Dosa
ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ 50% ಗೂ ಹೆಚ್ಚು ಜನರ ವರ್ಷದ ಸಂಬಳ ಆರು ಲಕ್ಷ ಇಲ್ಲ. ಭಾರತದ ಖಾಸಗಿ ನೌಕರರ ಸರಾಸರಿ ತಿಂಗಳ ಸಂಬಳವೆ 25 ಸಾವಿರ ರೂಪಾಯಿ. ಆದರೆ ಬೀದಿ ಬದಿಯಲ್ಲಿ ದೋಸೆ ಮಾರುವವನೊಬ್ಬ ತಿಂಗಳಿಗೆ ಆರು ಲಕ್ಷ ಗಳಿಸುತ್ತಿದ್ದಾನೆ. ಅದೂ ಕೇವಲ ಐದು ಗಂಟೆ ಕೆಲಸ ಮಾಡಿ. ಒಂದೇ ಒಂದು ರೂಪಾಯಿ ತೆರಿಗೆ ಕಟ್ಟದೆ. ಈ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಎಬ್ಬಿಸಿದೆ.
ಬೆಂಗಳೂರಿನ ಟ್ವಿಟ್ಟರ್ ಬಳಕೆದಾರನೊಬ್ಬ, ನನ್ನ ಮನೆಯ ಬಳಿ ಸಂಜೆ ದೋಸೆ ಹಾಕುವವನೊಬ್ಬ ತಿಂಗಳಿಗೆ 6 ಲಕ್ಷ ರೂಪಾಯಿ ಗಳಿಸುತ್ತಾನೆ. ಅವನ ದಿನದ ವ್ಯವಹಾರವೇ 20 ಸಾವಿರಕ್ಕೂ ಹೆಚ್ಚಿದೆ. ಆದರೆ ಆತ ಒಂದೇ ಒಂದು ರೂಪಾಯಿ ತೆರಿಗೆ ಪಾವತಿ ಮಾಡುವುದಿಲ್ಲ. ಆದರೆ ಅದೇ ಒಬ್ಬ ಖಾಸಗಿ ಕಂಪೆನಿ ನೌಕರ ತನಗೆ ಬಂದ ಸಂಬಳದಲ್ಲಿ ಸುಮಾರು 10% ಹಣವನ್ನು ತೆರಿಗೆಯಾಗಿಯೇ ಕಟ್ಟುತ್ತಾನೆ ಎಂದಿದ್ದಾರೆ.
ಈ ಟ್ವೀಟ್’ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು ಆ ದೋಸೆಯವ ತಿಂಗಳಿಗೆ ಆರು ಲಕ್ಷ ವ್ಯವಹಾರ ಮಾಡಿದರೂ ಆತನಿಗೆ ಸಾಕಷ್ಟು ಖರ್ಚು ಇರುತ್ತದೆ ಎಂದಿದ್ದಾರೆ. ಆದರೆ ಅದನ್ನು ವಿರೋಧಿಸಿರುವ ಕೆಲವರು ಬಾಡಿಗೆ ಕಟ್ಟುವ ಅಗತ್ಯ ಇಲ್ಲದ ಕಾರಣ ಆತನ ಖರ್ಚು ಹೆಚ್ಚೆಂದರೂ 2.50 ಲಕ್ಷ ದಾಟುವುದಿಲ್ಲ. ಹಾಗಿದ್ದರೂ ಸಹ ತಿಂಗಳ ಆದಾಯ ಯಾವುದೇ ಸಾಫ್ಟ್’ವೇರ್ ಉದ್ಯಮಿಗಿಂತಲೂ ಹೆಚ್ಚಿದೆ ಎಂದು ಕೆಲವರು ವಾದಿಸಿದ್ದಾರೆ.
ದೋಸೆ ವ್ಯಾಪಾರಿಯೂ ಇಂದಲ್ಲ ನಾಳೆ ತೆರಿಗೆ ಕಟ್ಟಲೇ ಬೇಕಾಗುತ್ತದೆ ಎಂದಿರುವ ಕೆಲವರು. ಆತ ಯುಪಿಐ ಮೂಲಕಹಣ ಪಡೆಯುತ್ತಾನೆ ಎಂದರೆ ಇಂದಲ್ಲ ನಾಳೆ ತೆರಿಗೆ ಕಟ್ಟಲೇ ಬೇಕಾಗುತ್ತದೆ. ಯುಪಿಐ ಟ್ರಾನ್ಸಾಕ್ಷನ್’ಗಳ ಮೇಲೆ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಇಂದಲ್ಲ ನಾಳೆ ಆತ ಹಣ ಕಟ್ಟಲೇ ಬೇಕಾಗುತ್ತದೆ. ನಗದು ಹಣ ಪಡೆಯುವವರು ಮಾತ್ರವೇ ತೆರಿಗೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ ಮತ್ತೊಬ್ಬರು.
Snacks: ಚಳಿಗಾಲದ ಸಂಜೆಯಲ್ಲಿ ಈ ರುಚಿಕರ ತಿನಿಸುಗಳನ್ನು ಮಾಡಿ ಸವಿಯಿರಿ
ಇನ್ನು ಕೆಲವರು ತಮಾಷೆಯಾಗಿ, ಎಲ್ಲ ಕಾರ್ಪೊರೇಟ್ ಉದ್ಯೋಗಿಗಳು ಕೆಲಸ ಬಿಟ್ಟು ದೋಸೆ ಬಂಡಿ ಪ್ರಾರಂಭ ಮಾಡೋಣ. ಸಾಫ್ಟ್’ವೇರ್ ಎಂಜಿನಿಯರ್’ಗಿಂತಲೂ ಹೆಚ್ಚಿನ ಲಾಭ ಅದರಲ್ಲಿದೆ ಎಂದಿದ್ದಾರೆ. ಇನ್ನು ಕೆಲವರು ನಾನು ವರ್ಷಕ್ಕೆ ಪಡೆಯುವ ಸಂಬಳದ ಎರಡರಷ್ಟು ಹಣವನ್ನು ಈತ ಒಂದು ತಿಂಗಳಿಗೆ ಪಡೆಯುತ್ತಿದ್ದಾನೆ ಎಂದು ಅಸೂಯೆ ಪಟ್ಟಿದ್ದಾರೆ. ಒಟ್ಟಾರೆಯಾಗಿ ದೋಸೆಯವನ ಆದಾಯ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಚರ್ಚೆ ಆಗುವಂತಾಗಿದೆ.