Pakistan
ಭಾರತೀಯನಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಗೂಡಚಾರಿಕೆ ಮಾಡಿದ ಭಾರತದ ಹೆಮ್ಮೆಯ ರಕ್ಷಣಾ ಸಾಮಗ್ರಿ ಸಂಸ್ಥೆ ಬ್ರಹ್ಮೋಸ್ನ ಮಾಜಿ ಎಂಜಿನಿಯರ್ ನಿಶಾಂತ್ ಅಗರ್ವಾಲ್ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ನಾಗಪುರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಶಿಕ್ಷೆ ಪ್ರಕಟಿಸಲಾಗಿದೆ. ಜೀವಾವಧಿ ಶಿಕ್ಷೆಯ ಜೊತೆಗೆ 3000 ರೂಪಾಯಿ ದಂಡವನ್ನು ಸಹ ಹಾಕಲಾಗಿದೆ.
ನಿಶಾಂತ್ ಅಗರ್ವಾಲ್ ಬ್ರಹ್ಮೋಸ್ ಏರೋಸ್ಪೇಸ್ನ ತಾಂತ್ರಿಕ ವಿಭಾಗದ ಎಂಜಿನಿಯರ್ ಆಗಿದ್ದರು. ಡಿಆರ್ಡಿಓ (ಡಿಫೆನ್ಸ್ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಆರ್ಗನೈಸೇಷನ್) ಜೊತೆಗೆ ನಿಶಾಂತ್ ಕೆಲಸ ಮಾಡಿದ್ದಾಗಲೂ ನಿಶಾಂತ್ ಆ ಪ್ರಾಜೆಕ್ಟ್ನಲ್ಲಿದ್ದರು. 2018ರಲ್ಲಿ ಸೇನಾ ಆಂತರಿಕ ಗುಪ್ತಚರ ಇಲಾಖೆ ಮತ್ತು ಭಯೋತ್ಪಾದಕ ನಿಗ್ರಹ ದಳದವರ ಜಂಟಿ ಕಾರ್ಯಾಚರಣೆಯಲ್ಲಿ ನಿಶಾಂತ್ ಅನ್ನು ಬಂಧಿಸಲಾಗಿತ್ತು.
ನಿಶಾಂತ್ ಬಂಧನವಾಗುವ ನಾಲ್ಕು ವರ್ಷಗಳ ಮುಂಚೆ ಅವರು ಬ್ರಹ್ಮೋಸ್ ಸಂಸ್ಥೆ ಸೇರಿಕೊಂಡಿದ್ದರು. ಒಳ್ಳೆಯ ಎಂಜಿನಿಯರ್ ಎಂಬ ಹೆಸರು ಸಹ ಗಳಿಸಿಕೊಂಡಿದ್ದರು. ನಿಶಾಂತ್, ಭಾರತೀಯ ಸೇನೆ, ಭದ್ರತಾ ವ್ಯವಸ್ಥೆ, ಏರೋಸ್ಪೇಸ್ ಕಾರ್ಯಾಚರಣೆಯ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ನೀಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಕಳೆದ ಏಪ್ರಿಲ್ನಷ್ಟೆ ಬಾಂಬೆ ಹೈಕೋರ್ಟ್ ನಿಶಾಂತ್ಗೆ ಜಾಮೀನು ನೀಡಿತ್ತು, ಈಗ ನಾಗ್ಪುರ ಸ್ಥಳೀಯ ನ್ಯಾಯಾಲಯ ನಿಶಾಂತ್ಗೆ ಜೀವಾವಧಿ ಶಿಕ್ಷೆ ನೀಡಿದೆ.