Bengaluru
ನಾಳೆ ಅಂದರೆ ಏಪ್ರಿಲ್ 24 ರಂದು ಬೆಂಗಳೂರಿನ ಜನ ಅಪರೂಪದ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಬೆಂಗಳೂರಿಗರು ನಾಳೆ ತಮ್ಮ ನೆರಳಿನ ಮೇಲೆಯೇ ನಡೆಯಲಿದ್ದಾರೆ. ಏಪ್ರಿಲ್ 24 ರಂದು ‘ಜೀರೋ ಶಾಡೋ ಡೇ’ ಎಂಬ ಅಪರೂಪದ ವಿದ್ಯಮಾನ ಬೆಂಗಳೂರಿನಲ್ಲಿ ನಡೆಯಲಿದೆ. ಮಧ್ಯಾಹ್ನ 12:17 ರಿಂದ 12:23 ರವರೆಗೆ ಬೆಂಗಳೂರಿನ ಜನ ಹೊರಗೆ ಬಂದರೆ ಅವರ ನೆರಳು ಅವರಿಗೆ ಕಾಣುವುದಿಲ್ಲ!
ಹೌದು, ಏಪ್ರಿಲ್ 24 ರ ಮಧ್ಯಾಹ್ನ 12:17 ರಿಂದ 12:23 ರವರೆಗೆ ಸೂರ್ಯ ಸರಿಯಾಗಿ ನೆತ್ತಿಯ ಮೇಲೆ ಬರುವ ಕಾರಣ ನೆರಳು ಕಾಣದಂತೆ ಆಗಲಿದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮಾತ್ರವೇ ಈ ವಿದ್ಯಮಾನ ಸಂಭವಿಸಲಿದೆ. ಸೂರ್ಯ ಸರಿಯಾಗಿ ನೆತ್ತಿಯ ಮೇಲೆ ಬರುವ ಕಾರಣದಿಂದ ಉದ್ದನೆಯ ವಸ್ತುಗಳ ನೆರಳು ಕಣ್ಮರೆ ಆಗಲಿವೆ. ಈ ವಿದ್ಯಮಾನ ಕೆಲವು ನಿಮಿಷಗಳ ವರೆಗೆ ಮಾತ್ರ ನಡೆಯಲಿದೆ. ಸೂರ್ಯ ಸರಿದಂತೆ ನೆರಳು ಮತ್ತೆ ಕಾಣಲು ಪ್ರಾರಂಭವಿಸುತ್ತದೆ.
ಬೆಂಗಳೂರಿನಲ್ಲಿ ಇದ್ದ ಕೆರೆಗಳೆಷ್ಟು? ಈಗ ಉಳಿದಿರುವ ಕೆರೆಗಳು ಎಷ್ಟು?
ಈ ವಿದ್ಯಮಾನ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಬೆಂಗಳೂರಿನಲ್ಲಿ ಈ ವಿದ್ಯಮಾನವು ಏಪ್ರಿಲ್ 24 ಅಥವಾ 25 ಹಾಗೂ ಆಗಸ್ಟ್ 18 ರಂದು ಪ್ರತಿ ವರ್ಷ ನಡೆಯುತ್ತದೆ. ಯಾರು ಅಕ್ಷಾಂಶ 23.5, -23.5 ರಲ್ಲಿ ಇರುತ್ತಾರೆಯೋ ಸರಿಯಾಗಿ ಅವರ ತಲೆಯ ಮೆಲ್ಭಾಗದಿಂದ ಸೂರ್ಯ ಸರಿಯಲಿದ್ದಾನೆ. ಹಾಗಾಗಿ ಕೆಲ ನಿಮಿಷಗಳ ಕಾಲ ಅವರ ನೆರಳು ಕಾಣದಂತಾಗುತ್ತದೆ.
ಈ ಜೀರೋ ಶ್ಯಾಡೋ ಡೇ ವಿಶ್ವದ ಹಲವು ಪ್ರದೇಶಗಳಲ್ಲಿ ಒಂದಲ್ಲ ಒಂದು ದಿನ ನಡೆಯುತ್ತಲೇ ಇರುತ್ತದೆ. ಪ್ರತಿ ಪ್ರದೇಶದ ದಿನ ಬದಲಾಗುತ್ತಿರುತ್ತದೆ. ಕೋರಮಂಗಲದಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯು ನಾಳೆ (ಏಪ್ರಿಲ್ 24) ಈ ವಿದ್ಯಮಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 10 ರಿಂದ 1ನೇ ತಾರೀಖಿನ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಹಲವು ವಿದ್ಯಾರ್ಥಿಗಳು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೂರ್ಯನ ಚಲನೆ, ನೆರಳಿನ ರಚನೆಯ ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತಿದೆ.