Bengaluru Thief
ಬೆಂಗಳೂರಿನ ಕುಖ್ಯಾತ ಕಳ್ಳನೊಬ್ಬ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಅದೂ ಬರೋಬ್ಬರಿ ಮೂರು ವರ್ಷಗಳಾದ ಮೇಲೆ. ಈ ಭಲೆ ಕಳ್ಳ ಯಾಸಿನ್ ಖಾನ್ ಅನ್ನು ಪೊಲೀಸರು ಇತ್ತೀಚೆಗಷ್ಟೆ ಸ್ಯಾಟಲೈಟ್ ಬಸ್ಸ್ಟಾಂಡ್ ಬಳಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾಗ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾನೆ. ಮೂರು ವರ್ಷಗಳಿಂದಲೂ ಈ ಐನಾತಿ ಕಳ್ಳನಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು.
ಯಾಸಿನ್ ಖಾನ್ ಅಸಲಿ ಹೆಸರು ಯಾರಿಗೂ ತಿಳಿದಿಲ್ಲ, ಅದೇ ‘ಚೋರ್ ಇಮ್ರಾನ್’ ಎಂದರೆ ಇಡೀ ಬೆಂಗಳೂರಿಗರ ಪೊಲೀಸರಿಗೇ ಗೊತ್ತು, ಏಕೆಂದರೆ ಅಂಥಹಾ ಕುಖ್ಯಾತ ಕಳ್ಳನೀತ. 2005 ರಿಂದಲೂ ಕಳ್ಳತನದಲ್ಲಿ ತೊಡಗಿರುವ ಚೋರ್ ಇಮ್ರಾನ್ ಈ ವರೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಅದರಲ್ಲಿಯೂ ಒಂದು ನಿರ್ದಿಷ್ಟ ಸಮುದಾಯದ ಮನೆಗಳಲ್ಲಿ ಮಾತ್ರವೇ ಕಳ್ಳತನ ಮಾಡುವುದು ಈತನ ವಿಶೇಷತೆ.
ಈ ಹಿಂದೆ ಕೆಲವು ಬಾರಿ ಬಂಧಿತನಾಗಿರುವ ಚೋರ್ ಇಮ್ರಾನ್ಗಾಗಿ ಕಳೆದ ಮೂರು ವರ್ಷಗಳಿಂದಲೂ ಬೆಂಗಳೂರು ಪೊಲೀಸರು ಹುಡುಕಾಡುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ಮುಂಬೈ, ಗೋವಾ, ಹೈದರಾಬಾದ್ ಇನ್ನಿತರೆ ಕಡೆಗಳಲ್ಲಿಯೂ ಈ ಆಸಾಮಿ ಕಳ್ಳತನ ಮಾಡಿದ್ದು ಬೇರೆ ಬೇರೆ ರಾಜ್ಯಗಳ ಪೊಲೀಸರೂ ಸಹ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇತ್ತೀಚೆಗೆ ಹೊಸ ಶೈಲಿ ರೂಢಿಸಿಕೊಂಡಿದ್ದ ಚೋರ್ ಇಮ್ರಾನ್, ತಮ್ಮ ಮೆಚ್ಚಿನ ಸ್ವಿಫ್ಟ್ ಕಾರಿನಲ್ಲಿ ಬಂದು ಕಳ್ಳತನ ಮಾಡಬೇಕಾದ ಮನೆಯ ಬಳಿ ಕಾರು ನಿಲ್ಲಿಸಿ ಹೋಗಿ ಕಳ್ಳತನ ಮಾಡಿಕೊಂಡು ಬರುತ್ತಿದ್ದ. ಈತ ಸ್ವಿಫ್ಟ್ ಕಾರಿನಲ್ಲಿ ಬಂದು ಕಳ್ಳತನ ಮಾಡಿದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿದ್ದವು. ಈಗ ಅದೇ ಕಾರಿನಲ್ಲಿ ಸಿಗ್ನಲ್ನಲ್ಲಿದ್ದಾಗಲೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.
Dog Meat: ನಾಯಿ ಮಾಂಸ ಆರೋಪ, ಅಬ್ದುಲ್ ರಜಾಕ್ನಿಂದ ಮಾಂಸ ಖರೀದಿಸಿದ ಹೋಟೆಲ್ಗಳಿಗೆ ನೊಟೀಸ್
ಒಂದು ಕಡೆ ಕಳ್ಳತನ ಮಾಡುತ್ತಿದ್ದಂತೆ ಬೇರೆ ನಗರಕ್ಕೆ ಪರಾರಿ ಆಗುತ್ತಿದ್ದ ಚೋರ್ ಇಮ್ರಾನ್ ಬೇರೆ ನಗರಗಳಿಗೆ ಹೋಗಿ ಅಲ್ಲಿ ಐಶಾರಾಮಿ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದ. ಆತನ ಹೋಟೆಲ್ ಬಿಲ್ ಸುಮಾರು 10 ಸಾವಿರದಿಂದ 15 ಸಾವಿರ ರೂಪಾಯಿಗಳಾಗಿರುತ್ತಂತೆ. ಕದ್ದ ಚಿನ್ನವನ್ನು ಬೇರೆ ರಾಜ್ಯಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದ ಚೋರ್ ಇಮ್ರಾನ್, ಆ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ.
2005 ರಲ್ಲಿ ಒಂದು ನಿರ್ದಿಷ್ಟ ಸಮುದಾಯದವರು ಚೋರ್ ಇಮ್ರಾನ್ ನ ತಂದೆಯ ಮೇಲೆ ಸುಳ್ಳು ದೂರು ದಾಖಲಿಸಿದರಂತೆ. ಇದರಿಂದಾಗಿ ಚೋರ್ ಇಮ್ರಾನ್ನ ತಂದೆ ಜೈಲು ಸೇರಬೇಕಾಯ್ತಂತೆ. ಇದರಿಂದ ಬೇಸರಗೊಂಡ ಚೋರ್ ಇಮ್ರಾನ್ ಅವರ ಮನೆಗೆ ಕಳ್ಳತನಕ್ಕೆ ಹೋಗಿ ಮನೆಯಲ್ಲಿದ್ದ ಚಿನ್ನ ದೋಚಿದನಂತೆ. ಅದಾದ ಬಳಿಕ ಆ ನಿರ್ದಿಷ್ಟ ಸಮುದಾಯದ ಮನೆಗಳಿಗಷ್ಟೆ ಕಳ್ಳತನಕ್ಕೆ ಹೋಗುತ್ತಿದ್ದನಂತೆ ಚೋರ್ ಇಮ್ರಾನ್. ಇತ್ತೀಚೆಗಿನ ವರ್ಷಗಳಲ್ಲಿ ಬೇರೆ ಬೇರೆ ಮನೆಗಳಿಗೂ ಕಳ್ಳತನಕ್ಕೆ ಹೋಗುತ್ತಾನೆ.