Science News
ಮನುಷ್ಯ ಈ ವರೆಗೂ ಮಾಡಿರುವ ಸಾಹಸಗಳನ್ನೆಲ್ಲ ಮೀರಿಸುವ ಸಾಹಸಕ್ಕೆ ಕೈ ಹಾಕಿದ್ದಾನೆ. ಚಂದ್ರನ ಮೇಲೆ ಮನುಷ್ಯ ಕಾಲಿರಿಸಿದ್ದು ಮನುಷ್ಯನ ಈವರೆಗಿನ ಅತಿ ದೊಡ್ಡ ಸಾಹಸ ಎನ್ನಲಾಗಿತ್ತು. ಆದರೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಚಂದ್ರನ ಮೇಲೆ ಪವರ್ ಪ್ಲ್ಯಾಂಟ್ ಸ್ಥಾಪನೆ ಮಾಡಲು ಹೊರಟಿದ್ದಾನೆ. ಚಂದ್ರನ ಮೇಲೆ ಅತ್ಯಂತ ಶಕ್ತಿಯುತ ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್ ಸ್ಥಾಪನೆ ಮಾಡಲು ರಷ್ಯಾ ಹಾಗೂ ಚೀನಾ ಕೈ ಜೋಡಿಸಿವೆ. ಆ ನಿಟ್ಟಿನಲ್ಲಿ ಈಗಾಗಲೇ ಕೆಲಸವನ್ನೂ ಸಹ ಪ್ರಾರಂಭ ಮಾಡಿವೆ.
ಕಳೆದ ತಿಂಗಳು ಚೀನಾ ಹಾಗೂ ರಷ್ಯಾದ ನಡುವೆ ಈ ಬಗ್ಗೆ ಮಾತುಕತೆ ನಡೆದಿದ್ದು, ಈ ಬಹುದೊಡ್ಡ ಪ್ರಾಜೆಕ್ಟ್ ಅನ್ನು ಜಂಟಿಯಾಗಿ ನಡೆಸಲು ನಿರ್ಧರಿಸಿ ಘೋಷಣೆ ಮಾಡಿದ್ದಾರೆ. ಇನ್ನು ಹತ್ತು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುತ್ತೇವೆಂದು ಭರವಸೆಯನ್ನು ಸಹ ನೀಡಿದ್ದಾರೆ. ರಷ್ಯಾದ ಅಂತರಿಕ್ಷ ಯೋಜನಾ ಸಂಸ್ಥೆ ರೊಕೊಸ್ಮೋಸ್ನ ಮುಖ್ಯಸ್ಥ ಯುರಿ ಬೊರಿಸೋವ್ ಈ ಬಗ್ಗೆ ಮಾತನಾಡಿದ್ದು, ‘ಇಂಟರ್ನ್ಯಾಷನಲ್ ಲೂನಾರ್ ಸೈಂಟಿಫಿಕ್ ಸ್ಟೇಷನ್ ನ ನಿರ್ಮಾಣವು ಎರಡು ಹಂತದಲ್ಲಿ ನಡೆಯಲಿದೆ. 2025 ಕ್ಕೆ ಒಂದು ಹಂತ 2035 ಕ್ಕೆ ಇನ್ನೊಂದು ಹಂತ’ ಎಂದಿದ್ದಾರೆ.
‘ದೀರ್ಘಕಾಲೀನ ಮತ್ತು ವಿಶ್ವಾಸಾರ್ಹ ಪರಮಾಣು ಶಕ್ತಿಯ ಮೂಲವನ್ನು ಚಂದ್ರನ ಮೇಲೆ ಅಭಿವೃದ್ಧಿಪಡಿಸುವುದು ಈಗಿನ ಅಗತ್ಯತೆಯಾಗಿದೆ. ಚಂದ್ರ ಪರಮಾಣು ಶಕ್ತಿ ಉತ್ಪಾದನೆಗೆ ಸೂಕ್ತವಾದ ಸ್ಥಳವಾಗಿದೆ. ಚಂದ್ರನ ಒಂದು ರಾತ್ರಿ ಭೂಮಿಯ 14 ದಿನಗಳಿಗೆ ಸಮ. ಹಾಗಾಗಿ ಅಲ್ಲಿ ಸೌರ ಶಕ್ತಿ ಫಲಕಗಳನ್ನು ನಿರ್ಮಿಸಿ ಅದರಿಂದ ಶಕ್ತಿಯನ್ನು ಉತ್ಪಾದನೆ ಮಾಡಲು ಆಗುವುದಿಲ್ಲ. 2021 ರಲ್ಲಿಯೇ ನಾವು ಹಾಗೂ ಚೀನಾ ಚಂದ್ರನ ಮೇಲೆ ಪರಮಾಣು ಶಕ್ತಿ ಉತ್ಪಾದನಾ ಘಟಕ ನಿರ್ಮಿಸುವ ಘೋಷಣೆ ಮಾಡಿದ್ದೇವೆ. ಬೇರೆ ದೇಶಗಳು ಸಹ ಇದರಲ್ಲಿ ಭಾಗಿಯಾಗಬಹುದು’ ಎಂದಿದ್ದಾರೆ.
ಚಂದ್ರನ ಮೇಲೆ ಪರಮಾಣು ಶಕ್ತಿ ಉತ್ಪಾದನಾ ಘಟಕ ಸ್ಥಾಪನೆಯಿಂದಾಗಿ ಚಂದ್ರನ ಮೇಲಿನ ಅಧ್ಯಯನ ಇನ್ನಷ್ಟು ಚುರುಕಾಗುತ್ತದೆ. ಈಗಾಗಲೇ ಎಲಾನ್ ಮಸ್ಕ್ರ ಟೆಸ್ಲಾ ಮತ್ತು ನಾಸಾ ಚಂದ್ರನ ಮೇಲೆ ಮಾನವ ವಸಹಾತು ನಿರ್ಮಾಣಕ್ಕೆ ಪ್ರಯತ್ನ ಆರಂಭಿಸಿದೆ. ಬುಧ ಗ್ರಹದ ಮೇಲೆಯೂ ಸಹ ಇಂಥಹುದೇ ಪ್ರಯೋಗಗಳನ್ನು ನಡೆಸಲು ಸಿದ್ಧತೆ ಆರಂಭವಾಗಿದೆ. ಇದಕ್ಕೆಲ್ಲ ಈ ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್ ಸಹಾಯ ಮಾಡಲಿದೆ. ಆದೆರೆ ರಷ್ಯಾ, ಚೀನಾದೊಂದಿಗೆ ಅಮೆರಿಕದ ರಾಜತಾಂತ್ರಿಕ ಸಂಬಂಧಗಳು ತೀರಾ ಹಳಸಿರುವ ಕಾರಣ, ಅಮೆರಿಕದ ಹೆಜ್ಜೆ ಈ ನಿಟ್ಟಿನಲ್ಲಿ ಮಹತ್ವ ವಹಿಸಿದೆ.