Darshan Thoogudeepa
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ. ಕಾನೂನಿನ ಕುಣಿಕೆ ದರ್ಶನ್ ಕೊರಳಿಗೆ ತುಸು ಗಟ್ಟಿಯಾಗಿಯೇ ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ದರ್ಶನ್ ರ ಆತ್ಮೀಯನೇ, ದರ್ಶನ್ ಅನ್ನು ಸಂಕಷ್ಟಕ್ಕೆ ಸಿಲುಕಿಸಲಿದ್ದಾನೆ ಎಂಬ ವರದಿಗಳು ತುಸು ಗಟ್ಟಿಯಾಗಿ ಹರಿದಾಡುತ್ತಿವೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿ 11 ಮಂದಿಯ ಬಂಧನವಾಗಿತ್ತು. ಇನ್ನೂ ನಾಲ್ಕು ಜನರ ಬಂಧನವೂ ನಿನ್ನೆ ಆಗಿದೆ ಎನ್ನಲಾಗುತ್ತಿದೆ. ಇವರಲ್ಲಿ ದರ್ಶನ್ ರ ಕೆಲವು ಅತ್ಯಾಪ್ತರು ಸಹ ಇದ್ದಾರೆ. ಅವರಲ್ಲಿ ಒಬ್ಬ ಆರೋಪಿ ದೀಪಕ್. ಪ್ರಕರಣದಲ್ಲಿ ಆರೋಪಿ ಆಗಿರುವ ದೀಪಕ್ ದರ್ಶನ್ ಗೆ ಬಹು ಆಪ್ತ. ಆದರೆ ಈಗ ಇದೇ ದೀಪಕ್ ದರ್ಶನ್ ಗೆ ಮುಳುವಾಗಿದ್ದಾರೆ.
ಆರೋಪಿ ಆಗಿರುವ ದೀಪಕ್ ಅಪ್ರೂವರ್ ಆಗಿದ್ದು, ಘಟನೆಯ ಪೂರ್ಣ ವಿವರನ್ನು ಪೊಲೀಸರ ಮುಂದೆ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಹಲ್ಲೆ ವಿಚಾರ ಸಹಿತ ಸಂಪೂರ್ಣ ಘಟನೆಯ ವಿವರವನ್ನು ಪೊಲೀಸರ ಮುಂದೆ ಒಪ್ಪಿಕಪಂಡಿದ್ದು, ಸಿಆರ್ ಪಿಸಿ 166 ಅಡಿಯಲ್ಲಿ ದೀಪಕ್ ನ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ದಿನ ತನಿಖೆಯನ್ನು ದೀಪಕ್ ನ ಹೇಳಿಕೆ ಆಧಾರದಲ್ಲಿ ಮುಂದುವರೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದಹಾಗೆ ಈ ದೀಪಕ್ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರಿಗೆ ಹತ್ತಿರದ ಸಂಬಂಧಿಯಾಗಿದ್ದು, ದೀಪಕ್ ಅನ್ನು ಆರೋಪಿಯ ಬದಲಾಗಿ ಅಪ್ರೂವರ್ ಅನ್ನಾಗಿ ಮಾಡಿ ಪ್ರಕರಣದಿಂದ ಬೇಗ ಮುಕ್ತಿ ಕೊಡಿಸುವ, ಶಿಕ್ಷೆಯನ್ನು ತಗ್ಗಿಸುವ ಪ್ರಯತ್ನವಾಗಿ ಹೀಗೆ ಮಾಡಲಾಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.
ದೀಪಕ್, ದರ್ಶನ್ ವಿರುದ್ಧ ಹೇಳಿಕೆ ದಾಖಲಿಸಿದ್ದು, ದರ್ಶನ್ ವಿರುದ್ಧ ಕೇಸು ಇನ್ನಷ್ಟು ಬಲಗೊಂಡಿದೆ ಎಂಬ ಮಾತುಗಳು ಸಹ ಕೇಳಿ ಬಂದಿದೆ. ಈ ವರೆಗೂ ಇದ್ದ ಕೊಲೆ, ಅಪಹರಣದ ಜೊತೆಗೆ ಇನ್ನಷ್ಟು ಪ್ರಕರಣಗಳು ದರ್ಶನ್ ಹೆಗಲು ಏರಲಿವೆ ಎನ್ನಲಾಗುತ್ತಿವೆ.