ಚಿತ್ರದುರ್ಗದ ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ನಟ ದರ್ಶನ್ ಹಾಗೂ ಇನ್ನು 12 ಮಂದಿಯನ್ನು ನಿನ್ನೆ (ಜೂನ್ 11) ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 6 ದಿನಗಳ ಕಾಲ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡೊದೆ. ನಿನ್ನೆ ಇಡೀ ದಿನ ದರ್ಶನ್ ಹಾಗೂ ಅವರ ಸಹಚರರು ಪೊಲೀಸ್ ಠಾಣೆಯಲ್ಲಿ ಕಳೆದಿದ್ದಾರೆ. ಪವಿತ್ರಾ ಗೌಡ ಅವರನ್ನು ಆಶ್ರಯ ಕೇಂದ್ರದಲ್ಲಿ ಇಡಲಾಗಿತ್ತು. ಇಂದು (ಜೂನ್ 12) ಈ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ.
ರೇಣುಕಾ ಸ್ವಾಮಿಯ ಶವವನ್ನು ಎಸೆದು, ಆ ಕೊಲೆಯ ಆರೋಪವನ್ನು ಹೊರಿಸಿಕೊಳ್ಳಲು ಗ್ಯಾಂಗ್ ಒಂದಕ್ಕೆ ದರ್ಶನ್ 30 ಲಕ್ಷ ರೂಪಾಯಿ ಹಣ ನೀಡಿದ್ದರು ಎಂಬ ಮಾಹಿತಿ ಇಂದು ಹೊರಬಿದ್ದಿದೆ. ಅಂತೆಯೇ ನಾಲ್ಕು ಮಂದಿ ಬೇರೆ ಗ್ಯಾಂಗ್ ನವರು ಶವ ಎಸೆದು, ಕೊಲೆ ತಾವೇ ಮಾಡಿದ್ದಾಗಿ ಪೊಲೀಸರ ಮುಂದೆ ಶರಣಾಗಿದ್ದರು. ಆದರೆ ತನಿಖೆ ಮಾಡಿದಾಗ ನಿಜ ವಿಚಾರ ಗೊತ್ತಾಗಿತ್ತು.
ಕೊಲೆ ನಡೆದಾಗ ದರ್ಶನ್ ಸ್ಥಳದಲ್ಲಿ ಇರಲಿಲ್ಲ ಎಂದೂ ಸಹ ಇಂದು ಕೆಲವು ಮೂಲಗಳು ಹೇಳುತ್ತಿವೆ. ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ರೇಣುಕಾ ಸ್ವಾಮಿಯನ್ನು ಕೂಡಿ ಹಾಕಿದ್ದ ಶೆಡ್ ಗೆ ಹೋಗಿದ್ದರು. ಅಲ್ಲಿ ಪವಿತ್ರಾ, ರೇಣುಕಾ ಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ದರ್ಶನ್ ಬೆಲ್ಟ್ ನಿಂದ ಹಲ್ಲೆ ಮಾಡಿದ್ದರು. ಆ ಬಳಿಕ ರೇಣುಕಾ ಸ್ವಾಮಿಗೆ ಊಟ ಕೊಟ್ಟು, ನೋವಿನ ಮಾತ್ರೆ ಕೊಟ್ಟು ಕಳಿಸುವಂತೆ ಹೇಳಿ ಹೊರಟುಬಿಟ್ಟರಂತೆ. ಈ ವಿಷಯ ಸಹ ಇಂದು ಹೊರಬಿದ್ದಿದೆ.
https://samasthanews.com/will-darshan-thoogudeepa-get-punishment-what-lawyer-says/
ಅಪರಾಧಕ್ಕೆ ಬಳಸಲಾಗಿದೆ ಎನ್ನಲಾಗುತ್ತಿರುವ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒಂದು ಸ್ಕಾರ್ಪಿಯೋ ಹಾಗೂ ಒಂದು ಜೀಪ್ ರ್ವಾಂಗ್ಲರ್ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಎರಡೂ ವಾಹನಗಳು ದರ್ಶನ್ ಆಪ್ತರ ಹೆಸರಿನಲ್ಲಿವೆ. ಆ ಇಬ್ಬರೂ ಸಹ ಈಗ ದರ್ಶನ್ ಜೊತೆ ಜೈಲಿನಲ್ಲಿದ್ದಾರೆ. ವಶಪಡಿಸಿಕೊಂಡ ಕಾರಿನಲ್ಲಿ ಒಂದು ಮದ್ಯದ ಬಾಟಲಿ ಮತ್ತು ಒಂದು ವ್ಯಾನಿಟಿ ಬ್ಯಾಗ್ ದೊರೆತಿದೆ.
