Site icon Samastha News

Success story: ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಈತನ ತಿಂಗಳ ಆದಾಯ 50 ಲಕ್ಷ ರೂಪಾಯಿ!

Success story

ದಿಗಂತಾ ದಾಸ್

Success story

ಛಲ, ದುಡಿಯುವ ಹಂಬಲ, ಧೈರ್ಯ, ಸರಿಯಾದ ದಾರಿಯಲ್ಲಿ ಯೋಚಿಸುವ ಗುಣಗಳಿದ್ದರೆ ಯಾವ ವ್ಯಕ್ತಿ ಬೇಕಾದರೂ ಸಾಧಕನಾಗಬಹುದು ಎಂಬುದಕ್ಕೆ ದಿಗಂತಾ ದಾಸ್ ಸಾಕ್ಷಿ. ಈಶಾನ್ಯ ಭಾರತದ ಹಲವು ಜನ ಮುಂಬೈ, ಬೆಂಗಳೂರು, ಪುಣೆ, ಚೆನ್ನೈ, ಹೈದರಾಬಾದ್​ಗಳಲ್ಲಿ ಸಣ್ಣ-ಪುಟ್ಟ ಕೆಲಸಗಳನ್ನು ಹುಡುಕಿ ಬರುತ್ತಾರೆ. ಅವರ ತೆಳ್ಳನೆಯ, ಕುಳ್ಳನೆಯ ದೇಹಕ್ಕೆ ಅವರಿಗೆ ಸಿಗುವುದು ಬಹುತೇಕ ಸೆಕ್ಯುರಿಟಿ ಗಾರ್ಡ್​ನ ಕೆಲಸಗಳೆ. ಹಾಗೆ ಸೆಕ್ಯುರಿಟಿ ಗಾರ್ಡ್ ಕೆಲಸ ಅರಸಿ ಈಶಾನ್ಯ ಭಾರತದ ಕಡೆಯಿಂದ ಬಂದವರಲ್ಲಿ ಅಸ್ಸಾಂನ ದಿಗಂತಾ ದಾಸ್ ಸಹ ಒಬ್ಬರು. ಆದರೆ ಮೇಲೆ ಹೇಳಿದಂತೆ ದಿಗಂತಾ ದಾಸ್​ಗೆ ಛಲ, ದುಡಿಯುವ ಹಂಬಲ, ಧೈರ್ಯ, ಸರಿಯಾದ ದಾರಿಯಲ್ಲಿ ಯೋಚಿಸುವ ಗುಣಗಳಿದ್ದವು. ಅದರಿಂದಾಗಿ ದಿಗಂತಾ ದಾಸ್ ಇಂದು ತಿಂಗಳಿಗೆ 50 ಲಕ್ಷ ರೂಪಾಯಿ ದುಡಿಯುವ ಉದ್ಯಮಿ ಆಗಿದ್ದಾನೆ. ದಿಗಂತಾ ದಾಸ್​ನ ಯಶ್ಸಿನ ಪಯಣ ಹಲವರಿಗೆ ಸ್ಪೂರ್ತಿ ಆಗಬಲ್ಲದು.

ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ದಿಗಂತಾ ದಾಸ್ ಅವರದ್ದು ಬಡ ಕುಡುಂಬ. ದಿಗಂತಾ ದಾಸ್​ಗೆ ಇಬ್ಬರು ಅಕ್ಕಂದಿರು, ಅಪ್ಪ ಸಣ್ಣ ರೈತ. ದಿಗಂತಾ ದಾಸ್ ಒಳ್ಳೆಯ ವಿದ್ಯಾರ್ಥಿ ಆಗಿದ್ದರು ಹತ್ತನೇ ತರಗತಿ ಬಳಿ ಶಾಲೆ ಬಿಟ್ಟು ಕೆಲಸಕ್ಕೆ ಸೇರಿದ. ದಿಗಂತಾ ದಾಸ್ ದುಡಿಯುವುದು ಅವರ ಕುಟುಂಬ ನಿರ್ವಹಣೆಗೆ ಅತ್ಯಂತ ಅಗತ್ಯವಾಗಿತ್ತು. 2011 ರಲ್ಲಿ ದಿಗಂತಾ ದಾಸ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದರು. ನೋಡಲು ಕೃಷ ದೇಹಿಯಾಗಿದ್ದ ದಿಗಂತಾ ದಾಸ್​, ನಗರದ ಹೋಟೆಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಹಾಗೂ ರೂಂ ಸರ್ವಿಸ್ ಬಾಯ್ ಆಗಿ ಕೆಲಸ ಮಾಡಿದರು. ಆ ಕೆಲಸದಲ್ಲಿ ಸಾಕಷ್ಟು ನಿಂದನೆ, ಮೂದಲಿಕೆಗಳನ್ನು ಸಹಿಸಿಕೊಂಡ ದಿಗಂತಾ ದಾಸ್ ಮುಂದಿನ ವರ್ಷವೇ ಹೊಸಕೋಟೆಯಲ್ಲಿ ಸ್ಥಿತವಾಗಿದ್ದ ಐಡಿ ಫ್ರೆಶ್ ಹೆಸರಿನ ಆಹಾರ ಉತ್ಪನ್ನ ಮಾರಾಟ ಸಂಸ್ಥೆ ಸೇರಿಕೊಂಡರು.

ತಿಂಗಳಿಗೆ 1500 ಸಂಬಳ ಪಡೆಯುತ್ತಿದ್ದ ಯುವಕ ಹತ್ತು ವರ್ಷದಲ್ಲಿ ಗಳಿಸಿದ ನೂರಾರು ಕೋಟಿ ಸಂಪತ್ತು

ಐಡಿ ಫ್ರೆಶ್ ಫುಡ್​ ಸಂಸ್ಥೆಯ ಆಹಾರ ಉತ್ಪನ್ನಗಳನ್ನು ಅಂಗಡಿಗಳು, ಹೋಟೆಲ್​ಗಳಿಗೆ ಅನ್​ಲೋಡ್ ಮಾಡುವ ಕಾರ್ಯವನ್ನು ದಿಗಂತಾ ಮಾಡುತ್ತಿದ್ದಾರೆ. ಒಮ್ಮೆ ಪ್ಯಾಕೆಜಿಂಗ್ ಸಿಬ್ಬಂದಿ ಕೆಲಸ ಬಿಟ್ಟಾಗ ಆ ಕೆಲಸಕ್ಕೆ ದಿಗಂತಾ ಅವರನ್ನು ಬಳಸಿಕೊಳ್ಳಲಾಯ್ತು. ಅದಾದ ಬಳಿಕ ದಿಗಂತಾ ಅನ್ನು ಆಹಾರ ತಯಾರಿಸುವ ವಿಭಾಗಕ್ಕೆ ವರ್ಗಾವಣೆ ಮಾಡಲಾಯ್ತು. ಅಲ್ಲಿ ದಿಗಂತಾ, ಪರಾಟ ಹಿಟ್ಟು ತಯಾರಿಸುವುದು, ದೋಸೆ ಹಿಟ್ಟು ತಯಾರಿಸುವುದು, ಇಡ್ಲಿ ಹಿಟ್ಟು ತಯಾರಣೆ ಇನ್ನಿತರೆಗಳ ಬಗ್ಗೆ ಸಂಪೂರ್ಣ ಜ್ಞಾನ ಪಡೆದುಕೊಂಡರು. ಸುಮಾರು ಮೂರು ವರ್ಷ ಅದೇ ವಿಭಾಗದಲ್ಲಿ ಕೆಲಸ ಮಾಡಿದ ದಿಗಂತಾಗೆ ಹಿಟ್ಟುಗಳ ತಯಾರಿಕೆ ಮತ್ತು ಅದರಿಂದ ಪದಾರ್ಥಗಳನ್ನು ಹೇಗೆ ತಯಾರಿಸಬೇಕು ಎಂಬುದು ಕರಗತವಾಯ್ತು. ಅದರಲ್ಲಿಯೂ ವಿಶೇಷವಾಗಿ ಪದರ-ಪದರಗಳ ಪರೋಟ ತಯಾರಿಕೆಯಲ್ಲಿ ವಿಶೇಷ ಪರಿಣಿತಿಯನ್ನು ದಿಗಂತಾ ದಾಸ್ ಪಡೆದುಕೊಂಡಿದ್ದರು.

ದುಡಿಯುವ ಹಂಬಲ

2017 ರಲ್ಲಿ ಅಸ್ಸಾಂಗೆ ಮರಳಿದ ದಿಗಂತಾ ದಾಸ್ ಅಲ್ಲಿ ತಮ್ಮದೇ ಆದ ಪರೋಟ ತಯಾರಿಕೆ ಸಂಸ್ಥೆ ಪ್ರಾರಂಭ ಮಾಡಿದರು. ಬೆಂಗಳೂರಿನಲ್ಲಿ ದುಡಿದ ಹಣವನ್ನೆಲ್ಲ ತಮ್ಮ ಪರೋಟ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದರು. ಸಂಸ್ಥೆಗೆ ‘ಡೈಲಿ ಫ್ರೆಶ್ ಫುಡ್’ ಎಂದು ಹೆಸರಿಟ್ಟರು. ಪಾರ್ಟನರ್ ಒಬ್ಬರ ಜೊತೆಗೆ ಸೇರಿಕೊಂಡು ಬ್ಯುಸಿನೆಸ್ ಅನ್ನು ದೊಡ್ಡದಾಗಿ ಬೆಳೆಸಿದರು. ಇಡೀ ಅಸ್ಸಾಂಗೆ ಈಗ ಅವರು ರೆಡಿ ಮೇಡ್ ಪರೋಟ ಮಾರಾಟ ಮಾರಾಟ ಮಾಡುತ್ತಿದ್ದಾರೆ. ದಿಗಂತಾ ದಾಸ್​ರ ಈಗಿನ ತಿಂಗಳ ಆದಾಯ 50 ಲಕ್ಷ ರೂಪಾಯಿ. ಬ್ಯುಸಿನೆಸ್ ಅನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸುವ ಉಮೇದಿನಲ್ಲಿರುವ ದಿಗಂತಾ ದಾಸ್ ಹೊಸ ಹೊಸ ಖಾದ್ಯಗಳನ್ನು ಪರಿಚಯಿಸಲಿದ್ದಾರೆ. ಮಾತ್ರವಲ್ಲದೆ ಬೇರೆ ಕೆಲವು ರಾಜ್ಯಗಳಲ್ಲಿಯೂ ಮಾರಾಟ ಪ್ರಾರಂಭ ಮಾಡಲಿದ್ದಾರಂತೆ.

Exit mobile version