Site icon Samastha News

Elon Musk: ಮೊಬೈಲ್ ನಿರ್ಮಾಣಕ್ಕಿಳಿದ ಎಲಾನ್ ಮಸ್ಕ್, ಆಪಲ್​ಗೆ ಸೆಡ್ಡು ಹೊಡೆಯಲು ಸಜ್ಜು

Elon Musk

Elon Musk

ಟೆಸ್ಲಾ, ಸ್ಪೇಸ್ ಎಕ್ಸ್, ಟ್ವಿಟ್ಟರ್ (ಎಕ್ಸ್) ಸೇರಿದಂತೆ ಹಲವು ವಿಶ್ವವಿಖ್ಯಾತ ಕಂಪೆನಿಗಳ ಮಾಲೀಕ ಎಲಾನ್ ಮಸ್ಕ್ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸ್ಪೇಸ್ ಎಕ್ಸ್ ಮೂಲಕ ಅಂತರಿಕ್ಷಕ್ಕೆ ಹಾರಿ ವಿಶ್ವವನ್ನೇ ಬೆರಗು ಗೊಳಿಸಿದ್ದ ಎಲಾನ್ ಬಳಿಕ ಟೆಸ್ಲಾ ಮೂಲಕ ಬ್ಯಾಟರಿ ಚಾಲಿತ ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಕಂಡು ಹಿಡಿದು ಕಾರು ಉದ್ಯಮದಲ್ಲಿ ಕ್ರಾಂತಿ ಉಂಟು ಮಾಡಿದರು. ಬಳಿಕ ಸಾಮಾಜಿಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿ ಅದಕ್ಕೆ ಎಕ್ಸ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಎಲಾನ್ ಮಸ್ಕ್ ಮೊಬೈಲ್ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಮೊಬೈಲ್ ಉತ್ಪಾದನೆ ಮತ್ತು ಮಾರಾಟ ಪ್ರಾರಂಭ ಮಾಡುತ್ತಿದ್ದಾರೆ.

ಎಲಾನ್ ಮಸ್ಕ್ ಏನೇ ಮಾಡಿದರೂ ಬಹಳ ಭಿನ್ನವಾಗಿ ಮಾಡುತ್ತಾರೆ. ಮಸ್ಕ್ ಯಾವ ಕ್ಷೇತ್ರಕ್ಕೆ ಕಾಲಿಡುತ್ತಾರೊ ಆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಾರೆ ಎಂಬುದು ಜನರ ನಂಬಿಕೆ ಈಗ ಮೊಬೈಲ್ ನಿರ್ಮಾಣ ಕ್ಷೇತ್ರಕ್ಕೆ ಮಸ್ಕ್ ಕಾಲಿಡುತ್ತಿದ್ದು, ಆ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಮಸ್ಕ್ ಎಬ್ಬಿಸುತ್ತಾರೆ ಎನ್ನಲಾಗುತ್ತಿದೆ. ಎಕ್ಸ್ ಹೆಸರಿನಲ್ಲಿ ಮೊಬೈಲ್​ಗಳನ್ನು ಎಲಾನ್ ಮಸ್ಕ್ ನಿರ್ಮಿಸಿ ಮಾರಾಟ ಮಾಡಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಎಲಾನ್ ಮಸ್ಕ್ ಎಕ್ಸ್​ (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದಾರೆ.

ಎಲಾನ್ ಮಸ್ಕ್ ಬಿಡುಗಡೆ ಮಾಡಲಿರುವ ಎಕ್ಸ್ ಬ್ರ್ಯಾಂಡ್​ನ ಮೊಬೈಲ್ ಫೋನ್ ಆಂಡ್ರಾಯ್ಡ್, ಆಪಲ್, ಮೈಕ್ರೋಸಾಫ್ಟ್ ಅಲ್ಲದೆ ಬೇರೊಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಟೆಸ್ಲಾ ಕಾರುಗಳಿಗೆ ಹೊಸ ಮಾದರಿಯ ಆಪರೇಟಿಂಗ್ ಸಿಸ್ಟಂ ಅನ್ನು ಎಲಾನ್ ಮಸ್ಕ್ ಬಳಸಿದ್ದರು. ಅದೇ ಮಾದರಿಯಲ್ಲಿಯೇ ಈಗ ಮೊಬೈಲ್ ಫೋನ್​ಗೂ ಹೊಸ ಆಪರೇಟಿಂಗ್ ಸಿಸ್ಟಂ ಬಳಸುವ ಸಾಧ್ಯತೆ ಇದೆ. ಅಲ್ಲದೆ ಈ ಮೊಬೈಲ್ ಫೋನ್​ಗಳನ್ನು ಅತ್ಯಂತ ಸ್ಟೈಲಿಷ್ ಆಗಿ ಡಿಸೈನ್ ಮಾಡಿ, ಕಾರ್ಯದಕ್ಷತೆಯೂ ಸಹ ಹೆಚ್ಚಿಗೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಆ ಮೂಲಕ ಮೊಬೈಲ್ ಕ್ಷೇತ್ರದಲ್ಲಿ ಪಾರುಪತ್ಯ ಹೊಂದಿರುವ ಆಪಲ್ ಸಂಸ್ಥೆಗೆ ಸೆಡ್ಡು ಹೊಡೆಯುವ ಯೋಜನೆಯನ್ನು ಎಲಾನ್ ಮಸ್ಕ್ ಹಾಕಿದ್ದಾರೆ.

ಮೊಬೈಲ್ ಕೊಳ್ಳುವ ಮುನ್ನ ತುಸು ತಡೆಯಿರಿ, ಈ ಹೊಸ ತಂತ್ರಜ್ಞಾನಗಳಿಗಾಗಿ ಕಾಯಿರಿ

ಎಕ್ಸ್ ಮೊಬೈಲ್ ಫೋನ್ ಗ್ರಾಹಕನ ಖಾಸಗಿ ಮಾಹಿತಿಗಳನ್ನು ಶೇಖರಿಸಿ ಇಡುವುದಿಲ್ಲ. ಖಾಸಗಿತನ ರಕ್ಷಣೆಯೇ ಇದರ ಮೊದಲ ಆದ್ಯತೆ ಆಗಿರಲಿದೆ. ಅಲ್ಲದೆ ಈ ಮೊಬೈಲ್ ಕೊಂಡವರಿಗೆ ಉಚಿತ ಎಕ್ಸ್ (ಟ್ವಿಟ್ಟರ್) ಸಬ್​ಸ್ಕ್ರಿಪ್ಷನ್ ಸಹ ದೊರಕಲಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಈಗ ಮಾರುಕಟ್ಟೆಯಲ್ಲಿರುವ ಹಲವು ಮೊಬೈಲ್​ಗಳು ಗ್ರಾಹಕರ ಖಾಸಗಿತನವನ್ನು ಲಘುವಾಗಿ ಪರಿಗಣಿಸಿವೆ, ಗ್ರಾಹಕರ ಮಾಹಿತಿಯ ರಕ್ಷಣೆ ಮಾಡುತ್ತಿಲ್ಲ ಎಂದು ಎಲಾನ್ ಮಸ್ಕ್ ಈ ಹಿಂದೆಯೂ ಹೇಳಿದ್ದರು.

ಎಲಾನ್ ಮಸ್ಕ್, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕಾ ಘಟಕ ಸ್ಥಾಪಿಸಲು ಸಜ್ಜಾಗಿದ್ದಾರೆ. ಕಳೆದ ತಿಂಗಳೇ ಅವರು ಭಾರತಕ್ಕೆ ಬಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಿದ್ದರು. ಆದರೆ ಲೋಕಸಭೆ ಚುನಾವಣೆ ನಡುವೆ ಬಂದಿದ್ದರಿಂದ ಮಸ್ಕ್ ತಮ್ಮ ಭಾರತ ಭೇಟಿಯನ್ನು ಮುಂದೂಡಿದರು. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮಸ್ಕ್ ಭಾರತಕ್ಕೆ ಬರುವ ಸಾಧ್ಯತೆ ಇದೆ.

Exit mobile version