Gautam Adani
ಬಾಂಗ್ಲಾದೇಶದಲ್ಲಿ ಕಳೆದೊಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಕ್ರಾಂತಿ ನಡೆದಿದ್ದು ಈ ಹಿಂದೆ ಪ್ರಧಾನಿ ಆಗಿದ್ದ ಶೇಕ್ ಹಸೀನಾರನ್ನು ದೇಶಬಿಟ್ಟು ಓಡುವಂತೆ ಮಾಡಲಾಗಿದೆ. ಈ ಮೀಸಲಾತಿ ವಿರೋಧಿ ಕ್ರಾಂತಿಗೆ ಹಲವು ಜೀವಗಳು ಬಲಿಯಾಗಿವೆ ಮಾತ್ರವಲ್ಲದೆ ಸಾವಿರಾರು ಕೋಟಿ ಸರ್ಕಾರಿ ಆಸ್ತಿ ಹಾನಿ ಸಹ ಆಗಿದೆ. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆಯಾದರೂ ಅದಕ್ಕೆ ಸ್ಪಷ್ಟ ಗುರಿ, ನಿಲುವುಗಳಿಲ್ಲ. ಅಹಂ ಭರಿತ ಸರ್ಕಾರವೂ ಇದಾಗಿದ್ದು, ಕೆಲ ತಿಂಗಳ ಹಿಂದೆ ದುರ್ಗಾ ಪೂಜೆ ಸಂದರ್ಭದಲ್ಲಿ ಭಾರತಕ್ಕೆ ಮೀನು ರಫ್ತು ಮಾಡುವುದಿಲ್ಲ ಎಂದಿತ್ತು, ಈಗ ಭಾರತದ ಉದ್ಯಮಿ ಗೌತಮಿ ಅದಾನಿ ಜೊತೆ ನಕರಾ ಮಾಡುತ್ತಿದೆ.
ಬಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿರುವುದು ಖ್ಯಾತ ಉದ್ಯಮಿ ಗೌತಮ್ ಅದಾನಿ. ಆದರೆ ಬಾಂಗ್ಲಾದೇಶ ಕಳೆದ ಕೆಲ ತಿಂಗಳುಗಳಿಂದ ಭಾರಿ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹಲವು ನೋಟೀಸ್ಗಳ ಬಳಿಕವೂ ಸಹ ಅದಾನಿಯ ವಿದ್ಯುತ್ ಬಾಕಿ ಪೂರೈಸಲಾಗಿಲ್ಲ. ಇದರಿಂದ ಬೇಸತ್ತ ಉದ್ಯಮಿ ಗೌತಮ್ ಅದಾನಿ ನಕರಾ ಮಾಡುತ್ತಿರುವ ಬಾಂಗ್ಲಾದೇಶಕ್ಕೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.
ಅದಾನಿ ಪವರ್ ಕಾರ್ಪೊರೇಷನ್ನ ಜಾರ್ಖಂಡ್ ಪ್ಲ್ಯಾಂಟ್ನಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಕಳೆದ ತಿಂಗಳು ಸಹ ಇದೇ ಪ್ಲ್ಯಾಂಟ್ನಿಂದ 1600 ಮೆಗಾವ್ಯಾಟ್ ವಿದ್ಯುತ್ ಅನ್ನು ಕಳಿಸಲಾಗಿತ್ತು. ಆದರೆ ಬಾಕಿ ಉಳಿಸಿಕೊಂಡಿರುವ 6900 ಕೋಟಿ ರೂಪಾಯಿ ಹಣ ಪಾವತಿ ಮಾಡದೇ ಇರುವ ಕಾರಣ ಈ ತಿಂಗಳು ವಿದ್ಯುತ್ ಸರಬರಾಜಿನಲ್ಲಿ ಕಡಿತ ಮಾಡಿರುವ ಅದಾನಿ ಈ ತಿಂಗಳು ಕೇವಲ 700 ಮೆಗಾವ್ಯಾಟ್ ವಿದ್ಯುತ್ ಅನ್ನು ಮಾತ್ರವೇ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಿದ್ದಾರೆ. ಇದು ಬಾಂಗ್ಲಾದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
Bangarpete: ಬಂಗಾರಪೇಟೆ ಮನೆ ಕುಸಿಯಲು ಕಾರಣವೇನು? ನಾವು ಇದರಿಂದ ಏನು ಕಲಿಯಬಹುದು?
ಬಾಂಗ್ಲಾದೇಶದ ಮನೆಗಳಿಗೆ ಹಾಗೂ ಅವಶ್ಯಕ ವಸ್ತುಗಳ ತಯಾರಿಕೆಗೆ ಬೇಕಾಗುವಷ್ಟು ವಿದ್ಯುತ್ ಅನ್ನು ಮಾತ್ರವೇ ಬಾಂಗ್ಲಾದೇಶಕ್ಕೆ ಕಳಿಸಿರುವ ಗೌತಮ್ ಅದಾನಿ, ಉದ್ಯಮಗಳಿಗೆ ಬೇಕಾದ ವಿದ್ಯುತ್ ಅನ್ನು ಸರಬರಾಜು ಮಾಡಿಲ್ಲ. ಇದು ಬಾಂಗ್ಲಾದೇಶದ ಆರ್ಥಿಕತೆಯನ್ನು ಅಲುಗಾಡಿಸುತ್ತಿದೆ. ಗೌತಮ್ ಅದಾನಿ ಈ ಹಿಂದೆ ತಮ್ಮ ಬಾಕಿ ಬಿಲ್ ತೀರಿಸುವಂತೆ ಮನವಿ ಮಾಡಿದಾಗ ಈಗಿನ ಬಾಂಗ್ಲಾ ಸರ್ಕಾರ ಅದನ್ನು ನಿರಾಕರಿಸಿತ್ತು, ಅದಾನಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಪ್ರಯತ್ನವನ್ನು ಸಹ ಮಾಡಿತ್ತು. ಆದರೆ ಈಗ ಅದಾನಿಯ ಒಂದು ಹೊಡೆತದಿಂದ ಬಾಂಗ್ಲಾದ ಬುಡ ಅಲ್ಲಾಡುವಂತಾಗಿದೆ.