ದುನಿಯಾ ವಿಜಯ್ ನಟಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ನಿನ್ನೆ (ಆಗಸ್ಟ್ 09) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದು. ಬಿಡುಗಡೆ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಈ ಸಿನಿಮಾ ಪಡೆದುಕೊಂಡಿದೆ. ಪ್ರೇಕ್ಷಕರು ‘ಸಲಗ’ದೊಂದಿಗೆ ಹೋಲಿಸಿ ನೋಡುತ್ತಿದ್ದಾರೆ. ಪತ್ರಿಕೆಗಳಲ್ಲಿ ನೆಗೆಟಿವ್ ವಿಮರ್ಶೆಗಳು ಪ್ರಕಟವಾಗಿವೆ. ಇದರ ನಡುವೆಯೂ ಉತ್ತಮ ಮೊತ್ತವನ್ನೇ ‘ಭೀಮ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆ ಹಾಕಿದೆ.
ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರುವ ಸಮಯದಲ್ಲಿ ದುನಿಯಾ ವಿಜಯ್ ಕೇವಲ ರಾಜ್ಯದಲದಲ್ಲಿ ಮಾತ್ರವೇ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸುಮಾರು 9 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಮೊದಲ ದಿನ 9-10 ಕೋಟಿ ಗಳಿಕೆ ಮಾಡಿರುವುದು ‘ಭೀಮ’ ಪಾಲಿಗೆ ಬಹಳ ಒಳ್ಳೆಯ ಮೊತ್ತವೇ ಆಗಿದೆ.
‘ಭೀಮ’ ಸಿನಿಮಾ ತಂಡವೇ ಸಿನಿಮಾದ ಕೆಲೆಕ್ಷನ್ ಬಗ್ಗೆ ಮಾಹಿತಿ ನೀಡಿದೆ. ಆದರೆ ಕೆಲವು ಬಾಕ್ಸ್ ಆಫೀಸ್ ಲೆಕ್ಕಾಚಾರ ಪರಿಣಿತರ ಪ್ರಕಾರ ‘ಭೀಮ’ ಸಿನಿಮಾ ಮೊದಲ ದಿನ ಸುಮಾರು 4 ರಿಂದ 5 ಕೋಟಿ ಮಾತ್ರವೇ ಗಳಿಸಿದೆಯಂತೆ. ಎರಡೂ ಮೊತ್ತವೂ ಸಹ ನಿರಾಶಾದಾಯಕ ಮೊತ್ತವೇನಲ್ಲ. ಸಿನಿಮಾದ ಬಗ್ಗೆ ಮೊದಲ ದಿನವೇ ಸಾಕಷ್ಟು ನೆಗೆಟಿವ್ ವಿಮರ್ಶೆಗಳು ಬಂದಾಗ್ಯೂ ಗೌರವಯುತ ಮೊತ್ತವನ್ನೇ ‘ಭೀಮ’ ಕಲೆ ಹಾಕಿದಂತಿದೆ.
Rishab Shetty: ರಿಷಬ್ ಶೆಟ್ಟರ ಬಾಲಿವುಡ್ ಸಿನಿಮಾ ಪ್ರಾರಂಭ ಯಾವಾಗ?
ಮೊದಲ ದಿನ ಉತ್ತಮ ಮೊತ್ತ ಕಲೆ ಹಾಕಿರುವ ಭೀಮ, ವಾರಾಂತ್ಯದಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ‘ಭೀಮ’ ಗೆ ಎದುರಾಗಿ ಯಾವುದೇ ಸಿನಿಮಾ ಇಲ್ಲದ ಕಾರಣ ಈ ವಾರ ಉತ್ತಮ ಕಲೆಕ್ಷನ್ ಆಗಲಿದೆ. ಮುಂದಿನ ಗುರುವಾರ ಅಂದರೆ ಆಗಸ್ಟ್ 15 ಕ್ಕೆ ಕನ್ನಡ ಸೇರಿದಂತೆ ಪರಭಾಷೆಯ ಹಲವು ಸಿನಿಮಾಗಳು ಬಿಡುಗಡೆ ಆಗಲಿವೆ ಹಾಗಾಗಿ ಅಲ್ಲಿವರೆಗೆ ‘ಭೀಮ’ ಬಾಕ್ಸ್ ಆಫೀಸ್ ನಲ್ಲಿ ಒಂಟಿ ಪಯಣ ನಡೆಸಬಹುದಾಗಿದೆ.
‘ಭೀಮ’ ಸಿನಿಮಾ, ಡ್ರಗ್ಸ್ ವಿರುದ್ಧ ನಿಲವು ತಳೆದ ಲೋಕಲ್ ರೌಡಿಯೊಬ್ಬನ ಕತೆ ಒಳಗೊಂಡಿದೆ. ಬೆಂಗಳೂರಿನಲ್ಲಿ ಗಾಂಜಾ ಹೇಗೆ ಪ್ರಸಾರ ಆಗುತ್ತಿದೆ, ಹೇಗೆ ಯುವಕರು ನಶೆಯ ಜಾಲದೊಳಕ್ಕೆ ಬೀಳುತ್ತಿದ್ದಾರೆ ಎಂಬುದನ್ನು ತೋರಿಸುವ ಪ್ರಯತ್ನವನ್ನು ದುನಿಯಾ ವಿಜಯ್ ಮಾಡಿದ್ದಾರೆ. ಆದರೆ ಸಿನಿಮಾ ನೋಡಿದ ಮಂದಿ ‘ಸಲಗ’ ಸಿನಿಮಾದೊಂದಿಗೆ ಹೋಲಿಸುತ್ತಿದ್ದು, ‘ಸಲಗ’ದಷ್ಟು ಸಿನಿಮಾ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ.