Baiyapnalli Police
ಕನ್ನಡದ ಜನಪ್ರಿಯ ಯೂಟ್ಯೂಬರ್ ಗಳಲ್ಲಿ ‘ವಿಕ್ಕಿಪೀಡಿಯಾ’ ಪ್ರಮುಖವಾದವರು. ತಮ್ಮ ತಮಾಷೆಯ ವಿಡಿಯೋಗಳಿಂದ, ಹಾಡುಗಳಿಂದ ಲಕ್ಷಾಂತರ ಫಾಲೋವರ್ ಗಳನ್ನು ಅಭಿಮಾನಿಗಳನ್ನು ವಿಕ್ಕಿಪೀಡಿಯ ಹೊಂದಿದ್ದಾರೆ. ಆದರೆ ಈ ‘ವಿಕ್ಕಿಪೀಡಿಯಾ’ ವಿವಾದವೊಂದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ತಮ್ಮ ಚಾನೆಲ್ ನಲ್ಲಿ ವಿಕ್ಕಿ ಅಪ್ ಲೋಡ್ ಮಾಡಿದ್ದ ವಿಡಿಯೋ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾಗಿ ಅವರನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ ವಿಕ್ಕಿಪೀಡಿಯಾ ಚಾನೆಲ್ ನಲ್ಲಿ ವಿಡಿಯೋ ಓಮದನ್ನು ಅಪ್ ಲೋಡ್ ಮಾಡಲಾಗಿತ್ತು. ವಿಡಿಯೋನಲ್ಲಿ ವಿಕ್ಕಿ, ಬೆಂಗಳೂರಿನ ಹೊಸ ತಲೆಮಾರಿನ ಯುವಕರನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಯುವಕನ್ನು ಸಂದರ್ಶನ ಮಾಡುವ ಪಾತ್ರದಲ್ಲಿ ಅಮಿತ್ ಚಿಟ್ಟೆ ಕಾಣಿಸಿಕೊಂಡಿದ್ದರು. ಸಂದರ್ಶನಕಾರ (ಚಿಟ್ಟೆ) ದಾರಿ ತಪ್ಪಿರುವ ಯುವಕರಿಗೆ ಏನು ಹೇಳುತ್ತೀರಿ? ಎಂದು ಕೇಳಿದಾಗ ಠಪೋರಿ ಯುವಕನ ಪಾತ್ರದಲ್ಲಿದ್ದ ವಿಕ್ಕಿ, ಠಪೋರಿ ಭಾಷೆಯಲ್ಲಿ ಈಗಿನ ಯುವಕರು ಸಿಗರೇಟು, ಎಣ್ಣೆ, ಹುಡುಗೀರು ಎಂದು ಟೈಂ ವೇಸ್ಟ್ ಮಾಡುತ್ತಿದ್ದಾರೆ ಎನ್ನುತ್ತಾರೆ. ಹಾಗಾದರೆ ನೀವು ಎಂಜಾಯ್ ಮೆಂಟ್ ಗೆ ಏನು ಮಾಡುತ್ತೀರಿ ಎಂದು ಕೇಳಿದಾಗ ‘ನಾನು ಡ್ರಗ್ಸ್ ಮಾಡುತ್ತೇನೆ’ ಎಂದು ಇಂಜೆಕ್ಷನ್ ತೋರಿಸಿದ್ದರು ವಿಕ್ಕಿ.
ಮದುವೆಗೆ ಅತಿಥಿಗಳ ಕರೆದೊಯ್ಯಲು ನೂರಾರು ವಿಮಾನಗಳನ್ನು ಆಟೋಗಳಂತೆ ಬಳಸುತ್ತಿರುವ ಅಂಬಾನಿ
ಈ ವಿಡಿಯೋ ಬಗ್ಗೆ ಕೆಲವು ನೆಟ್ಟಿಗರು ಸಹ ಆಕ್ಷೇಪ ಎತ್ತಿದ್ದರು. ಬೆಂಗಳೂರು ಪೊಲೀಸರ ಸಾಮಾಜಿಕ ಜಾಲತಾಣ ವಿಭಾಗ ಈ ವಿಡಿಯೋವನ್ನು ಪರಿಶೀಲಿಸಿ, ಬೈಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆ ಪೊಲೀಸರು ವಿಡಿಯೋ ಪರಿಶೀಲಿಸಿ, ವಿಕಾಸ್ ಅನ್ನು ಠಾಣೆಗೆ ಕರೆಸಿಕೊಂಡು ವಿಡಿಯೋ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಇನ್ನು ಮುಂದೆ ಮಾದಕ ವಸ್ತುಗಳ ಪ್ರಚಾರ ಮಾಡುವ ವೀಡಿಯೋ ಮಾಡದಂತೆ ಎಚ್ಚರಿಕೆ ನೀಡಿರುವುದಲ್ಲದೆ, ವಿಡಿಯೋ ಮಾಡುವಾಗ ಕಂಟೆಂಟ್ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆಯೂ ತಿಳಿಸಿಕೊಡಲಾಗಿದೆ ಎನ್ನಲಾಗುತ್ತಿದೆ.
ವಿಕಾಸ್ (ವಿಕ್ಕಿಪೀಡಿಯಾ) ಹಂಚಿಕೊಂಡಿದ್ದ ವಿಡೊಯೋ ಠಪೋರಿ ಹುಡುಗರನ್ನು ಟೀಕಿಸುವಂತೆ ಇತ್ತು. ವಿಡಿಯೋದ ಕೊನೆಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತೀನಿ ಎನ್ನುವ ಠಪೋರಿ ಯುವಕನನ್ನು, ಸಂದರ್ಶಕ ಹೊಡೆಯಲು ಓಡಿಸಿಕೊಂಡು ಹೋಗುವ ದೃಶ್ಯವೂ ಇತ್ತು. ಆದರೆ ಪೊಲೀಸರಿಗೆ ಆ ವಿಡಿಯೋ ಮಾದಕ ವಸ್ತುವನ್ನು ಪ್ರಚಾರ ಮಾಡುವ ವಿಡಿಯೋ ಎನಿಸಿದೆ.
ವಿಕ್ಕಿಪೀಡಿಯಾ ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಕೊಡುವ ಬೆರಳೆಣಿಕೆಯ ಕ್ರಿಯೇಟರ್ ಗಳಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಆನ್ ಲೈನ್ ಗೇಮಿಂಗ್ ಗೆ ವಿರುದ್ಧವಾಗಿ, ಹಿಂದಿ ಹೇರಿಕೆ ವಿರುದ್ಧ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇತರೆ ಹಲವು ಪ್ರಸ್ತುತ ಸಮಸ್ಯೆಗಳ ಬಗ್ಗೆ ತಮಾಷೆಯ ವಿಡಿಯೋಗಳನ್ನು ಮಾಡಿದ್ದಾರೆ.