Darshan
ನಟ ದರ್ಶನ್ ಏನೇ ಮಾಡಲು ಮುಂದಾದರೂ ಅಲ್ಲೋಂದು ವಿವಾದ ಅವರ ಬೆನ್ನೇರುತ್ತದೆ. ದರ್ಶನ್ ಒಳ್ಳೆಯ ಕಾರ್ಯ ಕೈಗೆತ್ತಿಕೊಂಡಾಗಲು ಇಂಥಹಾ ಅವಘಡಗಳು ನಡೆದಿದ್ದುಂಟು. ಇದೀಗ ಹಾಗೆಯೇ ಆಗಿದೆ. ದಸರಾ ಆನೆ ಅರ್ಜುನ ಕಾರ್ಯಾಚರಣೆಯೊಂದರಲ್ಲಿ ಮೃತಪಟ್ಟಿದ್ದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಅರ್ಜುನನ ನಿಧನಕ್ಕೆ ರಾಜ್ಯವೇ ಕಣ್ಣೀರು ಹಾಕಿತ್ತು. ಆದರೆ ಅದಾದ ಕೆಲವೇ ದಿನಗಳಲ್ಲಿ ಎಲ್ಲರೂ ಅರ್ಜುನನ್ನು ಮರೆತುಬಿಟ್ಟರು. ಆದರೆ ಅರ್ಜುನನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ದರ್ಶನ್, ಅರ್ಜುನನಿಗೆ ಸರಿಯಾದ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸಬೇಕೆಂದು ಮನವಿ ಮಾಡಿದ್ದರು.
ಅರ್ಜುನನ ಸಮಾಧಿ ಮಾಡಿದ್ದ ಜಾಗದಲ್ಲಿ ಮಳೆಯಿಂದ ಮಣ್ಣು ಸವೆಯುತ್ತಿತ್ತು ಆ ಕಾರಣದಿಂದಾಗಿ ದರ್ಶನ್ ಸಮಾಧಿ ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಬಳಿಕ ದರ್ಶನ್ ಮನವಿಗೆ ಅನೇಕರು ಸ್ಪಂದಿಸಿದರು. ದರ್ಶನ್ ಸ್ವತಃ ಹಣ ಕೊಟ್ಟು ಕೆಲವು ಗೆಳೆಯರನ್ನು ಕಳಿಸಿ ಸಮಾಧಿ ಸುತ್ತ ಕಲ್ಲು ಹಾಸುವಂತೆ ಸೂಚಿಸಿದ್ದರು. ಅಂತೆಯೇ ದರ್ಶನ್‌ರ ಆಪ್ತರು ಅರ್ಜುನನ ಸಮಾಧಿ ಬಳಿ ಕೆಲಸ ಆರಂಭಿಸಿದ್ದರು. ಆದರೆ ಅಲ್ಲಿಗೆ ಆಗಮಿಸಿದ ಅರಣ್ಯ ಇಲಾಖೆಯವರು ದರ್ಶನ್ ಅಭಿಮಾನಿಗಳನ್ನು ಮರಳಿ ಕಳಿಸಿದರು. ಅರ್ಜುನನಿಗೆ ತಾವೇ ಸಮಾಧಿ ಮಾಡುವುದಾಗಿ ಹೇಳಿದ್ದರು. ದರ್ಶನ್ ಕೊಟ್ಟಿದ್ದ ಕಲ್ಲುಗಳನ್ನು ಸಮಾಧಿ ಸುತ್ತ ಹಾಸಿ ಈಗ ಹಣವನ್ನು ದರ್ಶನ್‌ರ ಆಪ್ತರಿಗೆ ಹಾಕಿರುವುದಾಗಿ ಹೇಳಿದ್ದರು.
ಇದೀಗ ದರ್ಶನ್ ರ ಆಪ್ತ ನಾಗರಾಜ್ ವಿಡಿಯೋ ಒಂದರಲ್ಲಿ ಮಾತನಾಡಿದ್ದು, ಅರಣ್ಯ ಇಲಾಖೆಯವರು ದರ್ಶನ್ ಅವರು ಕೊಡಿಸಿರುವ ಕಲ್ಲುಗಳನ್ನೇ ಬಳಸಿ ಸಮಾಧಿ ಕಟ್ಟುವ ಪ್ರಯತ್ನ ಮಾಡಿದ್ದಾರೆ. ನಮ್ಮ ಹುಡುಗರು ಅದಾಗಲೇ ಸಮಾಧಿ ಸುತ್ತ ಹಳ್ಳ ಅಗೆದು ಎಲ್ಲ ಕೆಲಸ ಮುಗಿಸಿದ್ದರು. ಅರಣ್ಯ ಇಲಾಖೆಯವರು ಕಲ್ಲು ಮಾತ್ರ ಇಟ್ಟು ನಾವೇ ಕೆಲಸ ಮಾಡಿದ್ದಾಗಿ ಹೇಳುತ್ತಿದ್ದಾರೆ. ಹಣವನ್ನು ವಾಪಸ್ ಹಾಕಿದ್ದೀವಿ ಎಂದಿದ್ದಾರೆ. ಅವರು ಹಾಕಿರುವ ಹಣ ನನಗಾಗಲಿ, ದರ್ಶನ್ ಅವರಿಗಾಗಲಿ ತಲುಪಿಲ್ಲ. ಅವರು ಹಾಕುವ ಹಣದ ಅವಶ್ಯಕತೆ ಸಹ ನಮಗೆ ಇಲ್ಲ. ದರ್ಶನ್ ಸರ್ ಸಾಕಷ್ಟು ರೀತಿಯಲ್ಲಿ ಅರಣ್ಯ ಇಲಾಖೆ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಒಳ್ಳೆ ಕೆಲಸ ಮಾಡಲು ಬಂದಾಗ ಅವಮಾನ ಮಾಡಿ ಕಳುಹಿಸಿದ್ದೀರಾ. ನಮ್ಮ ಹುಡುಗರು ಕಷ್ಟಪಟ್ಟಿದ್ದರು. ಕೊನೆಗೆ ಬಂದು ಪೋಸ್ ಕೊಟ್ಟಿದ್ದೀರಾ. ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ.
GT Mall: ರೈತರಿಗೆ ಅವಮಾನ ಮಾಡಿದ ಬೆಂಗಳೂರಿನ ಪ್ರಸಿದ್ಧ ಮಾಲ್
ಅರ್ಜುನ ಆನೆಯ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ದರ್ಶನ್, ಮೇ 2 ರಂದು ‘ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು’ ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು.