Rakshit Shetty
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಹೆಸರು ಮಾಡಿರುವ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಹಾಗೆಂದು ರಕ್ಷಿತ್ ಶೆಟ್ಟಿ ವಿರುದ್ಧ ದಾಖಲಾಗಿರುವುದು ಕ್ರಿಮಿನಲ್ ದೂರಲ್ಲ, ಬದಲಿಗೆ ಸಿನಿಮಾಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಮಾಡಿ ಸಲ್ಲಿಸಲಾಗಿರುವ ದೂರು. ಆದರೆ ದೂರು ನೀಡುವವರು ರಕ್ಷಿತ್ ಶೆಟ್ಟಿ ಅವರು ಹಣ ನೀಡುವುದಾಗಿ ತಿಳಿಸಿ ವಂಚನೆ ಮಾಡಿದ್ದಾರೆ ಎಂದಿದ್ದಾರೆ.
ರಕ್ಷಿತ್ ಶೆಟ್ಟಿ, ಸ್ವತಃ ನಿರ್ದೇಶಕರಾಗಿದ್ದರೂ ಸಹ ಇತರೆ ನಿರ್ದೇಶಕರ ಸಿನಿಮಾಗಳಿಗೆ ಬಂಡವಾಳ ಹೂಡುತ್ತಾ ಬರುತ್ತಿದ್ದಾರೆ. ಕೆಲವು ಹೊಸ ಪ್ರತಿಭಾವಂತ ನಿರ್ದೇಶಕರ ಸಿನಿಮಾಗಳಿಗೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಇದೇ ವರ್ಷ ಬಿಡುಗಡೆ ಆದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದರು. ಲೂಸ್ ಮಾದ ಯೋಗಿ ಮತ್ತು ದಿಗಂತ್ ನಟಿಸಿದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಸಾಧಾರಣ ಪ್ರದರ್ಶನ ಕಂಡಿತ್ತು. ಈಗ ಆ ಸಿನಿಮಾದಿಂದ ರಕ್ಷಿತ್ ಶೆಟ್ಟಿಗೆ ಕಂಟಕ ಎದುರಾಗಿದೆ.
ಹಾಸ್ಯಮಯ ಸಿನಿಮಾ ಆಗಿರುವ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಕೆಲವು ಸನ್ನಿವೇಶಗಳಿಗೆ ಕನ್ನಡದ ಹಳೆಯ ಹಾಡುಗಳನ್ನು ತಮಾಷೆಯ ದೃಷ್ಟಿಯಿಂದ ಬಳಸಲಾಗಿತ್ತು. ‘ನ್ಯಾಯ ಎಲ್ಲಿದೆ’, ‘ಗಾಳಿಮಾತು’ ಸಿನಿಮಾದ ಹಾಡು ಹಾಗೂ ಇನ್ನೂ ಕೆಲವು ಹಾಡುಗಳನ್ನು ಬಳಸಲಾಗಿತ್ತು. ಈ ಹಾಡುಗಳ ಹಕ್ಕು ಹೊಂದಿರುವ ಬೆಂಗಳೂರಿನ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯವರು ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪ ಹೊರಿಸಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಪೊಲೀಸರು ನಟ ರಕ್ಷಿತ್ ಶೆಟ್ಟಿಗೆ ಕರೆ ಮಾಡಿ ವಿಚಾರಣಗೆ ಹಾಜರಾಗುವಂತೆ ಸೂಚಿಸಿದ್ದಾರೆ.
Kalki 2898 AD: ಕಲ್ಕಿ ಸಿನಿಮಾದ ನಟರು ಪಡೆದ ಸಂಭಾವನೆ ಎಷ್ಟು?
ದೂರು ನೀಡಿರುವ ಬಗ್ಗೆ ಮಾತನಾಡಿರುವ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್, ಸಿನಿಮಾ ಬಿಡುಗಡೆ ಆಗುವ ಮುನ್ನವೇ ಹಣ ನೀಡುವ ಬಗ್ಗೆ ಮಾತುಕತೆ ಮಾಡಿದ್ದೆವು. ನಾವು ನಿರ್ದಿಷ್ಟ ಮೊತ್ತವನ್ನು ನೀಡುವಂತೆ ಕೇಳಿದ್ದೆವು, ಅದಕ್ಕೆ ಅವರೂ ಸಹ ಒಪ್ಪಿದ್ದರು. ಕೇಸು ಹಾಕಬೇಡಿ ಎಂದು ಕೇಳಿಕೊಂಡಿದ್ದರು. ಅದರಂತೆ ನಾವು ಕೇಸು ದಾಖಲಿಸದೆ ಸುಮ್ಮನಿದ್ದೆವು. ಆದರೆ ಸಿನಿಮಾ ಬಿಡುಗಡೆ ಆದ ಮೇಲೆ ಎಷ್ಟು ಬಾರಿ ಕಾಲ್ ಮಾಡಿದರೂ ಪ್ರತಿಕ್ರಿಯೆ ನೀಡಲಿಲ್ಲ. ಹಣವನ್ನೂ ನೀಡಿಲ್ಲ ಹಾಗಾಗಿ ಈಗ ದೂರು ನೀಡಿದ್ದೇವೆ ಎಂದಿದ್ದಾರೆ.
ರಕ್ಷಿತ್ ಶೆಟ್ಟಿ ಮೇಲೆ ಹಕ್ಕು ಸ್ವಾಮ್ಯ ಉಲ್ಲಂಘನೆ ಕೇಲು ದಾಖಲಾಗಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ ‘ಕಿರಿಕ್ ಪಾರ್ಟಿ’ ಸಿನಿಮಾನಲ್ಲಿ ಶಾಂತಿ-ಕ್ರಾಂತಿ ಸಿನಿಮಾದ ಸಂಗೀತ ಬಳಸಿದ್ದಕ್ಕೆ ಲಹರಿ ಸಂಸ್ಥೆಯವರು ಪ್ರಕರಣ ದಾಖಲಿಸಿದ್ದರು. ಆ ಪ್ರಕರಣ ಬಹಳ ದಿನಗಳ ವರೆಗೆ ನಡೆದಿತ್ತು. ಅಂತಿಮವಾಗಿ ರಕ್ಷಿತ್ ಶೆಟ್ಟಿ ಮತ್ತು ಸಿನಿಮಾದ ಇತರೆ ನಿರ್ಮಾಪಕರು ಹಣ ಕೊಟ್ಟು ಪ್ರಕರಣ ಸೆಟಲ್ ಮಾಡಿಕೊಂಡರು.