Channapatna
ಚನ್ನಪಟ್ಟಣ ಉಪಚುನಾವಣೆ ಘೋಷಣೆಗೆ ಮುಂಚೆಯೇ ರಂಗೇರಿದೆ. ಸಂಸದ ಸ್ಥಾನಕ್ಕೆ ಮಂಡ್ಯದಿಂದ ಸ್ಪರ್ಧಿಸಿ ಗೆದ್ದ ಕುಮಾರಸ್ವಾಮಿ ತಮ್ಮ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಆ ಸ್ಥಾನ ತೆರವಾಗಿದ್ದು, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಾವೇ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಪಂಥಾಹ್ವಾನ ನೀಡಿದ್ದಾರೆ. ತಾಕತ್ತಿದ್ದರೆ ಸೋಲಿಸಿ ನೋಡಿ ಎಂಬ ಸವಾಲು ಎಸೆದಿದ್ದಾರೆ. ಮೈತ್ರಿ ಪಕ್ಷವೂ ಸಹ ಈ ವಿಷಯದಲ್ಲಿ ಜಾಣತನದ ಹೆಜ್ಜೆ ಇರಿಸುತ್ತಿದೆ.
ತಮ್ಮ ಸಹೋದರನನ್ನು ಸೋಲಿಸಿದ ಸಿಟ್ಟು ತೀರಿಸಿಕೊಳ್ಳಲೆಂದು ಹಾಗೂ ಬೆಂ.ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಹಿಡಿತ ಬಲಗೊಳಿಸಿಕೊಳ್ಳಲು ಈಗಾಗಲೇ ಕನಕಪುರ ಶಾಸಕ, ರಾಜ್ಯದ ಗೃಹ ಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ್ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಚನ್ನಪಟ್ಟಣ ಉಪಚುನಾವಣೆ ಡಿಕೆ ಶಿವಕುಮಾರ್ v/s ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಎಂಬಂತಾಗಿದೆ.
ಮೈತ್ರಿ ಪಕ್ಷಗಳು ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಮೂರು ಪ್ರಮುಖವಾದ ಹೆಸರುಗಳು ಕೇಳಿ ಬರುತ್ತಿದೆ. ಮೊದಲನೆಯ ಹೆಸರು ನಿಖಿಲ್ ಕುಮಾರಸ್ವಾಮಿಯದ್ದು. ಅಸಲಿಗೆ ಕುಮಾರಸ್ವಾಮಿ ಸಂಸದ ಚುನಾವಣೆಗೆ ನಿಂತಾಗಲೆ ಚನ್ನಪಟ್ಟಣಕ್ಕೆ ನಿಖಿಲ್ ಪಕ್ಕ ಎನ್ನಲಾಗಿತ್ತು. ಆದರೆ ಈಗ ನೋಡಿದರೆ ಡಿಕೆ ಶಿವಕುಮಾರ್ ಅಂಥಹಾ ಘಟಾನುಘಟಿ ಎದುರಾಳಿ ಆಗಿದ್ದು, ನಿಖಿಲ್ ಅನ್ನು ಚುನಾವಣೆಗೆ ನಿಲ್ಲಿಸುವ ಧೈರ್ಯವನ್ನು ಕುಮಾರಸ್ವಾಮಿ ಮಾಡುತ್ತಾರೆಯೇ ಎಂಬ ಅನುಮಾನ ಇದೆ.
ಇನ್ನು ಚನ್ನಪಟ್ಟಣದಲ್ಲಿ ಭಾವನಾತ್ಮಕ ಆಟ ಆಡುವ ಆಲೋಚನೆಯೂ ಮೈತ್ರಿ ಮುಖಂಡರಲ್ಲಿದ್ದು, ಸ್ವತಃ ದೇವೇಗೌಡರನ್ನೇ ಡಿಕೆ ಶಿವಕುಮಾರ್ ಎದುರು ಕಣಕ್ಕೆ ಇಳಿಸುವ ಬಗ್ಗೆಯೂ ಮಾತುಕತೆ ಚಾಲ್ತಿಯಲ್ಲಿದೆ. 2004 ರಲ್ಲಿ ತೇಜಸ್ವಿನಿಯವರನ್ನು ದೇವೇಗೌಡರ ಎದುರು ಇಲ್ಲಿಸಿ ದೊಡ್ಡ ಗೌಡರನ್ನು ಸೋಲಿಸಿದ್ದ ಡಿಕೆ ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನವೂ ಮಾಡಬಹುದು.
DK Shivakumar : ಉಪ ಮುಖ್ಯಮಂತ್ರಿಯ ಚಪ್ಪಲಿಯನ್ನೇ ಕದ್ದೊಯ್ದ ಐನಾತಿಗಳು, ಬರಿಗಾಲಲ್ಲಿ ತೆರಳಿಸಿದ ಡಿಕೆ ಶಿವಕುಮಾರ್
ಇನ್ನು ತಮ್ಮ ಡಿಕೆ ಸುರೇಶ್ ವಿರುದ್ಧ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಯೋಗಿಸಿದ ಬಾಣವನ್ನೇ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಪ್ರಯೋಗ ಮಾಡುವ ಯೋಚನೆ ಮೈತ್ರಿ ಪಕ್ಷಕ್ಕಿದೆ. ಸುರೇಶ್ ವಿರುದ್ಧ ಹೇಗೆ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದ ರಾಜಕೀಯೇತರ ವ್ಯಕ್ತಿಯನ್ನು ಕರೆತಂದು ಚುನಾವಣೆಗೆ ನಿಲ್ಲಿಸಲಾಯ್ತೊ ಅದೇ ರೀತಿ, ಡಿಕೆ ಶಿವಕುಮಾರ್ ವಿರುದ್ಧ ಸಮಾಜದಲ್ಲಿ ಗಣ್ಯ, ಸಂಭಾವಿತ ಎನಿಸಿಕೊಂಡ ರಾಜಕೀಯೇತರ ವ್ಯಕ್ತಿಯನ್ನು ಕರೆತಂದು ಡಿಕೆಗೆ ಎದುರಾಳಿಯಾಗಿ ನಿಲ್ಲಿಸಲು ಹುಡುಕಾಟ ನಡೆಸಿದೆ. ಕೆಲವು ಮೂಲಗಳ ಪ್ರಕಾರ ಪ್ರಮುಖ ಮಠದ ಸ್ವಾಮೀಜಿಯೊಬ್ಬರನ್ನು ಸಹ ಮೈತ್ರಿ ಪಕ್ಷದ ಮುಖಂಡರು ಸಂಪರ್ಕ ಮಾಡಿ ಈ ಬಗ್ಗೆ ವಿಚಾರಣೆ ನಡೆಸಿದ್ದಾರಂತೆ.
ಒಟ್ಟಿನಲ್ಲಿ ಚನ್ನಪಟ್ಟಣ ಉಪಚುನಾವಣಾ ಕಣ ಸಖತ್ ಆಗಿ ರಂಗೇರಿದೆ. ಡಿಕೆ ಶಿವಕುಮಾರ್ ಅಂತೂ ವೈಯಕ್ತಿಕ ಜಿದ್ದಾಜಿದ್ದಿಯಿಂದಲೇ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಅದರಲ್ಲೂ ಇದು ಡಿಕೆಶಿ vs ಕುಮಾರಸ್ವಾಮಿ ನಡುವಿನ ಯುದ್ಧ ಎಂಬಂತಾಗಿದೆ. ಕೇಂದ್ರ ಸಚಿವ-ರಾಜ್ಯ ಸಚಿವರ ನಡೆಯಲಿರುವ ಈ ಯುದ್ಧದಲ್ಲಿ ಮತದಾರ ಯಾರನ್ನು ಗೆಲ್ಲಿಸಲಿದ್ದಾನೆ ಕಾದು ನೋಡಬೇಕಿದೆ.