Driver Less Car
ವಿಶ್ವದಾದ್ಯಂತ ಈಗ ಚಾಲಕ ರಹಿತ ಕಾರಿನ ಬೇಡಿಕೆ ಹೆಚ್ಚುತ್ತಿದೆ. ಟೆಸ್ಲಾ ಸಂಸ್ಥೆ ಆಟೋ ಪೈಲೆಟ್ ಕಾರು ತಯಾರಿಸಿದ್ದೇ ತಡ ಬೇರೆ ಕೆಲವು ಸಂಸ್ಥೆಗಳು ಸಹ ಇದರ ಹಿಂದೆ ಬಿದ್ದಿವೆ. ಆದರೆ ಟೆಸ್ಲಾ ಹೊರತುಪಡಿಸಿ ಇನ್ಯಾವ ಕಾರು ಸಹ ಟೆಸ್ಲಾದಷ್ಟು ಯಶಸ್ಸುಗಳಿಸಲಾಗಿಲ್ಲ. ಟೆಸ್ಲಾ ಭಾರತದಲ್ಲಿ ಕಾರು ನಿರ್ಮಾಣ ಸಂಸ್ಥೆ ಆರಂಭಿಸುವ ಯೋಜನೆಯಲ್ಲಿದೆ. ಟೆಸ್ಲಾ ಕಾರು ಇನ್ನು ಮುಂದೆ ಭಾರತದಲ್ಲಿಯೂ ಮಾರಾಟವಾಗಲಿದೆ. ಆದರೆ ಭಾರತೀಯ ರಸ್ತೆಗಳಿಗೆ ಚಾಲಕರಹಿತ ಕಾರು ಮಾಡುವುದು ಟೆಸ್ಲಾಕ್ಕೆ ಸಹ ಭಾರಿ ಸವಾಲಿನ ಕೆಲಸ. ಭಾರತಂದಹಾ ದೇಶಗಳಿಗೆ ಚಾಲಕರಹಿತ ಕಾರು ಕಷ್ಟವೆಂದು ಸ್ವತಃ ಎಲಾನ್ ಮಸ್ಕ್ ಹೇಳಿದ್ದಾರೆ. ಹೀಗಿರುವಾಗ ನಿನ್ನೆ ರಾತ್ರಿ (ಮೇ 15) ಬೆಂಗಳೂರಿನ ಬೀದಿಗಳಲ್ಲಿ ಚಾಲಕ ರಹಿತ ಕಾರೊಂದು ಓಡಾಡಿದೆ ಅದೂ ಭಾರಿ ಜನನಿಬಿದ ಪ್ರದೇಶಗಳಲ್ಲಿ.
ಹೌದು, ಕೆಎ 50 ಓಜೆಡ್ 6420 ಸಂಖ್ಯೆಯ ಮಹಿಂದ್ರಾ ಸಂಸ್ಥೆಯ ಕಾರೊಂದು ಡ್ರೈವರ್ ರಹಿತವಾಗಿ ಬೆಂಗಳೂರಿನ ಬೀದಿಗಳಲ್ಲಿ ಓಡಾಡಿದೆ. ಕಾರಿನ ನಾಲ್ಕೂ ಕಡೆಗಳಲ್ಲಿ ‘ಎಚ್ಚರಿಕೆ ಚಾಲಕ ರಹಿತ ಕಾರು” ಎಂದು ಬರೆದಿರುವ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಕಾರಿನ ಚಾಲಕ ಸೀಟಿನಲ್ಲಿ ಯಾವುದೇ ವ್ಯಕ್ತಿ ಕೂತಿರಲಿಲ್ಲ ಆದರೆ ಚಾಲಕನ ಪಕ್ಕದ ಸೀಟಿನಲ್ಲಿ ವ್ಯಕ್ತಿಯೊಬ್ಬ ಕೂತಿದ್ದ. ಬೆಂಗಳೂರಿನ ಎಂಜಿ ರಸ್ತೆ, ಶಿವಾಜಿನಗರ ಇನ್ನಿತರೆ ಕಡೆಗಳಲ್ಲಿ ಈ ಕಾರು ಚಾಲಕ ರಹಿತವಾಗಿ ಓಡಾಡಿದೆ. ಚಾಲಕನೇ ಇಲ್ಲದೆ ಕಾರು ಚಲಿಸುತ್ತಿರುವುದು ಕಂಡು ಹಲವರು ಗಾಬರಿಯಾಗಿದ್ದಾರೆ.
ಮತ ಕೇಳಲು ಹೋಗಿ ಮಹಿಳೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ, ವಿಡಿಯೋ ವೈರಲ್
ಚಾಲಕನಿಲ್ಲದೆ ಓಡಿದೆ ಎಂದ ಮಾತ್ರಕ್ಕೆ ಇದು ಆಟೊಪೈಲೆಟ್ ಕಾರಲ್ಲ. ಮಹಿಂದ್ರಾ ಸಂಸ್ಥೆಯವರು ಚಾಲಕ ರಹಿತ ಕಾರನ್ನು ಬಿಡುಗಡೆ ಸಹ ಮಾಡಿಲ್ಲ. ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿರುವುದು ರಿಮೋಟ್ ಕಂಟ್ರೋಲ್ಡ್ ಕಾರು. ಮಹಿಂದ್ರಾ ಕಾರನ್ನು ಕೆಲವು ಬದಲಾವಣೆ ಮಾಡಿ ಅದನ್ನು ರಿಮೋಟ್ ಕಂಟ್ರೋಲ್‍ಗೆ ಅಳವಡಿಸಿ ಚಾಲಕನ ಪಕ್ಕದ ಸೀಟಿನಲ್ಲಿ ಕೂತಿದ್ದವ ರಿಮೋಟ್‍ನಿಂದ ಕಾರನ್ನು ಚಲಾಯಿಸುತ್ತಿದ್ದ. ಇದನ್ನು ಗಮನಿಸದ ಕೆಲವರು ಬೆಂಗಳೂರಿಗೆ ಚಾಲಕ ರಹಿತ ಕಾರು ಬಂದಿದೆ ಎಂದು ತಲೆ ಕೆಡಿಸಿಕೊಂಡಿದ್ದರು.