲಾಕಪ್‌ ಡೆತ್‌ ಎಂದು ಹೇಳುತ್ತಿದ್ದಾರೆ. ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ನಾವು ಪರಿಶೀಲನೆ ನಡೆಸಲಿದ್ದೇವೆ ಎಂದಿದ್ದಾರೆ.

GT Mall: ರೈತರಿಗೆ ಅವಮಾನ ಮಾಡಿದ ಬೆಂಗಳೂರಿನ ಪ್ರಸಿದ್ಧ ಮಾಲ್

ಮೃತನ ತಂದೆ ಈಗಾಗಲೇ ದೂರು ನೀಡಿದ್ದಾರೆ. ಇದು ಸೂಕ್ಷ್ಮವಾದ ಪ್ರಕರಣವಾದ್ದರಿಂದ ನ್ಯಾಯಾಧೀಶರ ಮುಂದಾಳತ್ವದಲ್ಲಿ ತನಿಖೆ ನಡೆಸಲಿದ್ದೇವೆ. ಮೃತದೇಹವನ್ನು ದಾವಣಗೆರೆಗೆ ಕಳಿಸಲಾಗಿದೆ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಈ ಘಟನೆಯಲ್ಲಿ 7 ಪೊಲೀಸ್‌ ವಾಹನಗಳು ಜಖಂ ಆಗಿವೆ. 11 ಮಂದಿಗೆ ಗಾಯಗಳಾಗಿವೆ ಎಂದಿದ್ದಾರೆ.

Exit mobile version