Belagavi Hindalga Jail
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ರಾಜಾತಿಥ್ಯ ಸ್ವೀಕರಿಸಿ ಸುದ್ದಿಯಾಗಿದ್ದರು. ಕುರ್ಚಿ, ಬೇಕೆಂದಾಗ ಕಾಫಿ, ಸಿಗರೇಟು, ಗೆಳೆಯರ ಗುಂಪು ಎಲ್ಲವೂ ಸಿಕ್ಕಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು ಸೇದುತ್ತಾ ಕೂತಿದ್ದ ದರ್ಶನ್ ಚಿತ್ರ ಸಖತ್ ವೈರಲ್ ಆಗಿತ್ತು. ನಿಯಮ ಉಲ್ಲಂಘಿಸಿದ ಕಾರಣ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ವಿವಿಧ ಜೈಲುಗಳಿಗೆ ಅಟ್ಟಲಾಗಿದೆ.
ದರ್ಶನ್ ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ದೊರೆತ ಸುದ್ದಿ ಭಾರಿ ವೈರಲ್ ಆಗಿದ್ದು, ಈಗ ಜೈಲಿನ ಕೈದಿಗಳು, ದರ್ಶನ್ ಗೆ ಸಿಕ್ಕ ವಿಶೇಷ ಆತಿಥ್ಯ ನಮಗೂ ಬೇಕೆಂದು ಹಠ ಹಿಡಿದ್ದಾರೆ. ದರ್ಶನ್ ಗೆ ಒಂದು ನ್ಯಾಯ, ನಮಗೊಂದು ನ್ಯಾಯವಾ ಎಂದು ಜೈಲಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಮಾತ್ರವಲ್ಲದೆ ಜೈಲಿನಲ್ಲಿ ಈ ಬಗ್ಗೆ ಪ್ರತಿಭಟನೆ ಸಹ ಮಾಡಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳು ಭಾನುವಾರ ಪ್ರತಿಭಟನೆ ಮಾಡಿದ್ದು, ದರ್ಶನ್ ರೀತಿಯ ರಾಜಾತಿಥ್ಯ ತಮಗೂ ಬೇಕೆಂದು ಒತ್ತಾಯಿಸಿದ್ದಾರೆ. ಜೈಲಿನಲ್ಲಿ ಬೀಡಿ, ಸಿಗರೇಟು ಕೆಲವು ತಂಬಾಕು ವಸ್ತುಗಳನ್ನು ತರಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಪ್ರತಿಭಟನೆಯ ಭಾಗವಾಗಿ ಭಾನುವಾರ ಬೆಳಿಗ್ಗೆ ಉಪಹಾರ ಸೇವಿಸದೆ ಪ್ರತಿಭಟಿಸಿದ್ದಾರೆ.
ಹಿಂಡಲಗಾ ಜೈಲಿನ ಅಧಿಕಾರಿ ಕೃಷ್ಣಮೂರ್ತಿ ಈ ಬಗ್ಗೆ ಮಾತನಾಡಿದ್ದು, ಜೈಲಿನಲ್ಲಿ 500 ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಹೆಚ್ಚು ಜನ ವಿಚಾರಣಾಧೀನ ಕೈದಿಗಳೇ ಇದ್ದಾರೆ. ಭಾನುವಾರ ಬೆಳಿಗ್ಗೆ ಅವರ್ಯಾರು ಉಪಹಾರ ಸೇವಿಸದೆ ಪ್ರತಿಭಟಿಸಿದ್ದಾರೆ. ಬೀಡಿ, ಸಿಗರೇಟು, ಇನ್ನಿತರೆ ತಂಬಾಕು ಉತ್ಪನ್ನಗಳಿಗಾಗಿ ಒತ್ತಾಯಿಸಿ ಅವರು ಪ್ರತಿಭಟಿಸಿದ್ದಾರೆ ಎಂದಿದ್ದಾರೆ.
ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಣ ಆತಿಥ್ಯ ದೊರೆತ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು, ವಿಶೇಷ ತಂಡ ರಚಿಸಿ ತನಿಖೆಗೆ ಸೂಚಿಸಲಾಗಿದೆ. ವಿಶೇಷ ಆತಿಥ್ಯಕ್ಕೆ ಕಾರಣವಾದ 9 ಮಂದಿ ಜೈಲು ಸಿಬ್ಬಂದಿಯನ್ನು ಅಮಾನತ್ತು ಸಹ ಮಾಡಲಾಗಿದೆ.