Sandal wood news: ಅವನಿಗೆ ನಾನು ಹಾಗೆ ಮಾಡಬಾರದಿತ್ತು: ದ್ವಾರಕೀಶ್ ಪಶ್ಚಾತ್ತಾಪದ ಮಾತು

0
244
Sandal wood news

Sandal wood news

ಕನ್ನಡ ಚಿತ್ರರಂಗದ ಶೋ ಮ್ಯಾನ್ ನಿರ್ಮಾಪಕ ದ್ವಾರಕೀಶ್ (Dwarkish) ಇಂದು (ಏಪ್ರಿಲ್ 16) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದ ಸಾಹಸಿ ನಿರ್ಮಾಪಕರಾಗಿದ್ದವರು ದ್ವಾರಕೀಶ್. 70-80ರ ದಶಕದಲ್ಲಿ ದೊಡ್ಡ ಬಜೆಟ್​ನ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ದ್ವಾರಕೀಶ್, ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ ಮೊದಲ ನಿರ್ಮಾಪಕ. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವರ ಜೋಡಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ದೊಡ್ಡದು. ಗಳಸ್ಯ-ಕಂಠಸ್ಯ ಎಂಬಂತೆ ಇದ್ದ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಒಂದು ಹಂತದಲ್ಲಿ ದೂರಾಗಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಂತಾಯ್ತು. ಇವರನ್ನು ಒಟ್ಟುಗೂಡಿಸುವ ಪ್ರಯತ್ನಗಳು ವಿಫಲವಾದವು. ಆದರೆ ದ್ವಾರಕೀಶ್ ತಮ್ಮ ಇಳಿಯವಸ್ಸಿನಲ್ಲಿ ವಿಷ್ಣುವರ್ಧನ್ ಜೊತೆಗೆ ಸಂಬಂಧ ಮುರಿದುಕೊಂಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದರು. ಮಾತ್ರವಲ್ಲದೆ, ತಮ್ಮಿಂದ ಆದ ತಪ್ಪೇನು ಎಂದು ವಿವರಿಸಿದ್ದರು.

ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ದ್ವಾರಕೀಶ್, ‘ಯಾವುದಾದರೂ ವಿಷಯದಲ್ಲಿ ಮನಸ್ಥಾಪಗಳು ಬಂದು, ನಾನೇನಾದರೂ ಹೇಳಿದರೆ ಅದಕ್ಕೆ ಗೌರವ ಕೊಡುತ್ತಿದ್ದ. ಆದರೆ ಆ ಗೌರವವನ್ನು ನಾನು ದುರುಪಯೋಗ ಪಡಿಸಿಕೊಂಡೆ. ನನ್ನ ಮಾತಿಗೆ ಬೆಲೆ ಕೊಡುತ್ತಾನಲ್ಲ ಎಂದು ನಾನು ಅವನ ವಿರುದ್ಧ ಕೆಟ್ಟದಾಗಿ ನಡೆದುಕೊಂಡೆ. ನಾನು ಹಾಗೆ ಮಾಡಬಾರದಿತ್ತು. ಅವನು ದೊಡ್ಡ ಹೀರೋ ಆಗಿದ್ದ, ಅವನಿಗೆ ನಾನು ಗೌರವ ಕೊಡಬೇಕಿತ್ತು. ಅವನಿಂದ ನಾನು ಸಂಪಾದನೆ ಮಾಡಿದ್ದೆ, ಬದುಕುತ್ತಿದ್ದೆ, ಊಟ ಮಾಡುತ್ತಿದ್ದೆ. ಆ ಜ್ಞಾನ ನನಗೆ ಇರಬೇಕಾಗಿತ್ತು’ ಎಂದಿದ್ದರು.

‘ಅವನೊಬ್ಬ ಸೊಗಸಾದ ನಾಯಕ ಆಗಿದ್ದ. ನನ್ನ ಮನೆಯಲ್ಲಿದ್ದ ಹೀರೋ ಆಗಿದ್ದ. ನನ್ನ ಮನೆಯಲ್ಲಿ ಓಡಾಡಿಕೊಂಡು ಇದ್ದ. ನನ್ನ ಬಲಗೈ ಆಗಿದ್ದ. ನನ್ನಿಂದ ದೊಡ್ಡ ತಪ್ಪಾಗಿಬಿಟ್ಟಿತು. ಆ ವಿಷಯವಾಗಿ ನನಗೆ ಬಹಳ ನೋವಾಗಿದೆ’ ಎಂದು ತಮ್ಮ 80ನೇ ವಯಸ್ಸಿನಲ್ಲಿ ದ್ವಾರಕೀಶ್ ಹೇಳಿಕೊಂಡಿದ್ದರು.

ಖ್ಯಾತ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ನಿಧನ, ಆತ್ಮಹತ್ಯೆ ಶಂಕೆ

‘ವಿಷ್ಣುವರ್ಧನ್ ಎಂದಿಗೂ ಸಹ ನನಗೆ ಇಂಥಹಾ ಸಿನಿಮಾ ಮಾಡು, ಕತೆಯನ್ನು ಹೀಗೆ ತಿದ್ದು, ನನ್ನ ಪಾತ್ರಕ್ಕೆ ಬಿಲ್ಡಪ್ ಕೊಡು ಎಂದೆಲ್ಲ ಹೇಳಿರಲೇ ಇಲ್ಲ. ನಾನು ಏನಾದರೂ ಹೇಳಿದರೆ ಅದೇ ಅಂತಿಮವಾಗಿತ್ತು. ನನ್ನ ಮಾತಿಗೆ ಬಹಳ ಗೌರವ ಕೊಡುತ್ತಿದ್ದ. ‘ಇಂದಿನ ರಾಮಾಯಣ’ ದಂಥಹಾ ಸಿನಿಮಾಗಳನ್ನು ಯಾವ ನಾಯಕನೂ ಒಪ್ಪಿಕೊಳ್ಳುತ್ತಿರಲಿಲ್ಲ. ಆ ಸಿನಿಮಾನಲ್ಲಿ ನಾಯಕನಿಗೆ ಫೈಟ್, ಸಾಂಗ್ ಯಾವುದೂ ಇರಲಿಲ್ಲ ಆದರೂ ನಾನು ಹೇಳಿದೆ ಎಂದು ಆ ಸಿನಿಮಾ ಒಪ್ಪಿಕೊಂಡ, ನಟಿಸಿದ. ಆದರೆ ನಾನು ಅವನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ.

1985 ರಲ್ಲಿ ಬಿಡುಗಡೆ ಆದ ‘ನೀ ತಂದ ಕಾಣಿಕೆ’ ಸಿನಿಮಾದ ಬಳಿಕ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ನಡುವೆ ಬಿರುಕು ಮೂಡಿತು. ಅದೇ ಮೊದಲ ಬಾರಿಗೆ ವಿಷ್ಣುವರ್ಧನ್, ದ್ವಾರಕೀಶ್ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಆಗ ಹೇಳಿಕೆಯೊಂದನ್ನು ಹೊರಡಿಸಿದ್ದ ದ್ವಾರಕೀಶ್, ವಿಷ್ಣುವರ್ಧನ್ ಅನ್ನು ದ್ರೋಹಿ ಎಂದು ಕರೆದಿದ್ದರು. ಅಲ್ಲದೆ ವಿಷ್ಣುವರ್ಧನ್ ತಮಗೆ ಮಾಡಿದ ದ್ರೋಹವನ್ನೇ ಆಧರಿಸಿ ‘ದ್ರೋಹಿ’ ಎಂದು ಸಿನಿಮಾ ಮಾಡಲಿದ್ದೇನೆ ಎಂದು ಹೇಳಿ, ‘ದ್ರೋಹಿ’ ಸಿನಿಮಾ ಘೋಷಿಸಿ, ಪೋಸ್ಟರ್ ಸಹ ಬಿಡುಗಡೆ ಮಾಡಿದ್ದರು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ.

LEAVE A REPLY

Please enter your comment!
Please enter your name here