Darshan
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಾಣಾಧೀನ ಕೈದಿ ಆಗಿರುವ ದರ್ಶನ್, ಜೈಲಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹೊರಗೆ ಐಶಾರಾಮಿ ಜೀವನ ನಡೆಸಿದ್ದ ದರ್ಶನ್ ಗೆ ಜೈಲಿನಲ್ಲಿ ದಿನಗಳನ್ನು ಕಳೆಯುವುದು ಬಹಳ ಕಷ್ಟವಾಗುತ್ತಿದೆ. ಜೈಲಿನ ಊಟ ದರ್ಶನ್ ಗೆ ಹೊಂದಿಕೆ ಆಗದ ಕಾರಣ ದರ್ಶನ್ ಅನಾರೋಗ್ಯಕ್ಕೆ ಈಡಾಗಿದ್ದರು, ಅವರಿಗೆ ಭೇದಿ ಸಮಸ್ಯೆ ಕಾಡಿತ್ತು. ಮನೆಯಿಂದ ಊಟ ಕೋರಿ ಅರ್ಜಿ ಹಾಕಿದರಾದರೂ ನ್ಯಾಯಾಲಯ ಅದನ್ನು ನಿರಾಕರಿಸಿತು. ಇದೀಗ ದರ್ಶನ್ ಗೆ ಮತ್ತೊಂದು ಸಮಸ್ಯೆ ಎದುರಾಗಿದೆ.
ದರ್ಶನ್ ಜೈಲಿಗೆ ಹೋಗುವ ಮುನ್ನ ಕೈಗೆ ಪೆಟ್ಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕವೂ ಹಲವು ದಿನ ಕೈಗೆ ವೈದ್ಯರ ಸಲಹೆ ಮೇರೆಗೆ ಬ್ಯಾಂಡೇಜ್ ಸುತ್ತಿಕೊಂಡು ಓಡಾಡುತ್ತಿದ್ದರು. ಆದರೆ ಈಗ ಜೈಲಿನಲ್ಲಿರುವ ದರ್ಶನ್ ಗೆ ಮತ್ತೆ ಕೈ ನೋವು ಪ್ರಾರಂಭವಾಗಿದೆ. ಜೈಲಿನಲ್ಲಿ ನೆಲದ ಮೇಲೆ ಚಾಪೆಯ ಮೇಲೆ ದಿಂಬಿಲ್ಲದಂತೆ ಮಲಗಿ ದರ್ಶನ್ ಗೆ ಮತ್ತೆ ಕೈ ನೋವು ಉಲ್ಬಣಗೊಂಡಿದೆ.
http://ಖ್ಯಾತ ಯೂಟ್ಯೂಬರ್ ‘ವಿಕ್ಕಿಪೀಡಿಯಾ’ಗೆ ಪೊಲಿಒಸರ ಎಚ್ಚರಿಕೆ
ಕೆಲವು ಮೂಲಗಳ ಪ್ರಕಾರ ದರ್ಶನ್ ರ ಬಲಗೈ ನೋವು ಉಲ್ಬಣಗೊಂಡಿದ್ದು, ಕೈ ಬೆರಳುಗಳನ್ನು ಮಡಚಲು ಸಹ ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ಜೈಲಿನ ವೈದ್ಯರ ಬಳಿಯೇ ಪ್ರತಿನಿತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಕೈ ಬೆರಳುಗಳನ್ನು ಸೂಕ್ತವಾಗಿ ಮಡಚಲು ಆಗುತ್ತಿಲ್ಲವಾದ್ದರಿಂದ ಚಮಚಕ್ಕಾಗಿ ದರ್ಶನ್ ಬೇಡಿಕೆ ಇಟ್ಟಿದ್ದಾರೆ. ಮುಂದಿನ ವಿಚಾರಣೆ ಸಮಯದಲ್ಲಿ ಈ ವಿಷಯವೂ ನ್ಯಾಯಾಲಯದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತಮಗೆ ಜೈಲಿನ ಊಟ ಸರಿ ಹೋಗುತ್ತಿಲ್ಲ ಹಾಗಾಗಿ ಮನೆಯಿಂದ ಊಟ ತರಿಸಿಕೊಳ್ಳು ಅನುಮತಿ ನೀಡಬೇಕು, ಹಾಗೆಯೇ ಮನೆಯಿಂದ ಮಲಗಲು ಬೆಡ್, ದಿಂಬು ಹಾಗೂ ಕೆಲವು ಪುಸ್ತಕಗಳನ್ನು ತರಿಸಿಕೊಳ್ಳಲು ಅನುಮತಿ ಕೊಡಬೇಕೆಂದು ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್ ರ ಅರ್ಜಿಯನ್ನು ತಳ್ಳಿ ಹಾಕಿತು. ಹಾಗಾಗಿ ದರ್ಶನ್ ಈಗ ಜೈಲಿನ ಊಟವೇ ಮಾಡಬೇಕಿದೆ, ಚಾಪೆಯ ಮೇಲೆಯೇ ಮಲಗಬೇಕಿದೆ. ಜುಲೈ 18 ಕ್ಕೆ ದರ್ಶನ್ ರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು, ಬಂಧನ ಅವಧಿ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.