BBMP
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಕಡಿಮೆಯಿಲ್ಲ. ಬೀದಿ ನಾಯಿಗಳ ನಿಯಂತ್ರಣ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಈಗ ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಪ್ ಅಳವಡಿಕೆಗೆ ಮುಂದಾಗಿದೆ ಬಿಬಿಎಂಪಿ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗುತ್ತಿದೆ.
ಇದೇ ಫೆಬ್ರವರಿಯಲ್ಲಿ ಈ ಯೋಜನೆ ಘೋಷಿಸಲಾಗಿದ್ದು, ಬೆಂಗಳೂರಿನಲ್ಲಿರುವ 2.79 ಲಕ್ಷ ನಾಯಿಗಳಲ್ಲಿ 1.40 ಲಕ್ಷ ನಾಯಿಗಳಿಗೆ ಚಿಪ್ ಅಳವಡಿಕೆ ಮಾಡುವುದು ಬಿಬಿಎಂಪಿಯ ಯೋಜನೆ. ಪ್ರಸ್ತುತ ಇದರ ಪೈಲೇಟ್ ಅಥವಾ ಪ್ರಾಯೋಗಿಕ ಯೋಜನೆಯನ್ನು ನಡೆಸಲು ಬಿಬಿಎಂಪಿ ಮುಂದಾಗಿದ್ದು ಬೆಂಗಳೂರಿನ ಮೂರು ಭಾಗಗಳಲ್ಲಿ ತಲಾ 1000 ಬೀದಿ ನಾಯಿಗಳಿಗೆ ಚಿಪ್ ಅಳವಡಿಸಲಾಗುವುದು.
ಸುಮಾರು ಒಂದು ಇಂಚಿನಷ್ಟು ಉದ್ದದ ಚಿಪ್ ಅನ್ನು ಬೀದಿ ನಾಯಿಯ ಕತ್ತಿನ ಬಳಿ ಅಳವಡಿಸಲಾಗುವುದು. ಆ ಮೈಕ್ರೋ ಚಿಪ್ ನಿಂದ ನಾಯಿಯ ಮಾಹಿತಿ ಸಂಗ್ರಹಿಸಲು ಬೇರೊಂದು ಸೆನ್ಸಾರ್ ಅನ್ನು ಬಳಸಲಾಗುವುದು. ಸೆನ್ಸಾರ್ ನಿಂದ ಸ್ಕ್ಯಾನ್ ಮಾಡಿದರೆ ಚಿಪ್ ಮೂಲಕ ನಾಯಿಯ ಮಾಹಿತಿ ಮೂಡುತ್ತದೆ.
ಬೀದಿ ನಾಯಿಗಳಿಗೆ ಆಂಟಿರೇಬಿಸ್ ವ್ಯಾಕ್ಸಿನ್ ಅನ್ನು ಪದೇ ಪದೇ ಹಾಕುವುದನ್ನು ತಪ್ಪಿಸುವುದು ಈ ಯೋಜನೆಯ ಮೂಲ ಉದ್ದೇಶ. ಪ್ರತಿವರ್ಷ ಬಿಬಿಎಂಪಿ, ಬೀದಿ ನಾಯಿಗಳಿಗೆ ಆಂಟಿರೇಬೀಸ್ ಲಸಿಕೆ ಹಾಕುತ್ತದೆ. ಆದರೆ ಬೀದಿ ನಾಯಿಗಳ ಗುರುತು ಸಾಧ್ಯವಿಲ್ಲದ ಕಾರಣ ಒಂದೇ ನಾಯಿಗೆ ಹಲವು ಬಾರಿ ವ್ಯಾಕ್ಸಿನ್ ಆಗಿಬಿಡುತ್ತದೆ ಇದು ನಾಯಿಗೆ ಹಾಗೂ ಅದು ಕಚ್ಚಿದಲ್ಲಿ ಮನುಷ್ಯನಿಗೂ ವಿವಿಧ ಅನಾರೋಗ್ಯ ಉಂಟು ಮಾಡಬಹುದು ಹಾಗಾಗಿ ಇದನ್ನು ತಪ್ಪಿಸಲೆಂದು ಈಗ ನಾಯಿಗಳಿಗೆ ಚಿಪ್ ಅಳವಡಿಸಲಾಗುತ್ತಿದೆ. ಈ ಪ್ರಯೋಗಿಕ ಯೋಜನೆಗೆ 5 ಲಕ್ಷ ಮೀಸಲಿಟ್ಟಿದ್ದು, ನಗರದ ಎಲ್ಲ ನಾಯಿಗಳಿಗೂ ಚಿಪ್ ಅಳವಡಿಸಲು ಕೆಲವು ಕೋಟಿಗಳೇ ಖರ್ಚಾಗಲಿವೆ.
https://samasthanews.com/how-much-price-will-deducted-on-mobile-phones-after-union-budget/
ಆದರೆ ಬೆಂಗಳೂರಿನ ಪ್ರಾಣಿಪ್ರಿಯರು ಬಿಬಿಎಂಪಿಯ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾಯಿಗಳ ದೇಹದ ಒಳಗೆ ಚಿಪ್ ಅಳವಡಿಸುವುದು ನಾಯಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಚಿಪ್ ಅಳವಡಿಸಿದ ಬಳಿಕ, ನಾಯಿಗೆ ಆದ ಗಾಯವನ್ನು ಯಾರು ಆರೈಕೆ ಮಾಡುತ್ತಾರೆ. ನಾಯಿಯನ್ನು ಹಿಡಿದು, ಬಲವಂತದಿಂದ ಚಿಪ್ ಅಳವಡಿಸಿದರೆ ಅದು ಗಾಬರಿಯಾಗಿ ಬೇರೆ ಸ್ಥಳಕ್ಕೆ ವಲಸೆ ಹೋದರೆ ಬಿಬಿಎಂಪಿಯ ಉದ್ದೇಶವೇ ವ್ಯರ್ಥವಾಗುತ್ತದೆ. ಈ ಚಿಪ್ ಅಳವಡಿಕೆಯಿಂದ ನಾಯಿಗಳ ಜೀವಕ್ಕೂ ತೊಂದರೆ ಆಗಬಹುದು ಎಂದು ಕೆಲವರು ವಾದಿಸಿದ್ದಾರೆ.