ದರ್ಶನ್ ಮೇಲೆ ರೌಡಿಶೀಟರ್ ತೆರೆಯಬೇಕು ಎಂಬ ಬಗ್ಗೆ ಒತ್ತಡವಿದ್ದು ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚಿಸುವ ಭರವಸೆ ನೀಡಿದ್ದಾರೆ.
ರೇಣುಕಾ ಸ್ವಾಮಿಯ ಅಂತ್ಯಕ್ರಿಯೆ ಚಿತ್ರದುರ್ಗದಲ್ಲಿ ನಡೆದಿದೆ. ಜೊತೆಗೆ ಚಿತ್ರದುರ್ಗದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿರುದ್ಧ ವೀರಶೈವ ಲಿಂಗಾಯತ ಸಮುದಾಯ ಹಾಗೂ ಇತರೆ ಕೆಲವು ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ. ದರ್ಶನ್ ಗೆ ಜೀವಾವಧಿ ಶಿಕ್ಷೆ ನೀಡಬೇಕೆಂಬ ಬೇಡಿಕೆ ಇರಿಸಿವೆ.
ದರ್ಶನ್ ಇಂದ ಹಣ ಪಡೆದು ರೇಣುಕಾ ಸ್ವಾಮಿ ಶವ ಎಸದಿದ್ದಾರೆ ಎಂದು ಆರೋಪಿಸಲಾಗುತ್ತಿರುವ ನಾಲ್ವರನ್ನು ಪೊಲೀಸರು ಇಂದು ಸ್ಥಳ ಮಹಜರು ಮಾಡಿಸಿದ್ದಾರೆ. ಅವರನ್ನು ಸುಮನಹಳ್ಳಿ ಮೋರಿಯ ಬಳಿ ಕರೆತಂದು ಮಹಜರು ಮಾಡಿಸಲಾಗಿದೆ.
ದರ್ಶನ್ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ಗೆ ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ಅಲ್ಲದೆ ಅಲ್ಲಿ ಅಪರಾಧ ದೃಶ್ಯವನ್ನು ಪುನರ್ ಸೃಷ್ಟಿಸುವ ಕಾರ್ಯವನ್ನು ಮಾಡಿ ಅದರ ವಿಡಿಯೋ ದಾಖಲಾತಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬ ಆರೋಪಿಯಿಂದಲೂ ಪ್ರತ್ಯೇಕವಾಗಿ ಮಹಜರು ಮಾಡಿಸಲಾಗಿದೆ ಎನ್ನಲಾಗುತ್ತಿದೆ.
ದರ್ಶನ್ ಅನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಒತ್ತಡ ಸಹ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅದು ನಮ್ಮ ಕೈಯಲ್ಲಿಲ್ಲ ಕಲಾವಿದರ ಸಂಘಕ್ಕೆ ಅಧಿಕಾರ ಇದೆ. ಆದರೆ ಅಂಬರೀಶ್ ನಿಧನದ ಬಳಿಕ ಕಲಾವಿದರ ಸಂಘ ಸಕ್ರಿಯವಾಗಿಲ್ಲ ಎಂದಿದ್ದಾರೆ. ಅಲ್ಲದೆ ಫಿಲಂ ಚೇಂಬರ್ ಆಗಿರುವ ಘಟನೆಯನ್ನು ಖಂಡಿಸುತ್ತದೆ ಎಂದಿದ್ದಾರೆ.
ನಿನ್ಮೆ ಆರೋಪಿಗಳ ಸಂಖ್ಯೆ 13 ಆಗಿತ್ತು. ಆದರೆ ವಿಚಾರಣೆ ಬಳಿಕ ಆರೋಪಿಗಳ ಸಂಖ್ಯೆ 17 ಆಗಿದೆ. ಆದರೆ ನಾಲ್ಕು ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಆ ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ.